
ಬೆಂಗಳೂರು (ಆ.10) : ಸ್ವಪಕ್ಷೀಯ ಶಾಸಕರ ಅಸಮಧಾನ ತಣಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರವೂ ಸಚಿವರು ಮತ್ತು ಶಾಸಕರ ಸರಣಿ ನಡೆಸಿದ್ದಾರೆ. ಮೂರನೇ ದಿನ 7 ಜಿಲ್ಲೆಗಳ 30ಕ್ಕೂ ಹೆಚ್ಚಿನ ಕಾಂಗ್ರೆಸ್ ಶಾಸಕರ ಜತೆ ರಾತ್ರಿವರೆಗೂ ಸರಣಿ ಸಭೆ ನಡೆಸಿದರು. ಈ ವೇಳೆ, ‘ಸಚಿವರು ನಿಮ್ಮ ಅಹವಾಲಿನ ಬಗ್ಗೆ ಗಮನ ಕೊಡದಿದ್ದರೆ ನನಗೆ ದೂರಿ. ಆದರೆ ಬಹಿರಂಗ ಹೇಳಿಕೆ ನೀಡದೇ ಪಕ್ಷದ ಚೌಕಟ್ಟಲ್ಲೇ ಇದನ್ನು ಮಾಡಿ’ ಎಂದು ಹೇಳಿದರು ಎಂದು ತಿಳಿದುಬಂದಿದೆ.
ಗೃಹಕಚೇರಿ ಕೃಷ್ಣಾದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಯಿಂದ ಆರಂಭವಾದ ಸಭೆಯಲ್ಲಿ ಮಂಡ್ಯ, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 30ಕ್ಕೂ ಹೆಚ್ಚಿನ ಶಾಸಕರು, ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಕಾರ್ಯದರ್ಶಿಗಳ ಜತೆ ಚರ್ಚೆ ನಡೆಸಿದರು. ಈ ವೇಳೆ ಶಾಸಕರ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಕುರಿತಂತೆ ಅಹವಾಲು ಆಲಿಸಿದರು. ಕ್ಷೇತ್ರಗಳಲ್ಲಿ ಆಗಬೇಕಿರುವ ಕೆಲಸಗಳು, ಅನುದಾನ, ವರ್ಗಾವಣೆ ಹಾಗೂ ಲೋಕಸಭಾ ಚುನಾವಣೆ ತಯಾರಿ ಕುರಿತಂತೆ ಚರ್ಚೆ ನಡೆಸಿ ಶಾಸಕರು ಹಾಗೂ ಸಚಿವರಿಗೆ ಕೆಲವೊಂದು ಸೂಚನೆಗಳನ್ನು ನೀಡಿದರು.
ಎಸ್ಸಿ, ಎಸ್ಟಿಅಭಿವೃದ್ಧಿಗೆ ₹34300 ಕೋಟಿ;ಸಿಎಂ ನೇತೃತ್ವದ ಸಭೆ ಸಮ್ಮತಿ
ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಯ ಶಾಸಕರೊಂದಿಗೆ ಸಮನ್ವಯತೆ ಸಾಧಿಸಿ, ಅವರು ತಿಳಿಸುವ ವಿಚಾರಗಳ ಬಗ್ಗೆ ಗಮನಹರಿಸಬೇಕು. ಶಾಸಕರ ಸಮಸ್ಯೆಗಳಿಗೆ ತಕ್ಷಣದಲ್ಲಿ ಸ್ಪಂದಿಸಬೇಕು. ತಮ್ಮಿಂದ ಪರಿಹರಿಸಲು ಸಾಧ್ಯವಾಗದಿದ್ದರೆ, ನನ್ನ ಗಮನಕ್ಕೆ ತರಬೇಕು. ಒಂದು ವೇಳೆ ಸಚಿವರು ಗಮನ ಕೊಡದಿದ್ದರೆ ನನಗೆ ನೇರವಾಗಿ ತಿಳಿಸಿ ಎಂದು ಹೇಳಿದರು.
ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಮಾತನಾಡದೆ ಪಕ್ಷದ ಚೌಕಟ್ಟಿನಲ್ಲಿ ವಿಷಯ ಪ್ರಸ್ತಾಪಿಸಬೇಕು. ಜತೆಗೆ ಪತ್ರ ಬರೆಯುವುದು ಸೇರಿದಂತೆ ಬೇರೆ ಯಾವುದೇ ರೀತಿಯ ಚಟುವಟಿಕೆ ಮಾಡದೆ ಖುದ್ದು ಭೇಟಿ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಶಾಸಕರಿಗೆ ಸೂಚಿಸಿದರು.
ಲೋಕಸಭೆ ಚುನಾವಣೆಗೆ ತಯಾರಿ ಹಾಗೂ ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಹೆಚ್ಚಿನ ಗಮನಹರಿಸಿ. ಲೋಕಸಭಾ ಚುನಾವಣೆಗೆ ಸೂಕ್ತ ಅಭ್ಯರ್ಥಿಯನ್ನೂ ಸೂಚಿಸಬೇಕು ಹಾಗೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿವಿಧ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಕೆ.ಎಚ್. ಮುನಿಯಪ್ಪ, ಎನ್.ಎಸ್. ಬೋಸರಾಜು, ಕೆ. ವೆಂಕಟೇಶ್, ಚೆಲುವರಾಯಸ್ವಾಮಿ, ಕೆ.ಎನ್. ರಾಜಣ್ಣ, ಡಾ. ಸುಧಾಕರ್, ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಆಯಾ ಜಿಲ್ಲೆಗಳ ಶಾಸಕರು ಪ್ರತ್ಯೇಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಠ್ಯ ಪರಿಷ್ಕರಣೆ ಗೊಂದಲ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
ಇನ್ನೂ ಮೂರು ದಿನ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah meeting with congress MLAs) ಅವರು ಮೂರು ದಿನಗಳಿಂದ ಎಲ್ಲ ಜಿಲ್ಲೆಗಳ ಕಾಂಗ್ರೆಸ್ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ನಿಗದಿಯಾಗಿದ್ದ ಜಿಲ್ಲೆಗಳ ಕೆಲ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಹಾಗೆಯೇ ಇನ್ನೂ ಕೆಲ ಜಿಲ್ಲೆಗಳ ಶಾಸಕರ ಸಭೆ ನಡೆಸುವುದು ಬಾಕಿಯಿದೆ. ಹೀಗಾಗಿ ಇನ್ನೂ ಎರಡ್ಮೂರು ದಿನಗಳ ಕಾಲ ಶಾಸಕರು ಹಾಗೂ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ಅಹವಾಲು ಆಲಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ