ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಪಿಎಸ್‌ಐ ನೇಮಕಾತಿ ಹಗರಣ: ನ್ಯಾಯಾಂಗ ತನಿಖೆಗೆ ‘ಕೈ’ ಹೋರಾಟ

By Kannadaprabha News  |  First Published Jul 7, 2022, 11:30 PM IST

*  ವಿಧಾನಸೌಧದ ಎದುರು ಧರಣಿ
*  ಕಿಂಗ್‌ಪಿನ್‌ಗಳನ್ನು ಬಂಧಿಸಲು ಆಗ್ರಹ
*  ಈಗ ಮಾಡಲಾಗಿರುವ ತನಿಖೆಯಿಂದ ನ್ಯಾಯ ಸಿಗುವುದು ಅಸಾಧ್ಯ
 


ಬೆಂಗಳೂರು(ಜು.07): ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಪಿಎಸ್‌ಐ ನೇಮಕಾತಿ ಹಗರಣ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ರಾಜ್ಯ ಕಾಂಗ್ರೆಸ್‌ ನಾಯಕರು ಗುರುವಾರ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದರು.

ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾಂಕೇತಿಕ ಧರಣಿ ನಡೆಸಿ, ‘ಹೊರಗಡೆ ರಾಜಾರೋಷವಾಗಿ ಓಡಾಡುತ್ತಿರುವ ಕಿಂಗ್‌ಪಿನ್‌ಗಳನ್ನು ಕೂಡಲೇ ಬಂಧಿಸಬೇಕು. ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ನ್ಯಾಯಾಂಗ ತನಿಖೆಗೆ ವಹಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಸಲಾಗುವುದು’ ಎಂದು ಮುಖಂಡರು ಎಚ್ಚರಿಕೆ ನೀಡಿದರು.

Tap to resize

Latest Videos

PSI Scam: ಎಡಿಜಿಪಿ ಮನೆಯಿಂದ ಬರಿಗೈಲಿ ವಾಪಸ್‌ ಬಂದ ಸಿಐಡಿ ತಂಡ

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಅವರು ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದ್ದಾರೆ. ರಾಜ್ಯದ ಪ್ರಭಾವಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಇತ್ತೀಚೆಗೆ ಬಂಧನವಾಗಿರುವ ಅಮೃತ್‌ ಪಾಲ್‌ ಅವರ ಕಚೇರಿಯಲ್ಲೇ ಪಿಎಸ್‌ಐ ಅಭ್ಯರ್ಥಿಗಳ ಒಎಂಆರ್‌ ಶೀಟ್‌ ತಿದ್ದಲಾಗಿದೆ. ಸರ್ಕಾರದ ಕುಮ್ಮಕ್ಕಿಲ್ಲದೆ ಈ ಹಗರಣ ನಡೆಯಲು ಸಾಧ್ಯವೇ ಇಲ್ಲ. ಹೀಗಾಗಿಯೇ ಸರ್ಕಾರವು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದು, ಹೈಕೋರ್ಚ್‌ ಹಾಲಿ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸುವವರೆಗೆ ಹಾಗೂ ಕಿಂಗ್‌ಪಿನ್‌ಗಳನ್ನು ಬಂಧಿಸುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮಾರ್ಚ್‌ ತಿಂಗಳಲ್ಲಿ ಉಭಯ ಸದನಗಳಲ್ಲಿ ನಾವು ಹಗರಣದ ಬಗ್ಗೆ ಪ್ರಸ್ತಾಪ ಮಾಡಿದಾಗ ಗೃಹ ಸಚಿವರು ಪಿಎಸ್‌ಐ ನೇಮಕಾತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದ್ದರು. ಈಗಲೂ ಹೈಕೋರ್ಚ್‌ ನ್ಯಾಯಮೂರ್ತಿ ಸಂದೇಶ್‌ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಎಡಿಜಿಪಿ ಅಮೃತ್‌ಪಾಲ್‌ ಅವರನ್ನು ಬಂಧಿಸಲಾಗಿದೆ. ಈವರೆಗೆ 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, ಹಗರಣದಲ್ಲಿ ಸಚಿವರು, ಅಧಿಕಾರಿಗಳು ಎಲ್ಲರಿಗೂ ಪಾಲು ಹೋಗಿದೆ. ಹೀಗಾಗಿ ಅಮೃತ್‌ಪಾಲ್‌ ಅವರು ಭಾಗಿಯಾಗಿರುವವರ ಹೇಳಿಕೆ ನೀಡಲು ಸಿದ್ಧವಿದ್ದರೂ ಪೊಲೀಸರು ರೆಕಾರ್ಡ್‌ ಮಾಡಿಕೊಳ್ಳುತ್ತಿಲ್ಲ ಎಂದು ಕಿಡಿ ಕಾರಿದರು.

ಜಡ್ಜ್‌ ಎದುರು ಹೇಳಿಕೆ ದಾಖಲಿಸಿ- ಡಿಕೆಶಿ:

ಡಿ.ಕೆ. ಶಿವಕುಮಾರ್‌ ಮಾತನಾಡಿ, ಸರ್ಕಾರ ಎಲ್ಲವನ್ನೂ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಹೀಗಾಗಿ ಪ್ರಕರಣದ ಎಲ್ಲ ಬಂಧಿತರಿಂದ ಸೆಕ್ಷನ್‌ 164 ಪ್ರಕಾರ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಬೇಕು. ಮುಖ್ಯವಾಗಿ ಪಿಎಸ್‌ಐ ನೇಮಕ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಅವರ ಹೇಳಿಕೆಯನ್ನು ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ಮುಂದೆ ದಾಖಲಿಸಿಕೊಳ್ಳಬೇಕು ಎಂದು ಹೇಳಿದರು.

ಎಸ್‌ಐ ಕೇಸಲ್ಲಿ ಸಚಿವರ ಹೆಸರು ದಾಖಲಿಗೆ ಸಿಐಡಿ ನಕಾರ: ಡಿಕೆಶಿ

ಸರ್ಕಾರ ಈ ಅಕ್ರಮ ಪ್ರಕರಣದಲ್ಲಿ ಸಚಿವರು ಹಾಗೂ ಅಧಿಕಾರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಬೇಕಾದ ರೀತಿಯಲ್ಲಿ ಬಂಧಿತ 50 ಆರೋಪಿಗಳಿಂದ ಹೇಳಿಕೆ ದಾಖಲಿಸಿಕೊಂಡಿದೆ. ಕ್ಯಾಮೆರಾಗಳನ್ನು ಬಂದ್‌ ಮಾಡಿ ಅವರಿಂದ ರಹಸ್ಯವಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಯಾರು ಯಾವ ಅಧಿಕಾರಿಗಳನ್ನು ಯಾವ ಕಚೇರಿಯಲ್ಲಿ, ಹೊಟೇಲ್‌ನಲ್ಲಿ ಭೇಟಿ ಮಾಡಿದ್ದಾರೆ ಎಂದು ನಮಗೆ ಗೊತ್ತಿದೆ. ಯಾವ ಸಚಿವರು ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಯನ್ನು ವಿಚಾರಣೆಯಿಂದ ಹೇಗೆ ರಕ್ಷಿಸಿದರು, 20-25 ದಿನಗಳ ನಂತರ ಅದೇ ಸಚಿವರು ಆ ಅಭ್ಯರ್ಥಿಗೆ ಹಣ ಹಿಂದಿರುಗಿಸಲಾಗುವುದು ಎಂದು ಹೇಳಿ ಆತನನ್ನು ಶರಣಾಗತಿ ಮಾಡಿಸಿದ್ದು ನಮಗೆ ಗೊತ್ತು ಎಂದು ಟೀಕಿಸಿದರು.

ಈಗ ಮಾಡಲಾಗಿರುವ ತನಿಖೆಯಿಂದ ನ್ಯಾಯ ಸಿಗುವುದು ಅಸಾಧ್ಯ. ಈ ಪ್ರಕರಣದ ನ್ಯಾಯಾಂಗ ತನಿಖೆ ಆಗಬೇಕು. ಹಗರಣದಲ್ಲಿ ಭಾಗಿಯಾಗಿರುವ ಮಂತ್ರಿಗಳು ಹಾಗೂ ಅಧಿಕಾರಿಗಳ ಬಂಧನವಾಗಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸುತ್ತದೆ. ಅದಕ್ಕಾಗಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದು, ಹೋರಾಟ ಮುಂದುವರೆಸಲಾಗುವುದು ಎಂದರು.
 

click me!