ಕೆನ್ನೆ ಸವರಿ ನಮಿಸಿದ ಸಚಿವ ಡಿ.ಕೆ.ಶಿವಕುಮಾರ್

By Web DeskFirst Published Jan 23, 2019, 10:08 AM IST
Highlights

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೂಗುಚ್ಛವಿಟ್ಟು ನಮಿಸಿದ ಬಳಿಕ ಶ್ರೀಗಳ ಕೆನ್ನೆ ಮತ್ತು ಗಲ್ಲ ಸವರಿ ತಮ್ಮ ಹಣೆಗೆ ಒತ್ತಿಕೊಂಡಿದ್ದು ವಿಶೇಷವಾಗಿತ್ತು

ತುಮಕೂರು: ‘ನಡೆದಾಡುವ ದೇವರು’ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಹೊರ ರಾಜ್ಯ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಸೋಮವಾರ ಮಧ್ಯಾಹ್ನದಿಂದಲೇ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ರಾಜ್ಯದ ಎಲ್ಲಾ ದಿಕ್ಕುಗಳಿಂದಲೂ ಭಕ್ತರು ಸಿದ್ಧಗಂಗೆ ಕಡೆ ಮುಖ ಮಾಡಿದರು. 

ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ 15 ಲಕ್ಷಕ್ಕೂ ಹೆಚ್ಚು ಮಂದಿ ಶ್ರೀಗಳ ಶಿವೈಕ್ಯ ಶರೀರದ ದರ್ಶನ ಮಾಡಿದರು. ಸಾಗರೋಪಾದಿಯಲ್ಲಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಪೂರ್ತಿ 24 ಗಂಟೆಗಳಿಗೂ ಹೆಚ್ಚು ಕಾಲ  ಭಕ್ತರ ದರ್ಶನಕ್ಕೆ ಶ್ರೀಗಳ ಪಾರ್ಥಿವ ಶರೀರವನ್ನು ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಇರಿಸಲಾಗಿತ್ತು. 

ಸೋಮವಾರ ಸಂಜೆಯಿಂದ ಆರಂಭವಾದ ದರ್ಶನ ಮಂಗಳವಾರ ಸಂಜೆಯ ವರೆಗೂ ನಡೆಯಿತು. ಉತ್ತರ ಕರ್ನಾಟಕ, ಹಳೇ ಮೈಸೂರು, ಮಧ್ಯ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹೀಗೆ ರಾಜ್ಯದ ಎಲ್ಲ ಭಾಗಗಳಿಂದಲೂ ಭಕ್ತರು ಸಿದ್ಧಗಂಗೆಗೆ ಬಂದರು. ಕೆಲವರು ಸ್ವಂತ ವಾಹನಗಳನ್ನು ಮಾಡಿಕೊಂಡು ಬಂದರೆ ಮತ್ತೆ ಕೆಲವರು ಬಸ್, ಲಾರಿ, ರೈಲುಗಳಲ್ಲಿ ಸಿದ್ಧಗಂಗೆಯತ್ತ ಧಾವಿಸಿದರು.

ಕೆನ್ನೆ ಸವರಿ ನಮಿಸಿದ ಡಿಕೆಶಿ :  ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದ ಬಳಿಕ ಗಣ್ಯರು ಹೂಗುಚ್ಛ ಇಟ್ಟು ನಮನ ಸಲ್ಲಿಸಿದರು. ಆದರೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೂಗುಚ್ಛವಿಟ್ಟು ನಮಿಸಿದ ಬಳಿಕ ಶ್ರೀಗಳ ಕೆನ್ನೆ ಮತ್ತು ಗಲ್ಲ ಸವರಿ ತಮ್ಮ ಹಣೆಗೆ ಒತ್ತಿಕೊಂಡಿದ್ದು ವಿಶೇಷವಾಗಿತ್ತು

click me!