
ಬೆಂಗಳೂರು (ಆ.11) ರಾಜ್ಯ ರಾಜ್ಯಕೀಯದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಪಕ್ಷದ ವಿರುದ್ಧ, ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ ಸಚಿವ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ.ಸಚಿವ ಕೆಎನ್ ರಾಜಣ್ಣ ರಾಜೀನಾಮೆ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದ್ದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರವೇ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವುದು ಸ್ಪಷ್ಟವಾಗಿದೆ. ರಾಜಣ್ಣ ವಜಾ ಹಾಗೂ ರಾಹುಲ್ ಗಾಂಧಿ ಮತ ಕಳ್ಳತನ ಆರೋಪ ಕುರಿತು ರಾಜ್ಯ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್ ಟೀಕಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಶಿವಲಿಂಗೇ ಗೌಡ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ರಾಜಣ್ಣ ವಜಾ ವಿಚಾರ ಮಾತನಾಡುವ ಬಿಜೆಪಿಗರು, ಬಸನ ಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ ಯಾಕಾದ್ರೂ? ಅವರನ್ನು ಬಿಜೆಪಿ ಕೈಬಿಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಕೈಬಿಟ್ಟಿದ್ದು ಯಾಕೆ? ವಿರೋಧ ಪಕ್ಷದವರು ಮೊದಲು ಅವರ ಪಕ್ಷದ ವಿಚಾರ ನೋಡಿಕೊಳ್ಳಲಿ ಎಂದು ಶಿವಲಿಂಗೇಗೌಡ ತಿರುಗೇಟು ನೀಡಿದ್ದಾರೆ. ರಾಜಣ್ಣ ಅವರು ರಾಜೀನಾಮೆ ಕೊಟ್ಟಿಲ್ಲ. ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಶಿವಲಿಂಗೇಗೌಡ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ಸರ್ಕಾರ ಸಂಪುಟದಿಂದ ರಾಜಣ್ಣ ಅವರನ್ನು ಕೈಬಿಟ್ಟಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣ ಗೊತ್ತಿಲ್ಲ ಎಂದು ಶಿವಲಂಗೇ ಗೌಡ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದಿದ್ದರು. ಆದರೆ ಈಗಲೇ ಆಗಿದೆ ಎಂದಿದ್ದಾರೆ. ಈ ಮೂಲಕ ಇನ್ನು ಯಾವುದೇ ಕ್ರಾಂತಿ ಇಲ್ಲ. ಎಲ್ಲವೂ ಶಾಂತ ಎಂಬ ಪರೋಕ್ಷ ಸೂಚನೆಯನ್ನು ಶಿವಿಂಗೇಗೌಡ ನೀಡಿದ್ದಾರೆ.
ಕೆಎನ್ ರಾಜಣ್ಣ ಸಂಪುಟದಿಂದ ವಜಾ ಬೆಳವಣಿಗೆಗೆ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಕೆಎನ್ ರಾಜಣ್ಣ ರಾಜೀನಾಮೆ ಕೊಟ್ಟಿದ್ದಾರಾ, ಸಂಪುಟದಿಂದ ವಜಾ ಮಾಡಿದ್ದೋರೋ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ದ ರಾಹುಲ್ ಗಾಂಧಿ ಮಾಡಿದ ಮತ ಕಳ್ಳತನ ಆರೋಪ ಕುರಿತು ರಾಜಣ್ಣ ನೀಡಿದ್ದ ಹೇಳಿಕೆ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ತಂದಿತ್ತು. ಇದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿತ್ತು. ರಾಹುಲ್ ಗಾಂಧಿ ದೇಶಾದ್ಯಂತ ಮತ ಕಳ್ಳತನ ಆರೋಪದ ಮೂಲಕ ಬಿಜೆಪಿ ಹಣಿಯಲು ಯತ್ನಿಸುತ್ತಿದ್ದಾರೆ. ಆದರೆ ಈ ಆರೋಪಕ್ಕೆ ಕೆಎನ್ ರಾಜಣ್ಣ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದ್ದರು. ಕಾಂಗ್ರೆಸ್ ಆಡಳಿತದಲ್ಲೇ ಮತದಾರರ ಪಟ್ಟಿ ಮಾಡಲಾಗಿದೆ. ಅಂದು ಯಾವುದೇ ತಕರಾರು ಎತ್ತದೇ, ಇದೀಗ ದೊಡ್ಡ ಸಮಸ್ಯೆಯಾಗಿ ಬಿಂಬಿಸುತ್ತಿರುವುದು ಯಾಕೆ ಎಂದು ರಾಜಣ್ಣ ಪ್ರಶ್ನಿಸಿದ್ದರು. ಇದು ನೇರವಾಗಿ ರಾಹುಲ್ ಗಾಂಧಿಯನ್ನೇ ಧಿಕ್ಕರಿಸಿ ಮಾತನಾಡಿದಂತಿದೆ ಎಂದು ರಾಜಣ್ಣ ವಿರುದ್ಧ ಹೈಕಮಾಂಡ್ ಕಠಿಣ ಕ್ರಮ ಕೈಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ