ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿಯೂ ದೂರು ಪುಸ್ತಕ ಇಟ್ಟು, ರೋಗಿಗಳಿಂದ ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ಪಡೆಯುವ ಕ್ರಮ ಜಾರಿಗೆ ತರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಕೋಲಾರ (ಆ.01): ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿಯೂ ದೂರು ಪುಸ್ತಕ ಇಟ್ಟು, ರೋಗಿಗಳಿಂದ ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ಪಡೆಯುವ ಕ್ರಮ ಜಾರಿಗೆ ತರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ನಗರದ ಎಸ್ ಎನ್ ಆರ್ ಆಸ್ಪತ್ರೆಗೆ ಭಾನುವಾರ ದಿಢೀರ್ ಭೇಟಿ ನೀಡಿ ರೋಗಿಗಳನ್ನು ಭೇಟಿಯಾಗಿ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಇದು 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿದ್ದು, ಇಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.
ಹೊರಗಡೆ ಪರೀಕ್ಷೆಗೆ ಚೀಟಿ: ಆಸ್ಪತ್ರೆಯಲ್ಲಿ ರೋಗಿಗಳನ್ನು ಭೇಟಿಯಾಗಿ ಚಿಕಿತ್ಸೆಯ ಬಗ್ಗೆ ವಿಚಾರಿಸಿದ ಸಚಿವರಿಗೆ, ಹಲವು ಪರೀಕ್ಷೆಗಳನ್ನು ಖಾಸಗಿಯಾಗಿ ಮಾಡಿಸಲು ಚೀಟಿ ಬರೆದುಕೊಟ್ಟಿರುವ ಬಗ್ಗೆ ಕೆಲವರು ದೂರು ಸಲ್ಲಿಸಿದರು. ಜಿಲ್ಲಾಸ್ಪತ್ರೆಗಳಲ್ಲಿ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಹೊರಗೆ ಪರೀಕ್ಷೆಗೆ ಬರೆದುಕೊಟ್ಟಿರುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಸಚಿವರು ಹೇಳಿದರು.
ನಾನು ನುಡಿದಂತೆ ನಡೆದುಕೊಂಡಿದ್ದೇನೆ: ಸಚಿವ ಸುಧಾಕರ್
ಪತ್ರಕರ್ತರ ಮೇಲಿನ ಹಲ್ಲೆಗೆ ಖಂಡನೆ: ಶಾಸಕ ರಮೇಶ್ ಕುಮಾರ್ ಅವರು ಇತ್ತೀಚಿಗೆ ಪತ್ರಕರ್ತರ ಮೇಲೆ ನಡೆಸಿರುವ ಹಲ್ಲೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದಕ್ಕಿಂತ ಅಮಾನುಷ ಮತ್ತೊಂದಿಲ್ಲ. ಎರಡು ಬಾರಿ ಸಭಾಧ್ಯಕ್ಷರಾದವರು ತಮ್ಮದೇ ಜಿಲ್ಲೆಯಲ್ಲಿ ಇಂತಹ ಘಟನೆಗೆ ಕಾರಣರಾಗಬಾರದಿತ್ತು. ಇದು ಅವರ ರಾಕ್ಷಸ ವ್ಯಕ್ತಿತ್ವವನ್ನು ತೋರಿಸುತ್ತದೆ, ಮೊದಲಿನಿಂದಲೂ ತಮ್ಮ ರಾಕ್ಷಸ ವ್ಯಕ್ತಿತ್ವದಿಂದಲೇ ರಾಜಕೀಯ ಮಾಡಿಕೊಂಡು ಬಂದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಲತಃ ಉತ್ತಮ ಬುದ್ಧಿ ಇದ್ದರೆ ಇಂತಹ ವಕ್ರ ಬುದ್ಧಿ ಬರಲು ಸಾಧ್ಯವಿಲ್ಲ, ಹುಟ್ಟಗುಣ ಸುಟ್ಟರೂ ಹೋಗಲ್ಲ ಎಂಬುದು ಅವರಿಗೆ ಸೂಕ್ತವಾಗಿದೆ, ಅವರ ಜೀವನದುದ್ದಕ್ಕೂ ಎದರಿಸಿ, ಬೆದರಿಸಿ ರಾಜಕೀಯ ಮಾಡಿಕೊಂಡು ಬಂದಿರುವ ಮುಖವೇ ಪತ್ರಕರ್ತರ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ರಮೇಶ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.
ತನಿಖಾ ಸಂಸ್ಥೆಗೆ ನನ್ನ ವಿರುದ್ಧ ದೂರು ನೀಡಲಿ: ಏನಾದರೂ ನನ್ನ ವಿರುದ್ಧ ತನಿಖೆ ಮಾಡಿಸಬೇಕಾದರೆ ಅಧಿಕೃತವಾದ ಸೂಕ್ತ ತನಿಖಾ ಸಂಸ್ಥೆಗಳು ಇವೆ. ಅವುಗಳಿಗೆ ದೂರು ಕೊಟ್ಟು ತನಿಖೆ ಮಾಡಿಸಲಿ ಎಂದು ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದರು. ಚಿಕ್ಕಬಳ್ಳಾಪುರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಇತ್ತೀಚೆಗೆ ಕಾಂಗ್ರೆಸ್ ಸಭೆಯಲ್ಲಿ ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ತಮ್ಮ ವಿರುದ್ದ ಮಾಡಿರುವ ಆರೋಪಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಗೊತ್ತು ಗುರಿ ಇಲ್ಲದ ಡಬ್ಬಲ್ ಸ್ಟಿಯರಿಂಗ್ ಕಾಂಗ್ರೆಸ್: ಸಚಿವ ಸುಧಾಕರ್
ಗಂಧದ ಜೊತೆ ಜಗಳವಾದಿತೆ ಸುವಾಸನೆ ಇರುತ್ತದೆ. ಆದರೆ ಗಲೀಜು ಜೊತೆ ಜಗಳವಾಡಿದರೆ ಏನಾಗುತ್ತದೆಯೆಂದು ಕೇಳುವ ಮೂಲಕ ಸಚಿವ ಡಾ.ಕೆ.ಸುಧಾಕರ್, ಮಾಜಿ ಶಾಸಕ ಚಿಂತಾಮಣಿ ಸುಧಾಕರ್ ವಿರುದ್ಧ ಗರಂ ಆದರು. ನಾನು ಏನು ಗಳಿಸಿದ್ದೇನೆ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇನೆ. ನಾನು ಇವರ ರೀತಿ ಸರ್ಕಾರಿ ಆಸ್ತಿಗಳನ್ನು ಕಬಳಿಸಿಲ್ಲ. ಕೆಲ ದಿನ ಕಾಯರಿ ಇವರ ಬಗ್ಗೆ ಎಲ್ಲವನ್ನು ಬಿಚ್ಚಿಡುತ್ತೇನೆಂದರು.