2024ರ ಆಸ್ತಿಗೂ ಪರಿಷ್ಕೃತ ನೋಂದಣಿ ಶುಲ್ಕ ಕಟ್ಟಿ: ಎಸ್ಸೆಮ್ಮೆಸ್‌ನಿಂದ ಗೊಂದಲ

Kannadaprabha News   | Kannada Prabha
Published : Sep 01, 2025, 06:25 AM IST
property tax

ಸಾರಾಂಶ

ರಾಜ್ಯದಲ್ಲಿ ಆಸ್ತಿ ದಸ್ತಾವೇಜು ನೋಂದಣಿ ಶುಲ್ಕ ದುಪ್ಪಟ್ಟು ಮಾಡಿ ಜನರ ಟೀಕೆಗೆ ಗುರಿಯಾಗಿರುವ ಕಂದಾಯ ಇಲಾಖೆ ಇದೀಗ, ವರ್ಷದ ಹಿಂದೆ ನೋಂದಣಿ ಆಗಿರುವ ಆಸ್ತಿಗಳಿಗೂ ಪರಿಷ್ಕೃತ ನೋಂದಣಿ ಶುಲ್ಕ ಪಾವತಿಸುವಂತೆ ಸಂದೇಶ ಕಳುಹಿಸಿ ತೀವ್ರ ಗೊಂದಲ ಸೃಷ್ಟಿಸಿದೆ.

ಬೆಂಗಳೂರು : ರಾಜ್ಯದಲ್ಲಿ ಆಸ್ತಿ ದಸ್ತಾವೇಜು ನೋಂದಣಿ ಶುಲ್ಕ ದುಪ್ಪಟ್ಟು ಮಾಡಿ ಜನರ ಟೀಕೆಗೆ ಗುರಿಯಾಗಿರುವ ಕಂದಾಯ ಇಲಾಖೆ ಇದೀಗ, ವರ್ಷದ ಹಿಂದೆ ನೋಂದಣಿ ಆಗಿರುವ ಆಸ್ತಿಗಳಿಗೂ ಪರಿಷ್ಕೃತ ನೋಂದಣಿ ಶುಲ್ಕ ಪಾವತಿಸುವಂತೆ ಸಂದೇಶ ಕಳುಹಿಸಿ ತೀವ್ರ ಗೊಂದಲ ಸೃಷ್ಟಿಸಿದೆ.

ಭಾನುವಾರ ಆ.31ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ದಸ್ತಾವೇಜುಗಳ ನೋಂದಣಿ ಶುಲ್ಕ ಶೇ.1 ರಿಂದ ಶೇ.2 ರಷ್ಟಕ್ಕೆ ಪರಿಷ್ಕರಣೆ ಮಾಡಿ ಕಂದಾಯ ಇಲಾಖೆ ಆದೇಶ ಮಾಡಿದೆ.

ಅಲ್ಲದೆ, ಈಗಾಗಲೇ ಶುಲ್ಕ ಪಾವತಿಸಿ ನೋಂದಣಿಗಾಗಿ ಅಪಾಯಿಂಟ್‌ಮೆಂಟ್ ಪಡೆದಿರುವವರೂ ಪರಿಷ್ಕೃತ ಶುಲ್ಕ ಪಾವತಿಸಿದ ಬಳಿಕವೇ ನೋಂದಣಿ ಮಾಡುವುದಾಗಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಆಸ್ತಿ ನೋಂದಣಿ ಬಯಸಿರುವವರಿಗೆ ಎಸ್‌ಎಂಎಸ್‌ ಕಳುಹಿಸುವುದಾಗಿಯೂ ಸ್ಪಷ್ಟಪಡಿಸಿದೆ.

ಆದರೆ, ಎಸ್‌ಎಂಎಸ್‌ ಕಳುಹಿಸುವ ವೇಳೆ 2024ರ ಏಪ್ರಿಲ್‌ನಲ್ಲಿ ನೋಂದಣಿಯಾಗಿರುವ ಆಸ್ತಿಗಳಿಗೂ ಪರಿಷ್ಕೃತ ನೋಂದಣಿ ಶುಲ್ಕ ಪಾವತಿಸುವಂತೆ ಸಂದೇಶಗಳನ್ನು ಕಳುಹಿಸಲಾಗಿದೆ. ಕಂದಾಯ ಇಲಾಖೆಯ ಈ ಯಡವಟ್ಟಿನಿಂದ ಸಾರ್ವಜನಿಕರು ಗೊಂದಲಕ್ಕೆ ಸಿಲುಕಿದ್ದಾರೆ.

ಈ ರೀತಿ ಕಳೆದ ವರ್ಷ ನೋಂದಣಿ ಆಗಿರುವ ಆಸ್ತಿಗಳಿಗೆ (ಅದೇ ಪಿಆರ್‌ಪಿ ಸಂಖ್ಯೆ ಸಹಿತ) ಕಳುಹಿಸಿರುವ ಸಂದೇಶಗಳು ಕನ್ನಡಪ್ರಭಕ್ಕೆ ಲಭ್ಯವಾಗಿವೆ.

ಏನಿದು ಗೊಂದಲ?:

ಆ.31ರ ಬಳಿಕ ನೋಂದಣಿಗೆ ಈ ಮೊದಲೇ ಅಪಾಯಿಂಟ್‌ಮೆಂಟ್‌ ಪಡೆದಿರುವರು ಪರಿಷ್ಕೃತ ನೋಂದಣಿ ಶುಲ್ಕವನ್ನು ಸುಗಮವಾಗಿ ಇಲಾಖೆಯ ಪೋರ್ಟಲ್‌ ಮೂಲಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ನೋಂದಣಿ ಶುಲ್ಕ ಪಾವತಿಸಿ ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಸಮಯ ಕಾಯ್ದಿರಿಸಿಕೊಂಡವರು ಅಥವಾ ಶುಲ್ಕ ಪಾವತಿಸಿ ಸಮಯ ಕಾಯ್ದಿರಿಸುವ ನಿರೀಕ್ಷೆಯಲ್ಲಿರುವವರು ವ್ಯತ್ಯಾಸದ ಮೊತ್ತ ಪೋರ್ಟಲ್‌ ಮೂಲಕವೇ ಪಾವತಿಸಬೇಕು. ಈ ಹಿಂದೆ ಬಳಸಿದ ಲಾಗಿನ್‌ ಮೂಲಕವೇ ಹೆಚ್ಚುವರಿ ಶುಲ್ಕವನ್ನೂ ಪಾವತಿಸಬೇಕು. ಅರ್ಜಿದಾರರಿಗೆ ನೆರವಾಗುವ ದೃಷ್ಟಿಯಿಂದ ಅಗತ್ಯ ಸೂಚನೆಗಳನ್ನು ಒಳಗೊಂಡ ಎಸ್‌ಎಂಎಸ್‌ ನೇರವಾಗಿ ಅವರ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ರವಾನೆ ಮಾಡುವುದಾಗಿ ಇಲಾಖೆ ತಿಳಿಸಿತ್ತು.

ಇದೇ ವೇಳೆ ಇತರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪ್ರಮಾಣ ಕಡಿಮೆ ಇದೆ ಎಂದೂ ಶುಲ್ಕ ಹೆಚ್ಚಳಕ್ಕೆ ಸಮರ್ಥನೆ ನೀಡಿತ್ತು.

ಇದೀಗ ವರ್ಷದ ಹಿಂದೆ ನೋಂದಣಿ ಆಗಿರುವ ಆಸ್ತಿಗಳಿಗೂ ಶುಲ್ಕ ಪಾವತಿಸುವಂತೆ ಸಂದೇಶ ಕಳುಹಿಸಲಾಗಿದೆ. ಹೀಗಾಗಿ ತಮಗೂ ಪರಿಷ್ಕೃತ ಶುಲ್ಕ ಅನ್ವಯ ಆಗಲಿದೆಯೇ, ಪರಿಷ್ಕೃತ ಶುಲ್ಕ ಪಾವತಿಸದಿದ್ದರೆ ನೋಂದಣಿ ಆಗಿರುವ ದಸ್ತಾವೇಜುಗಳಿಗೆ ಸಮಸ್ಯೆಯಾಗಲಿದೆಯೇ ಎಂಬ ಬಗ್ಗೆ ಗೊಂದಲ ಮೂಡಿದೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ.

ಏನಿದು ಗೊಂದಲ?

- ಪರಿಷ್ಕೃತ ಆಸ್ತಿ ನೋಂದಣಿ ಶುಲ್ಕ ರಾಜ್ಯಾದ್ಯಂತ ಆ.31ರಿಂದ ಜಾರಿ

- ಆ ಪ್ರಕಾರ ದುಪ್ಪಟ್ಟು ಶುಲ್ಕ ಕಟ್ಟುವಂತೆ ಆಸ್ತಿ ಮಾಲೀಕರಿಗೆ ಎಸ್‌ಎಂಎಸ್‌

- ಆ.31ರ ಬಳಿಕ ನೋಂದಾಯಿಸುವ ಮಾಲೀಕರಿಗಷ್ಟೆ ಸಂದೇಶ ಕಳಿಸಬೇಕಿತ್ತು

- ಅದು ಬಿಟ್ಟು 2024ರಲ್ಲಿ ಆಸ್ತಿ ನೋಂದಣಿ ಮಾಡಿಸಿಕೊಂಡವರಿಗೂ ಸಂದೇಶ

- ಹೀಗಾಗಿ ಹೊಸ ನೋಂದಣಿ ಶುಲ್ಕ 2024ರಿಂದಲೇ ಅನ್ವಯವೇ ಎಂಬ ಗೊಂದಲ

- ಈ ಬಗ್ಗೆ ಸ್ಪಷ್ಟನೆ ನೀಡದ ಅಧಿಕಾರಿಗಳು । ಆಸ್ತಿ ಮಾಲೀಕರಲ್ಲಿ ನಿಲ್ಲದ ಗಲಿಬಿಲಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌