
ಬೆಂಗಳೂರು (ಮಾ. 6): ಬಜೆಟ್ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಈಗ 'ಡಿನ್ನರ್ ಪಾಲಿಟಿಕ್ಸ್' ಸದ್ದು ಮಾಡುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಔತಣಕೂಟ ಆಯೋಜಿಸಿದ ಬೆನ್ನಲ್ಲೇ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಶಾಸಕರಿಗಾಗಿ ಡಿನ್ನರ್ ಪಾರ್ಟಿ ನೀಡಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮಾರ್ಚ್ 10ರಂದು ಕಾಂಗ್ರೆಸ್‌ನ ಎಲ್ಲಾ ಎಂಎಲ್‌ಎ, ಎಂಎಲ್‌ಸಿಗಳಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಆದರೆ, ಇದಕ್ಕೂ ಒಂದು ದಿನ ಮುನ್ನವೇ ಅಂದರೆ ಮಾರ್ಚ್ 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರಿಗೆ ಔತಣಕೂಟ ಏರ್ಪಡಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ 'ಬಜೆಟ್ ಕುರಿತು ಕಾರ್ಯಾಗಾರ' ನೆಪದಲ್ಲಿ ಈ ಔತಣಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಕಾರ್ಯಾಗಾರದಲ್ಲಿ ಬಜೆಟ್ ವಿಚಾರವಾಗಿ ಸಿಎಂ ಸುದೀರ್ಘವಾಗಿ ಮಾತನಾಡಲಿದ್ದು, ಆನಂತರ ಎಲ್ಲಾ ಸಚಿವರು ಮತ್ತು ಶಾಸಕರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗುತ್ತಿದೆ.
ವಿರೋಧ ಪಕ್ಷದ ಶಾಸಕರಿಗೂ ಸಿಗಲಿದೆಯೇ ಆಹ್ವಾನ?
ಪ್ರಸ್ತುತ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಗೆ ಕೇವಲ ಕಾಂಗ್ರೆಸ್ ಶಾಸಕರನ್ನು ಕರೆಯಬೇಕೇ ಅಥವಾ ಬಿಜೆಪಿ-ಜೆಡಿಎಸ್ ಸೇರಿ ಎಲ್ಲಾ ಪಕ್ಷದ ಶಾಸಕರನ್ನು ಆಹ್ವಾನಿಸಬೇಕೇ ಎಂಬ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಬಜೆಟ್ ಕಾರ್ಯಾಗಾರವಾದ್ದರಿಂದ ಎಲ್ಲರನ್ನೂ ಒಳಗೊಳ್ಳುವ ಸಾಧ್ಯತೆಗಳೂ ಇವೆ. ಈ ಮೂಲಕ ಬಜೆಟ್ ನೆಪದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ತಂತ್ರಗಾರಿಕೆಯನ್ನು ಸಿಎಂ ಹೂಡಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ