Recruitment Scams: ಕಾಂಗ್ರೆಸಿಗ, ಬಿಜೆಪಿ ನಾಯಕಿ 2 ರೀತಿ ಅಕ್ರಮ..!

Published : Apr 30, 2022, 07:40 AM IST
Recruitment Scams:  ಕಾಂಗ್ರೆಸಿಗ, ಬಿಜೆಪಿ ನಾಯಕಿ 2 ರೀತಿ ಅಕ್ರಮ..!

ಸಾರಾಂಶ

*  ರುದ್ರಗೌಡನಿಂದ ಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್‌ ಕಾರ್ಯಾಚರಣೆ *  ದಿವ್ಯಾಳಿಂದ ಒಎಂಆರ್‌ ಶೀಟ್‌ ತಿದ್ದುವಿಕೆ *  ಎಂಟು ಅಭ್ಯರ್ಥಿಗಳು ಅಕ್ರಮ ನಡೆಸಿರುವುದಕ್ಕೆ ಸಿಐಡಿ ತನಿಖೆಯಲ್ಲಿ ಸಿಕ್ಕಿದ ಪುರಾವೆ  

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಏ.30):  ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಅಕ್ರಮದಲ್ಲಿ(PSI Recruitment Scam) ಕಲಬುರಗಿ ಜಿಲ್ಲೆಯ ಬಿಜೆಪಿ(BJP) ನಾಯಕಿ ದಿವ್ಯಾ ಹಾಗರಗಿ(Divya Hagaragi) ಹಾಗೂ ಕಾಂಗ್ರೆಸ್‌(Congress) ಮುಖಂಡ ರುದ್ರಗೌಡ ಪಾಟೀಲ್‌ ಅವರಿಬ್ಬರೂ ಒಂದೇ ತಂಡದಲ್ಲಿದ್ದರೂ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದ ಸಂಗತಿ ಬಯಲಾಗಿದೆ. ಇದೇ ವೇಳೆ, ಶಾಸಕರ ಗನ್‌ಮ್ಯಾನ್‌ ಸೇರಿದಂತೆ ಎಂಟು ಅಭ್ಯರ್ಥಿಗಳು ಅಕ್ರಮ ನಡೆಸಿರುವುದಕ್ಕೆ ಸಿಐಡಿ ತನಿಖೆಯಲ್ಲಿ ಪುರಾವೆ ಸಿಕ್ಕಿದೆ.

ತನ್ನ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಒಎಂಆರ್‌ ಶೀಟ್‌(OMR Sheet) ತಿದ್ದುಪಡಿ ಮಾಡಿ ದಿವ್ಯಾ ಹಾಗರಗಿ ಹಾಗೂ ಆಕೆಯ ತಂಡ ಅಕ್ರಮ ನಡೆಸಿದರೆ, ಅಭ್ಯರ್ಥಿಗಳಿಗೆ ಬ್ಲೂಟೂತ್‌(Bluetooth) ಮೂಲಕ ಕಾಂಗ್ರೆಸ್‌ ಮುಖಂಡ ರುದ್ರಗೌಡ ಪಾಟೀಲ್‌ ಉತ್ತರ ಒದಗಿಸಿದ್ದಾನೆ. ಇದುವರೆಗೆ ಸಿಐಡಿ ಬಲೆಗೆ ಬಿದ್ದಿರುವ ಎಂಟು ಅಭ್ಯರ್ಥಿಗಳು ದಿವ್ಯಾ ಒಡೆತನದ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆದಿದ್ದು, ಇದು ಪ್ರಮುಖವಾಗಿ ಅಭ್ಯರ್ಥಿಗಳ ಮೇಲೆ ಅನುಮಾನ ಮೂಡಲು ಕಾರಣವಾಗಿದೆ. ಅಫ್ಜಲ್‌ಪುರ ಶಾಸಕರ ಗನ್‌ ಮ್ಯಾನ್‌ ಹಯ್ಯಾಳಿ ದೇಸಾಯಿ ಸೇರಿ ಏಳು ಅಭ್ಯರ್ಥಿಗಳು ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಶಾಂತಿ ಬಾಯಿ ಪತ್ತೆಗೆ ತನಿಖೆ ನಡೆದಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

PSI Scam: ಹದಿನೆಂಟು ದಿನಗಳಲ್ಲಿ ಸುತ್ತಾಡಿದ್ದು ಎಲ್ಲೆಲ್ಲಿ ? ಆ 18 ದಿವ್ಯ ದಿನಗಳು!

ಒಂದೇ ಸೆಂಟರ್‌ನಲ್ಲಿ ಪರೀಕ್ಷೆಗೆ ಸಂಚು:

ಮೊದಲಿನಿಂದಲೂ ದಿವ್ಯಾ ಹಾಗರಗಿ ಹಾಗೂ ರುದ್ರಗೌಡ ಪಾಟೀಲ್‌(Rudragouda Patil) ಪರಿಚಿತರು. ಈ ಸ್ನೇಹದ ಹಿನ್ನೆಲೆಯಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಇಬ್ಬರೂ ಪರಸ್ಪರ ಸಹಕರಿಸಿದ್ದಾರೆ. ಪಿಎಸ್‌ಐ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಕೋಟಾದಡಿ ಆಯ್ಕೆ ಬಯಸಿದ ಅಭ್ಯರ್ಥಿಗಳಿಗೆ ಕಲಬುರಗಿ ನಗರದ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯನ್ನು ಪರೀಕ್ಷಾ ಕೇಂದ್ರವಾಗಿ ಪೊಲೀಸ್‌ ಇಲಾಖೆಯ ನೇಮಕಾತಿ ವಿಭಾಗವು ಆಯ್ಕೆ ಮಾಡಿತು. ಈ ವಿಚಾರ ತಿಳಿದ ರುದ್ರಗೌಡ, ಪರೀಕ್ಷೆಯಲ್ಲಿ ನೆರವು ನೀಡುವಂತೆ ದಿವ್ಯಾ ಅವರಿಗೆ ಹಣದಾಸೆ ತೋರಿಸಿ ಸೆಳೆದಿದ್ದಾನೆ. ಮೊದಲಿನಿಂದಲೂ ಸರ್ಕಾರಿ ನೌಕರಿ ನೇಮಕಾತಿಯಲ್ಲಿ ರುದ್ರಗೌಡ ಕೈಚಳಕ ತೋರಿಸಿದ್ದ ಕುಖ್ಯಾತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಿಎಸ್‌ಐ ನೇಮಕಾತಿ ರದ್ದುಗೊಳಿಸಿ ಸರಕಾರ ಮಹತ್ವದ ಆದೇಶ

ಈ ಇಬ್ಬರೂ ಒಂದೇ ತಂಡದಲ್ಲಿದ್ದು, ತಮ್ಮ ಸಂಪರ್ಕಕ್ಕೆ ಬಂದ ಅಭ್ಯರ್ಥಿಗಳಿಗೆ ನೆರವಾಗಲು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಲು ಸಂಚು ರೂಪಿಸಿದ್ದರು. ಮೊದಲು ತಮಗೆ ಹಣ ನೀಡಿದ್ದ ಅಭ್ಯರ್ಥಿಗಳು ದಿವ್ಯಾ ಒಡೆತನದ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ನಿಯೋಜನೆಯಾಗುವಂತೆ ನೋಡಿಕೊಂಡಿದ್ದರು. ನಂತರ ತನ್ನ ಶಿಕ್ಷಕರನ್ನು ಬಳಸಿಕೊಂಡು ತನ್ನ ಸಂಪರ್ಕದಲ್ಲಿದ್ದ ಐವರು ಅಭ್ಯರ್ಥಿಗಳಿಗೆ ಒಎಂಆರ್‌ ಶೀಟ್‌ ತಿದ್ದುಪಡಿ ಮೂಲಕ ದಿವ್ಯಾ ನೆರವಾಗಿದ್ದಾಳೆ. ಇತ್ತ ರುದ್ರಗೌಡ, ತನ್ನ ಹಿಂದಿನ ಮಾದರಿಯಂತೆ ಬ್ಲೂಟೂತ್‌ ಮೂಲಕ ಮೂವರಿಗೆ ಉತ್ತರ ಒದಗಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಿಡಬ್ಲ್ಯುಡಿ ಪರೀಕ್ಷೆ ಮಾದರಿ?:

ಲೋಕೋಪಯೋಗಿ ಇಲಾಖೆಯ(PWD) ಕಿರಿಯ ಎಂಜಿನಿಯರ್‌ ನೇಮಕಾತಿ ಪರೀಕ್ಷೆಯಂತೆ ಪಿಎಸ್‌ಐ ಪರೀಕ್ಷೆಯಲ್ಲಿ ಸಹ ಪರೀಕ್ಷೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪೂರ್ವಯೋಜಿತ ಸಂಚಿನಂತೆ ದಿವ್ಯಾ ಹಾಗರಗಿ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ಫೋಟೋ ಕಾಪಿ ಪಡೆದ ರುದ್ರಗೌಡ ತಂಡವು, ನಂತರ ಉತ್ತರ ಸಿದ್ಧಪಡಿಸಿ ಅಭ್ಯರ್ಥಿಗಳಿಗೆ ಪೂರೈಸಿದೆ ಎಂದು ಮೂಲಗಳು ತಿಳಿಸಿವೆ.

ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆದವರು

ಹಯ್ಯಾಳಿ ದೇಸಾಯಿ (ಶಾಸಕರ ಗನ್‌ ಮ್ಯಾನ್‌)-138.875 ಅಂಕಗಳು, 1ನೇ ರ‍್ಯಾಂಕ್ (ಇನ್‌ ಸರ್ವೀಸ್‌ ಕೋಟಾ)

ವಿಶಾಲ್‌- 147.875 ಅಂಕಗಳು, 15ನೇ ರ‍್ಯಾಂಕ್
ಎನ್‌.ವಿ.ಸುನೀಲ್‌ ಶಿಶೂರ್‌- 127.5 ಅಂಕಗಳು, 25ನೇ ರ‍್ಯಾಂಕ್
ಒಎಂಆರ್‌ ಶೀಟ್‌ ತಿದ್ದುಪಡಿಯಿಂದ ಪಾಸಾದವರು
ನಂದಗಾವ್‌ ಚೇತನ್‌- 159 ಅಂಕಗಳು, 3ನೇ ರ‍್ಯಾಂಕ್
ವೀರೇಶ್‌-153.875 ಅಂಕಗಳು, 7ನೇ ರ‍್ಯಾಂಕ್
ಪ್ರವೀಣ್‌ ಕುಮಾರ್‌- 151.151.375, 9ನೇ ರ‍್ಯಾಂಕ್
ಅರುಣ್‌ ಕುಮಾರ್‌ -147 ಅಂಕಗಳು, 17ನೇ ರ‍್ಯಾಂಕ್
ಶಾಂತಿ ಬಾಯಿ- 127.5 ಅಂಕಗಳು, 3ನೇ ರ‍್ಯಾಂಕ್ (ಮಹಿಳಾ ಕೋಟಾ)
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌