
ಉಡುಪಿ(ಜ.24): ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಮತ್ತು ಸ್ಥಳೀಯ ಶಾಸಕ ಕೆ.ರಘಪತಿ ಭಟ್ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.
ನಗರಸಭೆಯ ರಸ್ತೆ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಉದ್ಘಾಟಿಸುವ ಸಮಾರಂಭಕ್ಕೆ ತಮಗಾಗಲಿ, ನಗರಸಭಾ ಸದಸ್ಯರಿಗಾಗಲಿ ಆಹ್ಪಾನ ನೀಡದೇ ಶಿಷ್ಟಾಚಾರ ಉಲ್ಲಂಘನೆ ನಡೆಸಿದ ಬಗ್ಗೆ ಸ್ಥಳೀಯ ಶಾಸಕ ಕೆ.ರಘಪತಿ ಭಟ್ ಸಾರ್ವಜನಿಕವಾಗಿಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ನಗರೋತ್ಥಾನ ನಿಧಿಯ 35 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾದ ವಿವಿಧ ರಸ್ತೆಗಳನ್ನು ಇಂದು ಸಚಿವೆ ಜಯಮಾಲ ಉದ್ಘಾಟಿಸಿದರು.
ಉದ್ಘಾಟನೆ ನಡೆಯುವ ಸ್ಥಳಗಳಲ್ಲೆಲ್ಲಾ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಭಾವಚಿತ್ರಗಳಿರುವ, ಕೈ ಚಿಹ್ನೆ ಇರುವ ಭಾರೀ ಬ್ಯಾನರುಗಳನ್ನು ಹಾಕಲಾಗಿತ್ತು.
ಕಕ್ಕುಂಜೆ ವಾರ್ಡಿನಲ್ಲಿ ರಸ್ತೆ ಉದ್ಘಾಟನೆ ನಡೆಯುವ ಸ್ಥಳಕ್ಕೆ ಮಧ್ಯಾಹ್ನ 3 ಗಂಟೆಗೆ ಶಾಸಕ ಕೆ.ರಘುಪತಿ ಭಟ್ ಬಂದಾಗ ಅದಾಗಲೇ ಉದ್ಘಾಟನೆ ನಡೆದು ಸಚಿವೆ ವಾಪಸ್ಸು ಹೊರಟಿದ್ದರು.
ಇದರಿಂದ ಕೆರಳಿದ ಶಾಸಕ ಕೆ.ರಘಪತಿ ಭಟ್, ನಗರದ ಜನಪ್ರತಿನಿಧಿಯಾಗಿರುವ ತಮ್ಮನ್ನು ಅಧಿಕೃತವಾಗಿ ಉದ್ಘಾಟನಾ ಸಮಾರಂಭಕ್ಕೆ ಕರೆದಿಲ್ಲ. ಕೆಲವು ಗಂಟೆಗಳ ಮೊದಲು ಸಚಿವೆ ಅವರ ಆಪ್ತ ಕಾರ್ಯದರ್ಶಿ ಕರೆ ಮಾಡಿ ಆಹ್ಪಾನಿಸಿದ್ದಾರೆ. ಹಾಗಿದ್ದರೇ ಶಾಸಕನಾದ ನನಗೇನೂ ಗೌರವ ಇಲ್ಲವೇ? ಎಂದು ಹರಿಹಾಯ್ದಿದ್ದಾರೆ.
ನಗರಸಭೆಗೆ ಜನರಿಂದ ಆಯ್ಕೆಯಾದ 35 ಕೌನ್ಸಿಲರುಗಳಿದ್ದಾರೆ ಅವರಿಗಾದರೂ ಹೇಳಿಲ್ಲ, ಉಡುಪಿಯವರೇ ಆದ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನೂ ಕರೆದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವೆ ಜಯಮಾಲ, ತಮಗೇನೂ ಗೊತ್ತಿಲ್ಲ, ನನಗೂ ಜಿಲ್ಲಾಧಿಕಾರಿ ಸಮಯ ಇದ್ದಾಗ ರಸ್ತೆಗಳನ್ನು ಉದ್ಘಾಟಿಸಿ ಅಂತ ಹೇಳಿದ್ದರು ಎಂದು ಸಮಜಾಯಿಷಿ ನೀಡಿದರು.
ಕೊನೆಗೆ ಸಚಿವೆ ಇದು ಅಧಿಕಾರಿಗಳಿಂದ ಆಗಿರುವ ತಪ್ಪು, ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಮುಂದಿನ ಕಾಮಗಾರಿ ಉದ್ಘಾಟನೆಗೆ ತೆರಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ