ಬೆಳಗಾವಿ, ನಿಪ್ಪಾಣಿ, ಕಾರವಾರ ನಮ್ಮದು| ಶಿವಸೇನೆ ಬಳಿಕ ಮಹಾ ಕಾಂಗ್ರೆಸ್ ಕ್ಯಾತೆ!| ಮರಾಠಿ ಭಾಷಿಕ ಪ್ರದೇಶ ಮಹಾರಾಷ್ಟ್ರ ಸೇರಬೇಕು: ಕಾಂಗ್ರೆಸ್‌ನ ಸಾವಂತ್ ಆಗ್ರಹ
ಮುಂಬೈ(ಜ.20): ಬೆಳಗಾವಿ ಸೇರಿದಂತೆ ‘ಕರ್ನಾಟಕ ಆಕ್ರಮಿತ’ ಗಡಿಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸಲು ಬದ್ಧವಾಗಿರುವುದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕ್ಯಾತೆ ತೆಗೆದ ಬೆನ್ನಲ್ಲೇ, ಇದೀಗ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರೂ ಅದೇ ಹಾದಿ ತುಳಿದಿದ್ದಾರೆ. ಬೆಳಗಾವಿ, ನಿಪ್ಪಾಣಿ ಹಾಗೂ ಕಾರವಾರ ನಮ್ಮವು ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಹೇಳಿಕೊಂಡಿದ್ದಾರೆ.
ಉದ್ಧವ್ ಠಾಕ್ರೆ ಹೇಳಿಕೆಗೆ ಕರ್ನಾಟಕದಲ್ಲಿ ಪಕ್ಷಾತೀತವಾಗಿ ವ್ಯಕ್ತವಾದ ತಿರುಗೇಟಿನ ಹೊರತಾಗಿಯೂ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರ ಈ ಗಡಿ ಕ್ಯಾತೆ, ಉಭಯ ರಾಜ್ಯಗಳ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿದೆ.
undefined
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಸಾವಂತ್, ‘ಅನೇಕ ವರ್ಷಗಳಿಂದ ಗಡಿ ವಿವಾದವಿದೆ. ಆದರೆ ಮಹಾರಾಷ್ಟ್ರದ ಜನತೆಯ ಆಶಯಕ್ಕೆ ನಾವು ಬದ್ಧರಿದ್ದೇವೆ. ನಿಪ್ಪಾಣಿ, ಬೆಳಗಾವಿ ಹಾಗೂ ಕಾರವಾರದಲ್ಲಿ ಮರಾಠಿ ಭಾಷಿಕರ ಪ್ರಾಬಲ್ಯ ಇದೆ ಎಂಬುದು ಸ್ಪಷ್ಟ. ಆದ್ದರಿಂದಲೇ ಇವನ್ನು ಮಹಾರಾಷ್ಟ್ರಕ್ಕೆ ಮರಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಹಾಗಿದ್ದರೆ ಕರ್ನಾಟಕ ಕಾಂಗ್ರೆಸ್ ಮುಖಂಡರು ಇವು ಕರ್ನಾಟಕದ ಅವಿಭಾಜ್ಯ ಅಂಗ ಎಂದಿದ್ದಾರಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ಬದ್ಧತೆ ಇರುವುದು ಮಹಾರಾಷ್ಟ್ರದ ಜನರಿಗೆ’’ ಎಂದು ಪ್ರತಿಕ್ರಿಯಿಸಿದರು.
ಜ.17ರಂದು ಹುತಾತ್ಮ ದಿನಾಚರಣೆ ವೇಳೆ ಟ್ವೀಟ್ ಮಾಡಿದ್ದ ಉದ್ಧವ್ ಠಾಕ್ರೆ, ‘ಕರ್ನಾಟಕ ಆಕ್ರಮಿತ ಮರಾಠಿ ಭಾಷಿಕ ಹಾಗೂ ಸಂಸ್ಕೃತಿಯ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸಲು ನಾವು ಬದ್ಧರಾಗಿದ್ದೇವೆ. ಇದು ಗಡಿ ಹೋರಾಟದಲ್ಲಿ ಭಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿ. ಇದಕ್ಕಾಗಿ ನಾವು ಒಗ್ಗಟ್ಟಾಗಿದ್ದೇವೆ’ ಎಂದು ಹೇಳಿಕೊಂಡಿದ್ದರು.