ಬೆಂಗ್ಳೂರು ಅಭಿವೃದ್ಧಿಗೆ ಪ್ರತ್ಯೇಕ ಕಾಯ್ದೆ: ಕಾಂಗ್ರೆಸ್‌ ಸಹಮತ

By Kannadaprabha NewsFirst Published Sep 4, 2020, 9:17 AM IST
Highlights

ಬಿಬಿಎಂಪಿ ವಿಧೇಯಕದ ಬಗ್ಗೆ ಶಾಸಕರ ಜತೆ ಸಿದ್ದು ಚರ್ಚೆ, ಆದರೆ ಈ ಕಾಯ್ದೆ ಬಿಜೆಪಿಯ ಪ್ರಚಾರ ವಸ್ತು ಆಗಬಾರದು| ಚರ್ಚೆ ವೇಳೆ ಶಾಸಕರ ಅಭಿಪ್ರಾಯ| ಇಂದು ಈ ವಿಧೇಯಕದ ಬಗ್ಗೆ ಜಂಟಿ ಸದನ ಸಮಿತಿ ಸಭೆ| 

ಬೆಂಗಳೂರು(ಸೆ.04): 2020ನೇ ಸಾಲಿನ ಬಿಬಿಎಂಪಿ ವಿಧೇಯಕ’ ಪರಿಶೀಲನೆಗೆ ಶುಕ್ರವಾರ ವಿಧಾನಮಂಡಲದ ಜಂಟಿ ಸಮಿತಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಿ ಕಾಂಗ್ರೆಸ್‌ ಯಾವೆಲ್ಲಾ ವಿಚಾರಗಳನ್ನು ಮಂಡಿಸಬೇಕೆಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ಪಕ್ಷದ ಬೆಂಗಳೂರಿನ ಶಾಸಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ಬಂದ ಬಳಿಕ ಸಿದ್ದರಾಮಯ್ಯ ಅವರು ನಡೆಸಿದ ಶಾಸಕರ ಮೊದಲ ಸಭೆ ಇದಾಗಿದ್ದು, ಕುಮಾರಕೃಪಾ ರಸ್ತೆಯ ನಿವಾಸದಲ್ಲಿ ನಡೆಸಿದ ಸಭೆಯಲ್ಲಿ ಬೆಂಗಳೂರಿನ ಬಹುತೇಕ ಎಲ್ಲ ಶಾಸಕರು ಪಾಲ್ಗೊಂಡು ಈ ಕಾಯ್ದೆ ವಿಚಾರದಲ್ಲಿ ತಮ್ಮ ನಿಲುವೇನು ಹಾಗೂ ಇದನ್ನು ಶಕ್ತಿಯುತಗೊಳಿಸಲು ಯಾವೆಲ್ಲಾ ಅಂಶಗಳನ್ನು ಸೇರ್ಪಡೆ ಮಾಡಬೇಕೆಂದು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದ್ದಾರೆ.

Latest Videos

ಪ್ರಮುಖವಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಹಾಗೂ ಆಡಳಿತ ಸುಧಾರಣೆಗೆ ಪ್ರತ್ಯೇಕ ಕಾಯ್ದೆ ರೂಪಿಸಲು ಹೊರಡಿರುವ ಸರ್ಕಾರದ ಕ್ರಮಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಇದನ್ನು ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಹೇಳಿದ್ದಾರೆ. ಆದರೆ, ಈ ಕಾಯ್ದೆ ಕೇವಲ ನಾಮಕಾವಸ್ತೆಗೆ ಅಥವಾ ಬಿಜೆಪಿ ಪಾಲಿಗೆ ಮುಂಬರುವ ಚುನಾವಣೆಯ ಪ್ರಚಾರದ ವಸ್ತುವಾಗಬಾರದು. ಬಿಬಿಎಂಪಿಯಲ್ಲಿ ಆಮೂಲಾಗ್ರ ಬದಲಾವಣೆಗಾಗಿ ವಾರ್ಡುಗಳು ಮತ್ತು ವಲಯಗಳ ಸಂಖ್ಯೆ ಹೆಚ್ಚಳದ ಮೂಲಕ ಮತ್ತಷ್ಟುಅಧಿಕಾರ ವಿಕೇಂದ್ರೀಕರಣ ಹಾಗೂ ವ್ಯಾಪಕವಾಗಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪ್ರಬಲ ಅಸ್ತ್ರವಾಗಿ ರೂಪುಗೊಳ್ಳಬೇಕು. ಆ ನಿಟ್ಟಿನಲ್ಲಿ ಐತಿಹಾಸಿಕ ಕಾಯ್ದೆ ರಚನೆಗೆ ಶಾಸಕರು ತಮ್ಮದೇ ಆದ ಹಲವು ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌

ಬೆಂಗಳೂರು ಮತ್ತಷ್ಟುಬೆಳೆದಂತೆ ಮುಂದಿನ ದಿನಗಳಲ್ಲಿ ಕಸದ ಸಮಸ್ಯೆ, ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗಲಿದೆ. ನಗರವನ್ನು ಅಂತಾರಾಷ್ಟ್ರೀಯ ಮಟ್ಟದ ಮೂಲಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಬೇಕಾಗುತ್ತದೆ. ಇದಕ್ಕೆ ಹಣಕಾಸಿನ ಕೊರತೆಯಾಗಬಹುದು. ಹಾಗಾಗಿ ನಗರದ ಪ್ರತಿಯೊಂದು ಆಸ್ತಿಯನ್ನೂ ಆಸ್ತಿ ತೆರಿಗೆ ವ್ಯಾಪ್ತಿಗೆ ತಂದು ತೆರಿಗೆ ಸೋರಿಕೆ ಅಥವಾ ತೆರಿಗೆ ವಂಚನೆಯಾಗದಂತೆ ತಡೆಯಬೇಕು. ಇದಕ್ಕಾಗಿ ಕಠಿಣ ನಿಯಮಗಳನ್ನು ಕಾಯ್ದೆಯಲ್ಲಿ ತರಬೇಕು. ಜೊತೆಗೆ ಬೆಂಗಳೂರು ಅಭಿವೃದ್ಧಿಗೆ ಬಿ.ಎಸ್‌.ಪಾಟೀಲ್‌ ಅವರ ಅಧ್ಯಕ್ಷತೆಯ ಸಮಿತಿ ನೀಡಿರುವ ವರದಿ, ಅಬೈಡ್‌ ಸಂಸ್ಥೆಯ ವರದಿಯನ್ನು ಪರಿಶೀಲಿಸಿ ಉತ್ತಮ ಅಂಶಗಳನ್ನು ಕಾಯ್ದೆಯಲ್ಲಿ ಅಳವಡಿಸಬೇಕು. ನಗರಾಭಿವೃದ್ಧಿ ತಜ್ಞರು, ಉದ್ಯಮಿಗಳು, ವ್ಯಾಪಾರಸ್ತರು ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಜನರಿಂದ ಅಭಿಪ್ರಾಯಗಳನ್ನು ಪಡೆದು ಅಗತ್ಯ ಅಂಶಗಳನ್ನು ಕಾಯ್ದೆಗೆ ಸೇರಿಸಬೇಕೆಂದು ಸಲಹೆ ನೀಡಿದ್ದಾರೆ.

ಸಭೆಯಲ್ಲಿ ಶಾಸಕರಾದ ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಎನ್‌.ಎ.ಹ್ಯಾರಿಸ್‌, ರಿಜ್ವಾನ್‌ ಅರ್ಷದ್‌, ಅಖಂಡ ಶ್ರೀನಿವಾಸ ಮೂರ್ತಿ, ಕೆ.ಜೆ.ಜಾಜ್‌ರ್‍, ಆನೇಕಲ್‌ ಶಿವಣ್ಣ, ಬೈರತಿ ಸುರೇಶ್‌, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಐವನ್‌ ಡಿಸೋಜಾ ಸೇರಿದಂತೆ ಹಲವರು ಹಾಜರಿದ್ದರು.

click me!