ನಮ್ಮ ಹೋರಾಟಕ್ಕೆ ಹೆದರಿ ಕಳಸಾಗೆ ಒಪ್ಪಿಗೆ: ಕಾಂಗ್ರೆಸ್‌ ನಾಯಕ ಸುರ್ಜೇವಾಲಾ

By Kannadaprabha NewsFirst Published Dec 30, 2022, 2:28 PM IST
Highlights

ಗಾಢ ನಿದ್ರೆಯಿಂದ ಎಚ್ಚೆತ್ತ ಕೇಂದ್ರ, ತಡವಾಗಿ ಅನುಮತಿ, ಬಿಜೆಪಿಯನ್ನು ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಜನತೆ ಕ್ಷಮಿಸಲ್ಲ: ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ 

ಬೆಂಗಳೂರು(ಡಿ.30):  ಗಾಢ ನಿದ್ರೆಯಲ್ಲಿದ್ದ ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಹೆದರಿ ಎಚ್ಚೆತ್ತು ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡಿದೆ. ಆದರೂ ತಡವಾಗಿ ಅನುಮತಿ ನೀಡಿರುವುದನ್ನು ಬೆಳಗಾವಿ, ಹುಬ್ಬಳ್ಳಿ-ಧಾರವಾಡದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ನಿಂದ ಜ.2 ಕ್ಕೆ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಮ್ಮ ಮಹದಾಯಿ ಹೋರಾಟ 8 ವರ್ಷದಿಂದ ಗಾಢ ನಿದ್ರೆಯಲ್ಲಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಎಬ್ಬಿಸಿದೆ. ಪ್ರತಿಭಟನೆಗೆ ಹೆದರಿ ಕೇಂದ್ರ ಸರ್ಕಾರ ಕಳಸಾ-ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಸಮ್ಮತಿ ಸೂಚಿಸಿದೆ ಎಂದು ಟೀಕಿಸಿದ್ದಾರೆ.

ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಗ್ರೀನ್‌ ಸಿಗ್ನಲ್‌: ಹಂಡೆ ಹಾಲು ಕುಡಿದಷ್ಟೇ ಸಂತಸವೆಂದ ಸಚಿವ ಕಾರಜೋಳ

ಯೋಜನೆ ಅನುಷ್ಠಾನಕ್ಕೆ ವಿಳಂಬವಾಗಿ ಸಮ್ಮತಿ ನಿಡಲಾಗಿದೆ. ಆದ್ದರಿಂದ ಈ ದ್ರೋಹವನ್ನು ಬೆಳಗಾವಿ, ಹುಬ್ಬಳ್ಳಿ-ಧಾರವಾಡದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಲ್ಲಿನ 59 ಲಕ್ಷ ಜನರಿಗೆ ಮಹದಾಯಿಯ 3.9 ಟಿಎಂಸಿ ನೀರು ದೊರಕಿಸಿಕೊಡುವುದು ಖಚಿತವಾಗಿದೆ. ಪಕ್ಷ ಅಧಿಕಾರಕ್ಕೆ ಬಂದ ಮೊದಲನೇ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಾಗಿ 500 ಕೋಟಿ ರು. ಮಂಜೂರು ಮಾಡಲಾಗುವುದು. ಮಹದಾಯಿ ನದಿ ತಿರುವು ಯೋಜನೆಗಳಿಗೆ 3 ಸಾವಿರ ಕೋಟಿ ರು. ಮಂಜೂರು ಮಾಡಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನಿಡಿದ್ದಾರೆ.

click me!