ಬಿಜೆಪಿ ಸರ್ಕಾರದ ವಿರುದ್ದ ಹೇಳಿಕೆ ಕೊಟ್ಟರೆ ದೊಡ್ಡ ಮನುಷ್ಯ ಎನ್ನಿಸಿಕೊಳ್ಳುತ್ತೇವೆ. ಹೀರೋ ಆಗ್ತೀವಿ ಎಂದು ಕಾಂಪಿಟೇಷನ್ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ದ ಭ್ರಷ್ಟಾಚಾರ ಆರೋಪ ಮಾಡುವುದೇ ಇವರಿಬ್ಬರ ದಂಧೆ ಆಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.25): ಬಿಜೆಪಿ ವಿರುದ್ಧ ಹೇಳಿಕೆ ನೀಡುವಲ್ಲಿ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಇದರ ಭಾಗವಾಗಿಯೇ ಕೋವಿಡ್ ಉಪಕರಣ ಹಾಗೂ ಇನ್ನಿತರೆ ವಸ್ತು ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಈ ಇಬ್ಬರು ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಇದರಲ್ಲಿ ಯಾವುದೇ ಹುರಳಿಲ್ಲ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ದ ಹೇಳಿಕೆ ಕೊಟ್ಟರೆ ದೊಡ್ಡ ಮನುಷ್ಯ ಎನ್ನಿಸಿಕೊಳ್ಳುತ್ತೇವೆ. ಹೀರೋ ಆಗ್ತೀವಿ ಎಂದು ಕಾಂಪಿಟೇಷನ್ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ದ ಭ್ರಷ್ಟಾಚಾರ ಆರೋಪ ಮಾಡುವುದೇ ಇವರಿಬ್ಬರ ದಂಧೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ವೈಯಕ್ತಿಕ ಪೊಪೋಟಿಯಿಂದಾಗಿ ಈ ರೀತಿ ಬಿಜೆಪಿ ವಿರುದ್ದ ನಿರಾಧಾರ ಹೇಳಿಕೆ ನೀಡುತ್ತಿದ್ದಾರೆ. ಇಬ್ಬರು ಹಿರಿಯ ರಾಜಕಾರಣಿಗಳು. ಒಬ್ಬರು ಮುಖ್ಯಮಂತ್ರಿ ಆಗಿದ್ದವರು, ಮತ್ತೊಬ್ಬರು ಮಂತ್ರಿ ಆಗಿದ್ದವರು. ಕೊರೋನಾ ಸಂಕಷ್ಟ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುವ ತೀರ್ಮಾನಗಳಿಗೆ ಪೂರ್ಣ ಸಹಕಾರ ನೀಡಬೇಕೇ ಹೊರತು, ಈ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು.
ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಅಗತ್ಯ ಉಪಕರಣಗಳನ್ನು ಕೊಂಡುಕೊಂಡಿದೆ. ಕೆಲವು ಸಂದರ್ಭದಲ್ಲಿ ಬೇಡಿಕೆ ಹೆಚ್ಚಾದಾಗ ಉಪಕರಣದ ದರ ಹೆಚ್ಚಿರುತ್ತದೆ. ಬೇಡಿಎಕ ಕಡಿಮೆ ಇದ್ದಾಗ ದರ ಕಡಿಮೆ ಇರುತ್ತೆ. ಎಲ್ಲದಕ್ಕೂ ಆರೋಪ ಸರಿಯಲ್ಲ. ಇದನ್ನು ಪ್ರತಿಪಕ್ಷಗಳು ಅರ್ಥಮಾಡಿಕೊಳ್ಳಬೇಕು ಎಂದರು.
ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮಾ: ಕಾಂಗ್ರೆಸ್ ಧರಣಿ, ಗವರ್ನರ್ ಗರಂ!
ಈ ಹಿಂದೆ ಖರೀದಿಯಲ್ಲಿ 4 ಸಾವಿರ ಕೋಟಿ ರು.ನಷ್ಟುಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಇದೀಗ 2 ಸಾವಿರ ಕೋಟಿ ರು. ನಷ್ಟುಭ್ರಷ್ಟಾಚಾರ ಆಗಿದೆ ಹೇಳುತ್ತಿದ್ದಾರೆ. ವಾಸ್ತವದಲ್ಲಿ ಉಪಕರಣ ಖರೀದಿಗೆ ಸರ್ಕಾರ ಅಷ್ಟು ಖರ್ಚನ್ನೇ ಮಾಡಿಲ್ಲ. ಇನ್ನು ಭ್ರಷ್ಟಾಚಾರ ಆಗೋದು ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದರು.
ರಾಜಕೀಯ ಕಾರಣಕ್ಕಾಗಿ ಸರ್ಕಾರದ ಬಗ್ಗೆ ಟೀಕೆ ಮಾಡಿದರೇ ನಿಮ್ಮ ಪಕ್ಷಕ್ಕೆ ಕೆಟ್ಟಹೆಸರು ಬರುತ್ತದೆ ಹೊರತು, ಯಾವುದೇ ಕಾರಣಕ್ಕೂ ಸರ್ಕಾರಕ್ಕಾಗಲಿ, ಮಂತ್ರಿಗಳಿಗಾಗಲಿ ಕೆಟ್ಟಹೆಸರು ಬರುವುದಿಲ್ಲ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ವಿಧಾನ ಪರಿಷತ್ ಸ್ಥಾನಕ್ಕೆ ಸಾಕಷ್ಟುಬೇಡಿಕೆ ಇತ್ತು. ಆದರೆ ಐದು ಸ್ಥಾನಗಳಿಗೆ ಆಯ್ಕೆ ಆಗುತ್ತಿದ್ದಂತೆ ಆಕಾಕ್ಷಿಗಳು ಸುಮ್ಮನಾಗಿದ್ದಾರೆ. ಐದು ಮಂದಿ ಆಯ್ಕೆಯಲ್ಲಿ ಒಡಕಿನ ಧ್ವನಿ ಇಲ್ಲ. ಸಿದ್ದಿ ಜನಾಂಗದ ವ್ಯಕ್ತಿಯ ಆಯ್ಕೆಗೆ ಈಡಿ ದೇಶದ ಜನ ಸಂತೋಷ ಪಡುತ್ತಿದ್ದಾರೆ. ಸಿದ್ದಿ ಜನಾಂಗದ ವ್ಯಕ್ತಿ ಆಯ್ಕೆಯ ಮೂಲಕ ಆ ಒಂದು ಸ್ಥಾನಕ್ಕೆ ಗೌರವ ಬರುವಂತಹ ಕೆಲಸ ಆಗಿದೆ. ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಬೇರೆ ಎಲ್ಲಾ ಪಕ್ಷದ ಕಾರ್ಯಕರ್ತರು ಸಿದ್ದಿ ಜನಾಂಗದ ವ್ಯಕ್ತಿಯ ಆಯ್ಕೆಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ಹೇಳಿದರು.
ಹೈಕಮಾಂಡ್ ನಿರ್ಧಾರವೇ ಅಂತಿಮ
ಶಾಸಕರಾದವರು ಮಂತ್ರಿ ಸ್ಥಾನಕ್ಕೆ ಅಪೇಕ್ಷೆ ಪಡುವುದು ತಪ್ಪು ಎನ್ನಲಾಗದು. ಆದರೆ ಹೈಕಮಾಂಡ್ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ವರಿಷ್ಠರ ತೀರ್ಮಾನ ಎಲ್ಲರು ಒಪ್ಪಿಕೊಳ್ಳುತ್ತಾರೆ. ಇನ್ನು ಎಚ್. ವಿಶ್ವನಾಥ್‌ಗೆ ಮಂತ್ರಿ ಸ್ಥಾನ ನೀಡುವ ಕುರಿತು ಇದುವರೆಗೂ ತಮಗೆ ಯಾವುದೇ ಮಾಹಿತಿ ಇಲ್ಲ. ಕೇಂದ್ರದ ನಾಯಕರು ಮತ್ತು ಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. - ಕೆ.ಎಸ್. ಈಶ್ವರಪ್ಪ, ಪಂಚಾಯತ್ ರಾಜ್ ಸಚಿವ