
ಬೆಂಗಳೂರು (ಮೇ.23) : ಮೊದಲ ಹಂತದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು 8 ಸಚಿವರ ಆಯ್ಕೆ ಪ್ರಕ್ರಿಯೆ ಮುಗಿಸಿರುವ ಕಾಂಗ್ರೆಸ್ ಇದೀಗ ವಿಧಾನಸಭೆಯ ಸ್ಪೀಕರ್ ಆಯ್ಕೆಯತ್ತ ತನ್ನ ಗಮನ ಹರಿಸಿದೆ. ಆದರೆ ಎರಡನೇ ಹಂತದ ಸಂಪುಟ ವಿಸ್ತರಣೆ ಪ್ರಕ್ರಿಯೆಯೂ ಸಮೀಪದಲ್ಲೇ ಇರುವ ಕಾರಣ ಹಿರಿಯ ಶಾಸಕರೆಲ್ಲರೂ ಸ್ಪೀಕರ್ ಹುದ್ದೆ ಹೊಣೆ ಹೊರಲು ನಿರಾಕರಿಸುತ್ತಿರುವುದು ನಾಯಕತ್ವದ ಪಾಲಿಗೆ ತಲೆ ನೋವಾಗಿದೆ.
ಸ್ಪೀಕರ್ ಹುದ್ದೆಗೆ ಮೇ 24ರಂದು ಚುನಾವಣೆ ನಡೆಸಲು ಸಮಯ ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 24ರ ಬೆಳಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಆದರೆ, ಈ ಕ್ಷಣದವರೆಗೂ ಸ್ಪೀಕರ್ ಹುದ್ದೆ ಚುನಾವಣೆಗೆ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಕಾಂಗ್ರೆಸ್‌ನಲ್ಲಿ ಮೂಡಿಲ್ಲ. ಕಾಂಗ್ರೆಸ್ ನಾಯಕತ್ವ ಹಿರಿಯ ಶಾಸಕರಾದ ಎಚ್.ಕೆ. ಪಾಟೀಲ್, ಆರ್. ವಿ ದೇಶಪಾಂಡೆ(RV Deshpande), ಜಯಚಂದ್ರ ಅವರನ್ನು ಸ್ಪೀಕರ್ ಹುದ್ದೆಗೆ ಪರಿಗಣಿಸಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಸ್ಪೀಕರ್ ಆಗುವ ಅರ್ಹತೆ ನನಗೆ ಇಲ್ಲ- ಆರ್.ವಿ. ದೇಶಪಾಂಡೆ
ಆದರೆ, ಈ ಇಬ್ಬರು ನಾಯಕರು ಸ್ಪೀಕರ್ ಹುದ್ದೆ ವಹಿಸಿಕೊಳ್ಳುವ ಮನಸ್ಸು ಹೊಂದಿಲ್ಲ. ಬದಲಾಗಿ, ಸಚಿವರಾಗುವ ಬಯಕೆ ಹೊಂದಿದ್ದಾರೆ. ಈ ನಾಯಕರೊಂದಿಗೆ ಒಂದು ಹಂತದ ಚರ್ಚೆಯನ್ನು ಪಕ್ಷದ ನಾಯಕತ್ವ ಮಾಡಿದ್ದು, ಇಬ್ಬರು ಹುದ್ದೆ ನಿರಾಕರಿಸಿದ್ದಾರೆ. ಹೀಗಾಗಿ ಬಸವರಾಜ ರಾಯರೆಡ್ಡಿ, ಜೆ.ಡಿ. ಪಾಟೀಲ್‌ರಂತಹ ನಾಯಕರ ಹೆಸರು ಚರ್ಚೆಗೆ ಬಂದಿದೆ.
ಈ ಬಗ್ಗೆ ಚರ್ಚೆ ನಡೆಸಲು ರಾಜ್ಯ ಉಸ್ತುವಾರಿ ಸುರ್ಜೇವಾಲ (Randeep singh surjewala )ಸೋಮವಾರ ನಗರಕ್ಕೆ ಆಗಮಿಸಿದ್ದು, ಬಹುತೇಕ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಯಲಿದೆ. ಅನಂತರ ಮೇ 24ರ ಬೆಳಗ್ಗೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿ ಮತ ಹಾಕುವಂತೆ ಶಾಸಕರಿಗೆ ವಿಪ್ ಹೊರಡಿಸಲಾಗುತ್ತದೆ.
ಮತ್ತೆ ಸಚಿವ ಹುದ್ದೆ ಆಕಾಂಕ್ಷೆ ಬಿಚ್ಚಿಟ್ಟದೇಶಪಾಂಡೆ
\ ಬೆಂಗಳೂರು (ಮೇ.23) ನಾನೀಗ ಹಂಗಾಮಿ ಸ್ಪೀಕರ್ ಅಷ್ಟೆ. ಪೂರ್ಣಾವಧಿ ಸ್ಪೀಕರ್ ಯಾರಾಗಬೇಕೆಂದು ಪಕ್ಷ ತೀರ್ಮಾನಿಸುತ್ತದೆ. ನಾನೇನಾದರೂ ಪೂರ್ಣಾವಧಿ ಸ್ಪೀಕರ್ ಆಗಬೇಕಾದ ಪರಿಸ್ಥಿತಿ ಬಂದರೆ ಆಗ ಮಾತನಾಡುತ್ತೇನೆ. ಈಗೇನು ಮಾತನಾಡುವುದಿಲ್ಲ ಎಂದು ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನೇ ಪೂರ್ಣಾವಧಿ ಸ್ಪೀಕರ್ ಆಗಿಸಲು ನಿಮ್ಮ ಪಕ್ಷದಲ್ಲಿ ಪ್ರಯತ್ನ ನಡೆಸಿದೆಯಂತಲ್ಲಾ ಎಂಬ ಪ್ರಶ್ನೆಗೆ, ಇದೆಲ್ಲಾ ಕಟ್ಟುಕಥೆ. ನಿಮಗೆ (ಮಾಧ್ಯಮದವರಿಗೆ) ನಾನು ಸ್ಪೀಕರ್ ಆಗಬೇಕೆಂಬ ಮನಸ್ಸಿದೆಯಾ? ನನಗಂತೂ ಅಂತಹ ಯಾವುದೇ ಮಾಹಿತಿ ಇಲ್ಲ. ನಾನು 1983ರಿಂದ ವಿಧಾನಸಭೆಯಲ್ಲಿ ಇದ್ದೇನೆ. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲರಿಂದ ಹಿಡಿದು ಎಂಟು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಜನರ ಮನಸ್ಸಿನಲ್ಲಿ ನಾನಿದ್ದೇನೆ. ಜನ ನನ್ನಿಂದ ಸೇವೆ ಬÜಯಸಿದ್ದಾರೆ ಎಂದು ಹೇಳುವ ಮೂಲಕ ತಾವು ಸ್ಪೀಕರ್ ಹುದ್ದೆಯ ಆಕಾಂಕ್ಷಿ ಅಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.
ಸಮಸ್ಯೆಗೆ ಸ್ಪಂದಿಸದ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ: ಆರ್.ವಿ. ದೇಶಪಾಂಡೆ
ತಾವು ಸಚಿವ ಸ್ಥಾನದ ಆಕಾಂಕ್ಷಿಯಾ ಎಂಬ ಪ್ರಶ್ನೆಗೆ, ನಾನು ಯಾವ ಆಕಾಂಕ್ಷಿಯೂ ಅಲ್ಲ ಎಂದರು. ಒಂದು ವೇಳೆ ಪಕ್ಷ ಸಚಿವ ಸ್ಥಾನ ಕೊಟ್ಟರೆ ಮಾಡಬೇಕಾಗುತ್ತದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಸದ್ಯ ನನಗೆ ರಾಜ್ಯಪಾಲರು ಹಂಗಾಮಿ ಸ್ಪೀಕರ್ ಆಗಿ ಪ್ರಮಾಣವಚನ ಕೊಟ್ಟಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ