ಬಿಜೆಪಿ ವಿರುದ್ಧ ವರ್ಷವಿಡೀ ಕಾಂಗ್ರೆಸ್‌ ಹೋರಾಟ

Kannadaprabha News   | Asianet News
Published : Jan 10, 2021, 08:34 AM IST
ಬಿಜೆಪಿ ವಿರುದ್ಧ ವರ್ಷವಿಡೀ ಕಾಂಗ್ರೆಸ್‌ ಹೋರಾಟ

ಸಾರಾಂಶ

ಸರ್ಕಾರ ಕಿತ್ತೊಗೆಯುವವರೆಗೂ ವಿಶ್ರಮಿಸಲ್ಲ | ಸಂಕಲ್ಪ ಸಮಾವೇಶದಲ್ಲಿ ಗುಡುಗು | ದೀಪ ಹಚ್ಚಲು ಅವಕಾಶ ನೀಡಿದ್ದೇವೆ, ಭ್ರಷ್ಟಾಚಾರ ನಡೆಸಲು ಅಲ್ಲ: ಶಿವಕುಮಾರ್‌

ಬೆಂಗಳೂರು(ಜ.10): ಕಾಂಗ್ರೆಸ್‌ ಪಕ್ಷದ ಪಾಲಿಗೆ 2021 ಹೋರಾಟದ ವರ್ಷ. ಇಡೀ ವರ್ಷ ಬಿಜೆಪಿ ಹಾಗೂ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಂಕಲ್ಪ ತೊಟ್ಟಿದ್ದೇವೆ. ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲೂ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ವರ್ಷವಿಡೀ ಹೋರಾಟ ಹಮ್ಮಿಕೊಳ್ಳುತ್ತೇವೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವವರೆಗೂ ವಿಶ್ರಮಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಘೋಷಿಸಿದ್ದಾರೆ.

ಶುಕ್ರವಾರ ಮೈಸೂರು ರಸ್ತೆಯ ಪೂರ್ಣಿಮಾ ಕನ್ವೆನ್ಷನ್‌ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗದ ಕಾಂಗ್ರೆಸ್‌ ಸಂಕಲ್ಪ ಸಮಾವೇಶದಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗದ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟಾಚಾರ ಮಿತಿ ಮೀರಿದೆ. ಬಿಜೆಪಿ ಸರ್ಕಾರಕ್ಕೆ ದೀಪ ಹಚ್ಚಲು, ಚಪ್ಪಾಳೆ ತಟ್ಟಲು ಅವಕಾಶ ನೀಡಿದ್ದೆವು. ಆದರೆ ಭ್ರಷ್ಟಾಚಾರ ನಡೆಸಲು ನಾವು ಅವಕಾಶ ಮಾಡಿಕೊಟ್ಟಿಲ್ಲ. ಭ್ರಷ್ಟಸರ್ಕಾರದ ವಿರುದ್ಧ ಯುದ್ಧ ಪ್ರಾರಂಭಿಸಬೇಕಿದೆ. ‘ಏಳಿ, ಎದ್ದೇಳಿ, ಹೋರಾಡಿ’ ಎಂಬ ವಾಣಿ ಅನುಸರಿಸಬೇಕು. ನಮ್ಮ ಗುರಿ ಮುಟ್ಟುವವರೆಗೆ ನಾವು ಹೋರಾಟ ಮಾಡಬೇಕು. ಹೋರಾಟದ ರೂಪುರೇಷೆಗಳನ್ನು ಚರ್ಚಿಸುವ ಸಲುವಾಗಿಯೇ ಈ ಸಭೆ ಕರೆದಿದ್ದೇವೆ. ಜಿಲ್ಲಾಧ್ಯಕ್ಷರು ಸಂಘಟಿತರಾಗಲು ಒಂದು ತಿಂಗಳು ಮಾತ್ರ ಕಾಲಾವಕಾಶ ನೀಡಲಾಗುವುದು ಎಂದರು.

ಸಂಕ್ರಾಂತಿ ಸಂಭ್ರಮಕ್ಕೆ ಕೊರೋನಾ ಕಂಟಕ!

ಈ ಹಿಂದೆ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಹಲವು ಕಾರ್ಯಕ್ರಮಗಳನ್ನು ಹಾಲಿ ಸರ್ಕಾರ ನಿಲ್ಲಿಸಿದೆ. ನಿಲ್ಲಿಸಿರುವ ಕಾರ್ಯಕ್ರಮ ಮತ್ತೆ ಪ್ರಾರಂಭಿಸಬೇಕು. ಇದರ ಬಗ್ಗೆಯೂ ಹೋರಾಟ ಮಾಡುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಜೊತೆಗೆ ಕೊರೋನಾ ಹೆಸರಿನಲ್ಲಿ ಕೋಟ್ಯಂತರ ರು. ಲೂಟಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ರು.ಗಳಲ್ಲಿ ರಾಜ್ಯಕ್ಕೆ ಏನೂ ಪ್ರಯೋಜನವಾಗಿಲ್ಲ. ಇದೆಲ್ಲವನ್ನೂ ಜನರ ಗಮನಕ್ಕೆ ತರಬೇಕು. ಜೊತೆಗೆ ಪಕ್ಷವನ್ನು ಬೂತ್‌ಮಟ್ಟದಿಂದ ಸಂಘಟಿಸಬೇಕು ಎಂದು ಕರೆ ನೀಡಿದರು.

ಸಿಎಂ ರಾಜೀನಾಮೆಗೆ ಡಿಕೆಶಿ, ಸಿದ್ದು ಆಗ್ರಹ

ಡಿ.ಕೆ. ಶಿವಕುಮಾರ್‌ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಷನ್‌ ಹಗರಣದ ಬಗ್ಗೆ ನ್ಯಾಯಾಲಯವೇ ಆದೇಶ ಮಾಡಿದೆ. ಲೋಕಾಯುಕ್ತ ತನಿಖೆಗೆ ವಹಿಸಿದಾಗಲೂ ಯಡಿಯೂರಪ್ಪ ರಾಜೀನಾಮೆ ನೀಡಿಲ್ಲ ಎಂದು ಕಿಡಿಕಾರಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ಅವರಿಗೆ ಮಾನ-ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಅನೇಕ ಹಗರಣಗಳಲ್ಲಿ ಯಡಿಯೂರಪ್ಪ ಸಿಕ್ಕಿ ಹಾಕಿಕೊಂಡಿದ್ದಾರೆ. ಬಿಡಿಎ ಆಯುಕ್ತ ಆ ಸ್ಥಾನಕ್ಕೆ ಬರಲು 12 ಕೋಟಿ ರು. ಕೊಟಿ ನೀಡಿರುವುದಾಗಿ ಖುದ್ದು ಹೇಳುತ್ತಾರೆ. ಇಂತಹ ಲಜ್ಜಗೆಟ್ಟಸರ್ಕಾರವನ್ನು ಕರ್ನಾಟಕ ಇತಿಹಾಸದಲ್ಲೇ ನೋಡಿಲ್ಲ ಎಂದರು.

ಠಾಣೆಗಳ ಎದುರು ಪ್ರತಿಭಟನೆ:

ಅನೇಕ ಪೊಲೀಸ್‌ ಠಾಣೆಗಳು ಬಿಜೆಪಿ ಕಚೇರಿಗಳಂತಾಗುತ್ತಿವೆ. ನಮ್ಮ ಕಾರ್ಯಕರ್ತರಿಗೆ ಪೊಲೀಸರು ಧಮ್ಕಿ ಹಾಕುತ್ತಿದ್ದಾರೆ. ಬಿಜೆಪಿಗೆ ಸೇರುವಂತೆ ಪೊಲೀಸರೇ ಒತ್ತಡ ತರುತ್ತಿದ್ದಾರೆ. ಇದರ ಬಗ್ಗೆಯೂ ನಾವು ಹೋರಾಟ ಮಾಡುತ್ತೇವೆ. ಪಂಚಾಯಿತಿ, ವಾರ್ಡ್‌ ಮಟ್ಟದ ಸಮಿತಿಗಳನ್ನು ರಚಿಸುತ್ತೇವೆ. ಮಹದೇವಪುರ, ಯಲಹಂಕ ಸೇರಿದಂತೆ ಹಲವು ಠಾಣೆಗಳ ಬಗ್ಗೆ ದೂರುಗಳು ಬಂದಿದ್ದು ಪರಿಶೀಲಿಸಿ ಠಾಣೆಗಳ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆಡಳಿತ ಯಂತ್ರ ಹಳಿ ತಪ್ಪಿದೆ- ಸಿದ್ದರಾಮಯ್ಯ

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಈ ವರ್ಷವನ್ನು ಸಂಘರ್ಷ ಹಾಗೂ ಹೋರಾಟದ ವರ್ಷ ಎಂದು ಕೆಪಿಸಿಸಿ ಅಧ್ಯಕ್ಷರು ಘೋಷಿಸಿದ್ದಾರೆ. ಹೀಗಾಗಿ ಕಾರ್ಯಕರ್ತರು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಯಡಿಯೂರಪ್ಪ ಅವರ ಸರ್ಕಾರದಲ್ಲಿ ವೈಫಲ್ಯಗಳ ಸರಮಾಲೆಯೇ ಇದೆ. ಸರ್ಕಾರ ಸತ್ತಿದ್ದು ಆಡಳಿತ ಯಂತ್ರ ಹಳಿ ತಪ್ಪಿದೆ. ಇವುಗಳನ್ನು ಮುಂದಿಟ್ಟುಕೊಂಡು ಹೋರಾಡಬೇಕು ಎಂದರು.

ನಾವು ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳದೆ ಇದ್ದಿದ್ದರೆ 14 ಶಾಸಕರು ಪಕ್ಷ ಬಿಡುತ್ತಿರಲಿಲ್ಲ. ಇನ್ನು ಮುಂದೆ ನಮ್ಮ ಸಿದ್ಧಾಂತಗಳು ಸ್ಪಷ್ಟವಾಗಿರಬೇಕು. ನಮ್ಮ ಹೋರಾಟ ನರೇಂದ್ರ ಮೋದಿ, ಅಮಿತ್‌ ಶಾ ವಿರುದ್ಧ ಅಲ್ಲ. ಬಿಜೆಪಿಯ ಕೋಮುವಾದ ಸಿದ್ಧಾಂತದ ವಿರುದ್ಧ ಹೋರಾಟ ಮಾಡಬೇಕು. ಸಿದ್ಧಾಂತದಲ್ಲಿ ಸ್ಪಷ್ಟತೆ ಬಂದರೆ ಮಾತ್ರ ಬಿಜೆಪಿ ಸೋಲಿಸಲು ಸಾಧ್ಯ. ಬಸವಣ್ಣನವರ ಅನುಭವ ಮಂಟಪದ ಶಿಲಾನ್ಯಾಸದ ವೇಳೆ ಸನಾತನ ಧರ್ಮದ ಮರುಸೃಷ್ಟಿಎಂದು ಹೇಳಿ ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಪರಿಷತ್‌ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌, ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ, ಸಲೀಂ ಅಹಮದ್‌, ಈಶ್ವರ್‌ ಖಂಡ್ರೆ, ಮಾಜಿ ಸಚಿವರಾದ ಆಂಜನೇಯ, ರಾಮಲಿಂಗಾರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!