ಗೋಲಿಬಾರ್‌ ನ್ಯಾಯಾಂಗ ತನಿಖೆಯಾಗದೆ ಬಿಡಲ್ಲ: ಸಿದ್ದರಾಮಯ್ಯ

By Kannadaprabha News  |  First Published Dec 24, 2019, 8:47 AM IST

ಮಂಗಳೂರು ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 


ಮಂಗಳೂರು [ಡಿ.24]:  ಮಂಗಳೂರಿನಲ್ಲಿ ನಡೆದದ್ದು ಉದ್ದೇಶಪೂರ್ವಕ ಗೋಲಿಬಾರ್‌. ಇದರ ಹಿಂದೆ ಪೊಲೀಸರು ಹಸೀ ಸುಳ್ಳುಗಳು, ಕಟ್ಟುಕತೆಗಳನ್ನು ಕಟ್ಟಿದ್ದಾರೆ. ಸತ್ಯ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯೇ ಆಗಬೇಕು. ಅದೂ ಹಾಲಿ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲೇ ನಡೆಯಬೇಕು ಎಂದು ಮಾಜಿ ಸಿಎಂ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮಂಗಳೂರಿಗೆ ಸೋಮವಾರ ಆಗಮಿಸಿದ ಅವರು, ಗೋಲಿಬಾರ್‌ನಿಂದ ಮೃತಪಟ್ಟಅಬ್ದುಲ್‌ ಜಲೀಲ್‌ ಮತ್ತು ನೌಶೀನ್‌ ಮನೆಗೆ ಭೇಟಿ ನೀಡಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸದಿದ್ದರೆ ಕಾಂಗ್ರೆಸ್‌ ಗಂಭೀರವಾದ ಹೋರಾಟ ಕೈಗೆತ್ತಿಕೊಳ್ಳಲಿದೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲೂ ಚರ್ಚೆ ನಡೆಸಲಾಗುವುದು. ಇದನ್ನು ಇಲ್ಲಿಗೆ ಬಿಡುವ ಮಾತೇ ಇಲ್ಲ ಎಂದು ಎಚ್ಚರಿಸಿದರು.

Latest Videos

undefined

ರಾಜ್ಯ ಸರ್ಕಾರ ಈ ಪ್ರಕರಣದ ಸಿಐಡಿ ತನಿಖೆ ಮಾಡುವುದಾಗಿ ಹೇಳಿದೆ. ಸಿಐಡಿಯಲ್ಲಿ ಇರೋರು ಪೊಲೀಸರೇ. ಪೊಲೀಸರೇ ಪೊಲೀಸರ ತನಿಖೆ ನಡೆಸಿದರೆ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವೇ? ಇದು ಕಣ್ಣೊರೆಸುವ ತಂತ್ರ. ತಪ್ಪು ಮಾಡಿದ ಪೊಲೀಸರ ರಕ್ಷಣೆಗಾಗಿ ಮಾಡಿದ ರಾಜ್ಯ ಸರ್ಕಾರದ ತಂತ್ರಗಾರಿಕೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದರು.

ಕಟ್ಟುಕತೆ ಹೆಣೆದದ್ದೇಕೆ: ಗೋಲಿಬಾರ್‌ ನಡೆದ ಜಾಗದಲ್ಲಿ ಕೇವಲ 150- 200 ಪ್ರತಿಭಟನಾಕಾರರು ಇದ್ದರೂ 6 ಸಾವಿರ ಮಂದಿ ಇದ್ದರು ಎಂದು ಪೊಲೀಸ್‌ ಅಧಿಕಾರಿ ಸುಳ್ಳು ಹೇಳಿದ್ದಾರೆ. ಪ್ರತಿಭಟನಾಕಾರರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ, ಬೆಂಕಿ ಹಾಕಲು ಬಂದಿದ್ದರು ಎಂದೂ ಹೇಳಿದ್ದಾರೆ. ಅದು ನಿಜವೇ ಆಗಿದ್ದರೆ ಪೊಲೀಸ್‌ ಠಾಣೆ ಹತ್ತಿರ ಯಾಕೆ ಫೈರಿಂಗ್‌ ನಡೆದಿಲ್ಲ? ಕೇರಳದಿಂದ ಬಂದವರ ಗಲಭೆ ಎಂದವರು ಒಬ್ಬ ಕೇರಳಿಗನನ್ನಾದರೂ ಬಂಧಿಸಿದ್ದಾರಾ? ಇವೆಲ್ಲ ಹಸೀ ಸುಳ್ಳುಗಳಲ್ಲವೇ? ಇಡೀ ಘಟನೆಯ ಸುತ್ತ ಪೊಲೀಸರು ಕಟ್ಟುಕತೆಗಳನ್ನೇ ಕಟ್ಟಿದ್ದಾರೆ. ಇವುಗಳ ಹಿಂದಿರುವ ಸತ್ಯ ಹೊರಬರಬೇಡವೇ? ಅದಕ್ಕಾಗಿ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಸಿದ್ದು, ರವಿ, ಶೋಭಾ ಟ್ವೀಟರ್‌ ವಾರ್‌!...

ಸುಪ್ರೀಂ ನಿರ್ದೇಶನ ಪಾಲಿಸಿಲ್ಲ: ಮಂಗಳೂರಿನಲ್ಲಿ ಹಿಂಸೆ ಆರಂಭವಾದದ್ದೇ ಪೊಲೀಸರಿಂದ ಮತ್ತು ಸರ್ಕಾರದಿಂದ. ಗೋಲಿಬಾರ್‌ ಮೂಲಕ ಇಡೀ ಮಂಗಳೂರಿನಲ್ಲಿ ಭಯದ ವಾತಾವರಣ ಸೃಷ್ಟಿಮಾಡಿದ್ದಾರೆ. ಯಾವ ಸಂದರ್ಭಗಳಲ್ಲಿ ಹೇಗೆ ಗೋಲಿಬಾರ್‌ ಮಾಡಬೇಕು, ಯಾವಾಗ ಸೆ.144 ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಸ್ಪಷ್ಟನಿರ್ದೇಶನವಿದೆ. ಅಂತಹ ಯಾವ ಪರಿಸ್ಥಿತಿಯೂ ಮಂಗಳೂರಿನಲ್ಲಿ ಉದ್ಭವಿಸಿರಲಿಲ್ಲ. ಅಂಗಡಿಗಳಿಗೆ ಕಲ್ಲು ಬೀಸಿಲ್ಲ, ಅಂಗಡಿ, ಮುಂಗಟ್ಟುಗಳಿಗೆ ಬೆಂಕಿ ಹಾಕಿಲ್ಲ. ಜನರಿಗೆ ಎಚ್ಚರಿಕೆಯ ಸಂದೇಶ ನೀಡಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿಲ್ಲ. ವಾಟರ್‌ ಜೆಟ್‌ ಹಾರಿಸಿಲ್ಲ. ಗೋಲಿಬಾರ್‌ ಮಾಡುವ ಮೊದಲು ಘೋಷಣೆಯನ್ನೇ ಮಾಡಿಲ್ಲ. ಏಕಾಏಕಿ ಜನರ ಮೇಲೆ ಗುಂಡು ಹಾರಿಸಿದ್ದಾರೆ. ನೂರಿನ್ನೂರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಸುತ್ತುವರಿದು ಗಲಭೆ ನಿಯಂತ್ರಣ ಮಾಡಲು ಸಾಧ್ಯವಿತ್ತು. ಇದು ಜನರನ್ನು ಕೊಲ್ಲಲೆಂದೇ ಮಾಡಿದ ಉದ್ದೇಶಪೂರ್ವಕ ಗೋಲಿಬಾರ್‌ ಎಂದು ಆರೋಪಿಸಿದರು.

ಸರ್ಕಾರ ಇದೆಯಾ?: ಆಸ್ಪತ್ರೆಯಲ್ಲಿ ರೋಗಿಗಳಿದ್ದಾರೆ ಎನ್ನುವ ಸೂಕ್ಷ್ಮತೆಯ ಅರಿವಿದ್ದೂ ಪೊಲೀಸರು ಜನರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಆಸ್ಪತ್ರೆಯೊಳಗೇ ಟಿಯರ್‌ ಗ್ಯಾಸ್‌ ಸಿಡಿಸಿದ್ದಾರೆ. ಇದೇನು ಪೊಲೀಸ್‌ ರಾಜ್ಯ ಎಂದು ತಿಳ್ಕೊಂಡಿದ್ದಾರಾ? ನಾಗರಿಕ ಸರ್ಕಾರ ಇದೆಯಾ ಇಲ್ಲಿ ಎಂದು ಕಿಡಿಕಾರಿದ ಸಿದ್ದರಾಮಯ್ಯ, ಇಷ್ಟೆಲ್ಲ ಆದರೂ ಮುಖ್ಯಮಂತ್ರಿ ಪೊಲೀಸರಿಗೆ ಶಹಬ್ಬಾಸ್‌ಗಿರಿ ನೀಡುತ್ತಾರೆ. ಸಿಎಂ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಘಟನೆಯ ಜವಾಬ್ದಾರಿ ಹೊರಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಕಾಲದಲ್ಲೇ ಏಕೆ ಗೋಲಿಬಾರ್‌: ನಾನು ಸಿಎಂ ಆಗಿದ್ದಾಗ ಗೋಲಿಬಾರ್‌ ಎಲ್ಲೂ ನಡೆದಿಲ್ಲ. ಪೊಲೀಸರ ಬಳಿ ಬಂದೂಕಿದೆ ಎನ್ನುವುದೇ ಮರೆತುಹೋಗಿತ್ತು. ಆದರೆ ಯಡಿಯೂರಪ್ಪ ಬಂದ ಕೂಡಲೆ ಗೋಲಿಬಾರ್‌ ಆಗುತ್ತದೆ. ಹಿಂದೆ ಹಾವೇರಿಯಲ್ಲಿ ಗೋಲಿಬಾರ್‌ ಮಾಡಿದರು, ಚಚ್‌ರ್‍ ಮೇಲೆ ದಾಳಿಗಳು ನಡೆದವು. ಈಗ ಮತ್ತೆ ಗೋಲಿಬಾರ್‌ ನಡೆಸಿ ಇಬ್ಬರನ್ನು ಕೊಂದಿದ್ದಾರೆ. ಬಿಜೆಪಿ ಕಾಲದಲ್ಲೇ ಏಕೆ ಗೋಲಿಬಾರ್‌ ನಡೆಯುತ್ತದೆ ಎಂದು ಪ್ರಶ್ನಿಸಿದರು.

ಪ್ರತಿಭಟನೆ ಹತ್ತಿಕ್ಕಲು ಸೆಕ್ಷನ್‌: ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿಸಿ ರಾಜ್ಯದಲ್ಲಿ ಮಾತ್ರ ಪ್ರತಿಭಟನೆ ನಡೆಯುತ್ತಿರುವುದಲ್ಲ, ಇಡೀ ದೇಶದಲ್ಲೇ ನಡೆಯುತ್ತಿದೆ. ಆದರೆ ಇಡೀ ರಾಜ್ಯಕ್ಕೆ ನಿಷೇಧಾಜ್ಞೆ ಜಾರಿಗೊಳಿಸುವ ಪರಿಸ್ಥಿತಿ ಇರಲಿಲ್ಲ. ಅನಗತ್ಯವಾಗಿ ಹೇರಿದ್ದಾರೆ. ಸೆ.144 ಇಲ್ಲದೇ ಇರುತ್ತಿದ್ದರೆ ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಹೋಗುತ್ತಿದ್ದರು. ಜನರು ಸರ್ಕಾರ ಹೇಳಿದ್ದನ್ನೆಲ್ಲ ಒಪ್ಪಬೇಕು ಎನ್ನುವುದು ಯಾವ ಕಾನೂನಿನಲ್ಲೂ ಇಲ್ಲ. ಒಪ್ಪದಿರೋದು ಪ್ರಜಾಪ್ರಭುತ್ವದ ಮೂಲತತ್ವ. ಆದರೆ ಪ್ರತಿಭಟನೆಯ ಹಕ್ಕು ಹತ್ತಿಕ್ಕಲು ಸೆಕ್ಷನ್‌ 144 ಹೇರಿಕೆ ಮಾಡಿದ್ದೇ ವಿನಾ ಬೇರೆ ಯಾವ ಕಾರಣವೂ ಇಲ್ಲ ಎಂದರು.

ಬೆಂಗಳೂರಿನಲ್ಲಿ ಸೆಕ್ಷನ್‌ ಇದ್ದರೂ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಯಾವ ಲಾಠಿಚಾಜ್‌ರ್‍ ಕೂಡ ಇಲ್ಲದೆ ಬೆಂಗಳೂರಿನಲ್ಲಿ ಅದು ಸಾಧ್ಯವಾಗುವುದಾದರೆ ಮಂಗಳೂರಿನಲ್ಲಿ ಏಕೆ ಸಾಧ್ಯವಿರಲಿಲ್ಲ? ನೂರಿನ್ನೂರು ಮಂದಿಯ ಪ್ರತಿಭಟನೆ ಎದುರಿಸಲು ಪೊಲೀಸರ ಕೈಯಲ್ಲಿ ಆಗಲಿಲ್ಲವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಸತ್ತವರ ಮೇಲೆ ಎಫ್‌ಐಆರ್‌ ನೋಡಿಲ್ಲ: ಗೋಲಿಬಾರ್‌ನಲ್ಲಿ ಸತ್ತವರ ಮೇಲೂ ಎಫ್‌ಐಆರ್‌ ದಾಖಲಿಸಿದ್ದಾರೆ. ಸತ್ತವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದನ್ನು ಎಲ್ಲೂ ನೋಡಿಲ್ಲ. ಇದು ಮಾತ್ರವಲ್ಲದೆ, ವಿದ್ಯಾರ್ಥಿಗಳು, ಕಾರ್ಮಿಕರ ಮೇಲೂ ಕೇಸು ಹಾಕಿದ್ದಾರೆ. ಪೊಲೀಸರು ಹೆಸರಿಸಿರುವ ಹೆಚ್ಚಿನವರು ನಿರಪರಾಧಿಗಳು. ಕೂಡಲೆ ಅಮಾಯಕರ ಮೇಲಿನ ಪ್ರಕರಣವನ್ನು ಕೈಬಿಡಬೇಕು. ಅವರಿಗೆ ತೊಂದರೆ ನೀಡಕೂಡದು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇನ್ಸ್‌ಪೆಕ್ಟರ್‌ ಅಮಾನತಿಗೆ ಆಗ್ರಹ: ಗೋಲಿಬಾರ್‌ ಸಂದರ್ಭ ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರು ‘ಇಷ್ಟುಗುಂಡು ಹೊಡೆದರೂ ಯಾರೂ ಸತ್ತಿಲ್ಲ’ ಎಂದು ಹೇಳಿದ್ದು ಏನನ್ನು ಸೂಚಿಸುತ್ತದೆ? ಜನರನ್ನು ಕೊಲ್ಲುವ ಉದ್ದೇಶದಿಂದಲೇ ಗೋಲಿಬಾರ್‌ ನಡೆಸಿರುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಆ ಅಧಿಕಾರಿಯನ್ನು ತಕ್ಷಣದಿಂದ ಅಮಾನತುಗೊಳಿಸಬೇಕು ಎಂದು ಗುಡುಗಿದರು.

ಶಾಸಕರಾದ ಎಂ.ಬಿ. ಪಾಟೀಲ್‌, ಜಮೀರ್‌ ಅಹ್ಮದ್‌, ಯು.ಟಿ. ಖಾದರ್‌, ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ, ಮಾಜಿ ಶಾಸಕರಾದ ಜೆ.ಆರ್‌. ಲೋಬೊ, ಅಭಯಚಂದ್ರ ಜೈನ್‌, ಶಕುಂತಳಾ ಶೆಟ್ಟಿಮತ್ತಿತರರಿದ್ದರು.

click me!