
ಮೈಸೂರು (ಜು.5): ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟವರಿಂದಲೇ ಮುಡಾ ಹಗರಣ ಬಯಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ ? ಇದರ ಹಿಂದೆ ಸಿಎಂ ಖುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರ ಇದೆ. ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಆದ್ರೆ ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗೊಳಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಸಿಡಿ ಫ್ಯಾಕ್ಟರಿ ಕ್ಲೋಸ್ ಆಗಿದೆ. ಈಗ ಮುಡಾ ವಿಚಾರ ಶುರುವಾಗಿದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಸಿಎಂ ಪತ್ನಿಗೆ ಆ ಜಾಗ ಹೇಗೆ ಬಂತು ಅಂತಲೂ ನನಗೆ ಗೊತ್ತಿದೆ. 62 ಕೋಟಿ ರೂ. ಪರಿಹಾರ ಕೇಳುವ ಸಿಎಂ ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ರೈತರಿಗೂ ಪರಿಹಾರ ಕೊಡಿಸಲಿ ಎಂದು ಸವಾಲು ಹಾಕಿದ್ದಾರೆ.
ಸಿಎಂ ಪತ್ನಿಗೆ 14 ಸೈಟ್ ಹಂಚಿಕೆ ವಿಚಾರವಾಗಿ ಮಾತನಾಡಿ, ಕಾನೂನು ಸಲಹೆಗಾರ ಈಗ ಎಂಎಲ್ಎ ಆಗಿದ್ದಾರೆ. ಅವರು ಸಿಎಂ ಪರ ಸುಧೀರ್ಘವಾಗಿ ಮಾತನಾಡಿದ್ದಾರೆ. 62 ಕೋಟಿ ರೂ ಪರಿಹಾರ ನೀಡಬೇಕು ಎಂದಿದ್ದಾರೆ. ಆದರೆ ಹಲವು ಅಭಿವೃದ್ಧಿ ಹೆಸರಿನಲ್ಲಿ ಭೂ ಸ್ವಾಧೀನವಾಗಿದೆ. ಆ ರೈತರು ಇನ್ನೂ ಕೂಡ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ. ಅವರಿಗೆ ರೇಟ್ ಫಿಕ್ಸ್ ಮಾಡುವಾಗ ಹೇಗೆ ಮಾಡುತ್ತೀರಾ ? ರೈತರನ್ನ ಬೀದಿಗೆ ನಿಲ್ಲಿಸಿದ್ದೀರಿ ಇದು ಸರೀನಾ? ನಿಮ್ಮ ಪತ್ನಿಯ ಹಣ ಕೇಳುತ್ತಾ ಇದ್ದೀರಲ್ಲಾ ಆ ದೇವರು ಮೆಚ್ಚುತ್ತಾನಾ ? ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಬಳಿಕ ಮೈಸೂರಿಗೆ ಮೊದಲ ಬಾರಿಗೆ ಬಂದಿರುವ ಕುಮಾರಸ್ವಾಮಿ ಚಾಮುಂಡೇಶ್ವರಿ ದೇವಿ ದರ್ಶನ ಮಾಡಿ, ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಜಿಡಿ.ಹರೀಶ್‌ಗೌಡ, ಮಾಜಿ ಶಾಸಕರಾದ ಸಾರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಆರ್.ಅಶ್ವಿನ್‌ಕುಮಾರ್, ಎಂಎಲ್‌ಸಿ ಮಂಜೇಗೌಡ ಸೇರಿ ಸ್ಥಳೀಯ ಮುಖಂಡರು ಸಾಥ್ ನೀಡಿದರು.
ಇಂದು ಮಂಡ್ಯದಲ್ಲಿ ಜನತಾ ದರ್ಶನ ವಿಚಾರವಾಗಿ ಮಾತನಾಡಿ , ಜನತಾ ದರ್ಶನ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಜನತಾ ದರ್ಶನದ ಬಗ್ಗೆಯೇ ಸಚಿವ ಸಂಪುಟದ ಸಭೆ ಕರೆದು ಚರ್ಚೆ ಮಾಡಿದ್ದಾರೆ. ನೀವು ಅಧಿಕಾರಿಗಳನ್ನು ದೂರು ಇಡಬಹುದು. ಆದರೆ ಜನರನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಸಂಸದರು ಈ ರೀತಿ ಸಭೆ ಮಾಡಿದ್ದಾಗ ಏನು ಮಾಡುತ್ತಿದ್ದೀರಿ? ಚುನಾವಣೆಗೆ ಬಂದು ಜನ ಸ್ಪಂದನ ಕಾರ್ಯಕ್ರಮ ಮಾಡಿದಾಗ ಎಲ್ಲಿ ಹೋಗಿದ್ರಿ ? ಈಗ ಜನತಾ ದರ್ಶನ ತಪ್ಪಿಸಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ