ಫೈಟ್ ಶಾಸಕ ಗಣೇಶ್ ಬಗ್ಗೆ ಜಮೀರ್ ಅಹಮದ್ ಹೇಳಿದ್ದೇನು..?

Published : Jan 23, 2019, 10:26 AM IST
ಫೈಟ್ ಶಾಸಕ ಗಣೇಶ್ ಬಗ್ಗೆ ಜಮೀರ್ ಅಹಮದ್ ಹೇಳಿದ್ದೇನು..?

ಸಾರಾಂಶ

ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗಣೇಶ್ ನಾಪತ್ತೆಯಾಗಿದ್ದು, ಆನಂದ್ ಸಿಂಗ್ ಒಪ್ಪಿದಲ್ಲಿ ಗಣೇಶ್ ಕರೆತರಲಾಗುವುದು ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ. 

ಬೆಂಗಳೂರು :  ರೆಸಾರ್ಟ್‌ನಲ್ಲಿ ಸಹ ಶಾಸಕ ಗಣೇಶ್‌ ಅವರಿಂದ ಹಲ್ಲೆಗೊಳಗಾಗಿರುವ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಅವರಿಗೆ ಇನ್ನೂ ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತದೆ.

ಮಂಗಳವಾರ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌, ಸಂಸದ ಡಿ.ಕೆ.ಸುರೇಶ್‌, ಸಚಿವ ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ವಿವಿಧ ನಾಯಕರು ಮಂಗಳವಾರ ಅಪೊಲೋ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಆನಂದ್‌ ಸಿಂಗ್‌ ಆರೋಗ್ಯ ವಿಚಾರಿಸಿದರು.

ಆಪರೇಷನ್‌ ಕಮಲದಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್‌ ಇತ್ತೀಚೆಗೆ ತನ್ನೆಲ್ಲಾ ಶಾಸಕರನ್ನು ಬಿಡದಿ ಬಳಿಯ ಈಗಲ್‌ಟನ್‌ ರೆಸಾರ್ಟ್‌ಗೆ ಕರೆದೊಯಿದ್ದಾಗ ಶಾಸಕ ಗಣೇಶ್‌ ಜೊತೆ ನಡೆದ ಮಾರಾಮಾರಿಯಲ್ಲಿ ಆನಂದ್‌ ಸಿಂಗ್‌ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಪಕ್ಷದ ವಿವಿಧ ಗಣ್ಯರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌.ಕೆ.ಪಾಟೀಲ್‌, ಶಾಸಕರ ನಡುವಿನ ಮಾರಾಮಾರಿ ಒಂದು ದುರ್ದೈವದ ಘಟನೆ. ಈ ರೀತಿ ಆಗಬಾರದಿತ್ತು. ಘಟನೆಯಿಂದ ನನಗೆ ವೈಯಕ್ತಿಕವಾಗಿ ನೋವಾಗಿದೆ. ಪಕ್ಷದ ಮಟ್ಟದಲ್ಲಿಯೂ ಇದು ನೋವಿನ ಸಂಗತಿ. ಆನಂದ್‌ಸಿಂಗ್‌ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಒಂದು ಕಣ್ಣಿಗೆ ಸ್ವಲ್ಪ ಗಾಯವಾಗಿದೆ. ಮತ್ತೊಂದು ಕಣ್ಣಿನಿಂದ ನೋಡುತ್ತಾರೆ. ನೋವು ಕಡಿಮೆ ಆಗಿದೆ ಎಂದು ಹೇಳಿದರು. ಘಟನೆ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡಲು ಇಷ್ಟಪಡುವುದಿಲ್ಲ ಎಂದು ತಿಳಿಸಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಆನಂದ್‌ಸಿಂಗ್‌ ಇನ್ನೂ ನಾಲ್ಕು ದಿನ ಚಿಕಿತ್ಸೆ ಮುಂದುವರೆಸುವುದಾಗಿ ವೈದ್ಯರು ಹೇಳಿದ್ದಾರೆ. ನಂತರ ಆಸ್ಪತ್ರೆಯಿಂದ ಬಿಡುಗಡೆ ಬಗ್ಗೆ ನಿರ್ಧರಿಸಲಿದ್ದಾರೆ. ಭೇಟಿ ಸಂದರ್ಭದಲ್ಲಿ ಸುಮಾರು ಅರ್ಧಗಂಟೆ ಕಾಲ ಆನಂದ್‌ಸಿಂಗ್‌ ನನ್ನೊಂದಿಗೆ ಮಾತನಾಡಿದರು. ತಮ್ಮ ಮತ್ತು ಶಾಸಕ ಗಣೇಶ್‌ ನಡುವಿನ ಗಲಾಟೆ ಕುರಿತು ಮಾತನಾಡಿದ್ದಾರೆ ಎಂದರು.

ಘಟನೆ ಬಳಿಕ ಶಾಸಕ ಗಣೇಶ್‌ ನಾಪತ್ತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸುರೇಶ್‌, ಅದೆಲ್ಲ ಊಹಾಪೋಹ ಎಂದರು. ಹಾಗಾದರೆ ಗಣೇಶ್‌ ಎಲ್ಲಿದ್ದಾರೆ, ಪಕ್ಷದ ಜೊತೆ ಸಂಪರ್ಕದಲ್ಲಿದ್ದಾರಾ ಎಂಬ ಪ್ರಶ್ನೆಗೆ, ನಾನು ಸಿದ್ಧಗಂಗಾ ಮಠಕ್ಕೆ ಹೋಗಿದ್ದೆ ಶಿವಕುಮಾರ ಸ್ವಾಮೀಜಿ ಅವರ ದರ್ಶನ ಪಡೆದು ಇಲ್ಲಿಗೆ ಬಂದಿದ್ದೇನೆ. ಗಣೇಶ್‌ ಬಗ್ಗೆ ನನಗೆ ಮಾಹಿತಿ ಇಲ್ಲ, ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿರುವ ಬಗ್ಗೆಯೂ ಗೊತ್ತಿಲ್ಲ ಎಂದರು.

ಆನಂದ್‌ ಒಪ್ಪಿದರೆ ಗಣೇಶ್‌ ಭೇಟಿ- ಜಮೀರ್‌:  ಆನಂದ್‌ ಸಿಂಗ್‌ ಒಪ್ಪಿದರೆ ಗಣೇಶ್‌ ಅವರನ್ನು ಕರೆತಂದು ಮಾತನಾಡಿಸುತ್ತೇನೆ ಎಂದು ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಬಗ್ಗೆ ಶಾಸಕ ಗಣೇಶ್‌ ಜೊತೆ ಮಾತನಾಡಿದ್ದೀನಿ, ಸ್ವತಃ ನನಗೆ ಕರೆ ಮಾಡಿದ ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ. ಇಂತಹ ಘಟನೆ ಆಗಬಾರದಿತ್ತು ಎಂಬ ನೋವು ಅವರಿಗೂ ಇದೆ ಎಂದರು.

ಆನಂದ್‌ ಸಿಂಗ್‌ ಭೇಟಿ ವೇಳೆ ರಾಜಕೀಯವಾಗಿ ಏನೂ ಮಾತನಾಡಿಲ್ಲ. ಆರೋಗ್ಯ ವಿಚಾರಿಸಿದೆ, ಸ್ವತಃ ಅವರೇ ಒಂದು ಗಂಟೆ ನಡೆದಾಡಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದರು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ