
ಬೆಂಗಳೂರು(ಜು.05): ಐದು ವರ್ಷಕ್ಕಿಂತ ಹೆಚ್ಚು ಕಾಲ ಬೆಂಗಳೂರು ಸೇರಿದಂತೆ ವಿವಿಧ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಉಪ ನೋಂದಣಾಧಿಕಾರಿ, ಹಿರಿಯ ಉಪ ನೋಂದಣಾಧಿಕಾರಿಗಳ 100 ಕೌನ್ಸೆಲಿಂಗ್ ನಡೆಸಲು ಹಾಗೂ ಪಿಡಿಒ, ಗ್ರಾಮೀಣಾಭಿವೃದ್ಧಿ ಸಹಾಯಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಜೂನ್‌ನಲ್ಲಿ ಪ್ರಕಟಿಸಿದ್ದ ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿಗೆ ಘಟನೋತ್ತರ ಅನುಮೋದನೆಯನ್ನೂ ನೀಡಿದೆ.
ಕರ್ನಾಟಕದಲ್ಲಿ ಕ್ಯಾಸಿನೋಗೆ ಅವಕಾಶವಿಲ್ಲ: ಸಚಿವ ಎಚ್.ಕೆ.ಪಾಟೀಲ್
ಗುರುವಾರ ಸಚಿವ ಸಂಪುಟ ಸಭೆಯ ನಿರ್ಧಾರಗಳನ್ನು ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಕಳೆದ 8 ವರ್ಷಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಬೆಂಗಳೂರು ಹಾಗೂ ಸುತ್ತಮುತ್ತಲಿನ ಕಚೇರಿಗಳಲ್ಲೇ ಕರ್ತವ್ಯದಲ್ಲಿರುವ ಉಪ ನೋಂದಣಾಧಿಕಾರಿ, ಹಿರಿಯ ಉಪ ನೋಂದಣಾಧಿಕಾರಿಗಳು, 4 ವರ್ಷಕ್ಕಿಂತ ಹೆಚ್ಚು ಕಾಲ ಸಂಬಂಧಪಟ್ಟ ಪಾಲಿಕೆ ಯಲ್ಲೇ (ಬಿಬಿಎಂಪಿ ಹೊರತುಪಡಿಸಿ) ಇರುವ ಉಪ ನೋಂದಣಾಧಿಕಾರಿ, ಹಿರಿಯ ಉಪ ನೋಂದಣಾಧಿಕಾರಿ ವರ್ಗಾವಣೆಗೆ ಸಂಬಂಧಿಸಿದಂತೆ ಆ.10ರೊಳಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.
ಇದುವರೆಗೂ ನೇರವಾಗಿ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಮಾಡುತ್ತಿರುವುದನ್ನು ಬದಲಿಸಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಸರ್ಕಾರ ನಿರ್ಧರಿಸಿದೆ. ಅಕ್ರಮ ಹಾಗೂ ಭ್ರಷ್ಟಾಚಾರ ತಡೆಗಟ್ಟಲು ವರ್ಗಾವಣೆಗೆ ಹೊಸ ನೀತಿ ಜಾರಿ ಮಾಡಲಾಗಿದೆ. ನೋಂದಣಿ ಇಲಾಖೆಯಲ್ಲಿ ವರ್ಗಾವಣೆ ಪಾರದರ್ಶಕ ಮಾಡಲು ಕೌನ್ಸೆಲಿಂಗ್ ಪದ್ಧತಿ ಜಾರಿಗೆ ತರುತ್ತಿದ್ದೇವೆ. ಪ್ರಥಮ ದರ್ಜೆ ಸಹಾಯಕರನ್ನು ಹೊರತುಪಡಿಸಿ ಉಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗು ವುದು. ಪ್ರಥಮ ದರ್ಜೆ ಸಹಾಯಕರಿಗೆ ಮುಂದಿನ ವರ್ಷ ಕೌನ್ಸೆಲಿಂಗ್ ನಡೆಯಲಿದೆ ಎಂದರು.
ಪಿಡಿಒಗಳ ವರ್ಗಾವಣೆಗೆ ಕೌನ್ಸೆಲಿಂಗ್:
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಡಿ ಬರುವ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಮತ್ತು ಗ್ರಾಮೀ ಣಾಭಿವೃದ್ಧಿ ಸಹಾಯಕ (ಗ್ರೇಡ್-1) ಮತ್ತು (ಗ್ರೇಡ್-2) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯ ಕರ ವರ್ಗಾವಣೆಗಳ ಕುರಿತು ರಚಿಸಿರುವ ಕರಡು ನಿಯಮಗಳನ್ನು ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾಯೋಜನೆಯ (ಕೆಜಿಐಡಿ) ವಿಮಾದಾರರಿಗೆ 2018-200 ದೈವಾರ್ಷಿಕ ಅವಧಿಗೆ ಚಾಲ್ತಿಯಲ್ಲಿದ್ದ ಎಲ್ಲ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರು.ಗಳಿಗೆ ಪ್ರತಿ ವರ್ಷಕ್ಕೆ 10 ರು.ಗಳಂತೆ ಬೋನಸ್ ನೀಡಲು ಹಾಗೂ ಅವಧಿಪೂರ್ವ ಮರಣದ ಪ್ರಕರಣಗಳಲ್ಲಿ ಮಧ್ಯಂತರ ಬೋನಸ್ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕಾಂಗ್ರೆಸ್ ಸರ್ಕಾರದ ಮತ್ತೊಂದು ನಿಗಮದಲ್ಲಿ ಅವ್ಯವಹಾರ; ಅಧಿಕಾರಿಗಳನ್ನೇ ಕಿತ್ತೆಸೆದ ಸಚಿವ ಪಾಟೀಲ್
ಭಕ್ತವತ್ಸಲ ಆಯೋಗ ಶಿಫಾರಸು ಕೈಬಿಡಲು ವಿರ್ಧಾರ:
ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಹಿಸಲು ಡಾ.ನ್ಯಾಯಮೂರ್ತಿ ಕೆ.ಭಕ್ತವತ್ಸಲ ಆಯೋಗ ಮಾಡಿರುವ ಶಿಫಾರಸು ಕೈಬಿಟ್ಟು ಪಾಲಿ ವ್ಯವಸ್ಥೆ ಮುಂದುವರೆಸಲು ಸಂಪುಟ ನಿರ್ಧರಿಸಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
7ನೇ ವೇತನ ಆಯೋಗ ವರದಿ ಬಗ್ಗೆ ನಿರ್ಧಾರವಿಲ್ಲ
ಏಳನೇ ವೇತನ ಆಯೋಗದ ವರದಿ ಆಧಾರದ ಮೇಲೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಸಚಿವ ಸಂಪುಟದಲ್ಲಿ ಯಾವುದೇ ನಿರ್ಧಾರವಾಗಿಲ್ಲ, ಸರ್ಕಾರಿ ನೌಕರರು ಈ ಸಭೆಯಲ್ಲಿ ಆಯೋಗದ ವರದಿ ಶಿಫಾರಸಿನ ಅನ್ವಯ ವೇತನ ಪರಿಷ್ಕರಣೆ ನಿರೀಕ್ಷಿಸಿದ್ದರು. ಆದರೆ ಈ ಬಗ್ಗೆ ಗಂಭೀರವಾಗಿ ಚರ್ಚೆಯಾಗಿಲ್ಲ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ