ಹಿಂದುಳಿದವರ ಸಬಲೀಕರಣಕ್ಕೆ ಕಂಕಣ ಬದ್ಧ: ಕೆ.ಎಸ್‌.ಈಶ್ವರಪ್ಪ

By Kannadaprabha NewsFirst Published Oct 29, 2022, 11:56 AM IST
Highlights

ನಿರ್ಲಕ್ಷಿತ ಸಮುದಾಯಗಳನ್ನು ವೋಟ್‌ಬ್ಯಾಂಕ್‌ನಿಂದ ಅಭಿವೃದ್ಧಿ ಕೇಂದ್ರಿತ ರಾಜಕಾರಣಕ್ಕೆ ತಿರುಗಿಸಿದ ಬಿಜೆಪಿ

ಶಿವಮೊಗ್ಗ(ಅ.29): ಹಿಂದುಳಿದ ಸಮುದಾಯಗಳೆಂದರೆ ಬಿಜೆಪಿಗೆ ರಾಜಕೀಯ ಬಂಡವಾಳವಲ್ಲ. ಬದಲಿಗೆ, ಈ ಸಮುದಾಯಗಳು ಒಂದು ಸಮಾಜದ ಜೀವಂತಿಕೆಯನ್ನು ಕಾಪಾಡುತ್ತಿರುವ ಶಕ್ತಿಗಳು ಎನ್ನುವುದು ನಮ್ಮ ಪಕ್ಷದ ಮತ್ತು ಸರ್ಕಾರದ ನಂಬಿಕೆ. ನಮಗೆ ಸಿಕ್ಕಿರುವ ಜನಾದೇಶ ಗೌರವಿಸಿ, ಹಿಂದುಳಿದ ಸಮುದಾಯಗಳ ಆಶೋತ್ತರಗಳಿಗೆ ಸ್ಪಂದಿಸುವ ಹೊಸ ಶಕೆ ಈಗ ನಿರ್ಮಾಣವಾಗಿದೆ.

ಭಾರತವು ಹೇಗೋ ಹಾಗೆ ಕರ್ನಾಟಕವೂ ನೂರಾರು ಸಣ್ಣಪುಟ್ಟ, ಹಿಂದುಳಿದ ಮತ್ತು ಅಸಂಘಟಿತ ಜಾತಿ-ಸಮುದಾಯಗಳ ಆಶ್ರಯ ತಾಣ. ಇಲ್ಲಿ ಕೇವಲ ಒಂದಿಷ್ಟು ಸಾವಿರ ಜನಸಂಖ್ಯೆಯುಳ್ಳ ಸಮುದಾಯಗಳಿಂದ ಹಿಡಿದು ಹಲವು ಲಕ್ಷಗಳಷ್ಟು ಜನಸಂಖ್ಯೆಯನ್ನು ಹೊಂದಿರುವ ಅಪಾರ ಜಾತಿ-ಜನಾಂಗಗಳಿವೆ. ಲಿಂಗಾಯತರು, ಒಕ್ಕಲಿಗರು, ಕುರುಬರು, ಈಡಿಗ-ಬಿಲ್ಲವರು, ಗೊಲ್ಲರು, ಬೆಸ್ತರು, ಉಪ್ಪಾರರು, ಬಲಿಜರು, ಮಡಿವಾಳರು, ದೇವಾಂಗರು, ವಿಶ್ವಕರ್ಮರು, ಸವಿತಾ ಸಮಾಜ ಹೀಗೆ ಲೆಕ್ಕವಿಲ್ಲದಷ್ಟು ಹಿಂದುಳಿದ ಸಮುದಾಯಗಳು ನಮ್ಮಲ್ಲಿವೆ.

Latest Videos

ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ

ಶತ-ಶತಮಾನಗಳ ಕಾಲ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದ ಈ ಸಮುದಾಯಗಳ ಪೈಕಿ ಮೇಲಿನ ಒಂದೆರಡು ಜಾತಿಗಳನ್ನು ಹೊರತುಪಡಿಸಿದರೆ, ಉಳಿದ ನೂರಾರು ಸಮುದಾಯಗಳು ರಾಜಕೀಯ ದನಿ ಪಡೆದಿದ್ದಂತೂ ಇಲ್ಲವೇ ಇಲ್ಲ. ಆದರೆ, ಇಂತಹ ಸಮಾಜಗಳಿಗೆ ಸೇರಿದ ಕೋಟ್ಯಂತರ ಜನರು ನಮ್ಮ ಇಡೀ ಸಮಾಜದಲ್ಲಿರುವ ಅನ್ಯೋನ್ಯ ಭಾವನೆಯ ಆಧಾರಸ್ತಂಭಗಳಾಗಿ, ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ, ಒಂದೊಂದು ಸಮುದಾಯಕ್ಕೂ ವಿಶಿಷ್ಟವಾಗಿರುವ ಕುಲಕಸುಬುಗಳಿದ್ದು, ಆ ಕೌಶಲ್ಯಗಳನ್ನು ಹಲವು ಸವಾಲುಗಳ ಮಧ್ಯೆಯೂ ಇನ್ನೂ ಉಳಿಸಿಕೊಳ್ಳಲಾಗಿದೆ ಎನ್ನುವುದು ಒಂದು ಹೆಗ್ಗಳಿಕೆ. ಇದಕ್ಕೆ ಉದಾಹರಣೆಯೆಂದರೆ, ದೇವಾಂಗರು ನೇಯುವ ರೇಷ್ಮೆ ಸೀರೆಯ ಅನನ್ಯತೆ, ಅಕ್ಕಸಾಲಿಗರು ನಾಜೂಕಿನಿಂದ ಮಾಡುವ ಒಡವೆಗಳು, ಗೊಲ್ಲ ಯಾದವ ಜನಾಂಗದವರು ತನ್ಮಯತೆಯಿಂದ ಮಾಡುವ ಪಶುಪಾಲನೆ, ಇಟ್ಟಿಗೆಯನ್ನು ಹದವಾಗಿ ಸುಟ್ಟು ಅದಕ್ಕೊಂದು ಒಪ್ಪವಾದ ರೂಪ ಕೊಡುವ ಉಪ್ಪಾರರ ಕುಶಲತೆ ಹೀಗೆ ಹಲವನ್ನು ನಾವು ನೋಡಬಹುದು.

ವೋಟ್‌ ಬ್ಯಾಂಕ್‌ ರಾಜಕಾರಣ

ಸ್ವತಂತ್ರ ಭಾರತ ಮತ್ತು ಕರ್ನಾಟಕದ ಇತಿಹಾಸವನ್ನು ನೋಡಿದರೆ, ಕಾಂಗ್ರೆಸ್‌ ಪಕ್ಷವು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದೆ. 1980ರ ದಶಕದವರೆಗಂತೂ ನಮ್ಮಲ್ಲಿ ಇದ್ದುದೇ ಆ ಪಕ್ಷದ ಯಜಮಾನಿಕೆ. ಭಾರತೀಯ ಜನಸಂಘದ ಸಂಸ್ಥಾಪಕರಾದ ಶಾಮಪ್ರಸಾದ್‌ ಮುಖರ್ಜಿಯವರ ಮೂಲಕ 1952ರಲ್ಲೇ ಕಾಂಗ್ರೆಸ್ಸಿಗೆ ಪರ್ಯಾಯವಾದ ರಾಜಕಾರಣ ಚಿಗುರೊಡೆಯಿತು ಎನ್ನುವುದೇನೋ ನಿಜ. ಆದರೆ, ಇಂತಹ ಸಮಾಜಪರ ಮತ್ತು ಜನಮುಖಿ ರಾಜಕೀಯ ಸಂಸ್ಕೃತಿಯು ನಮ್ಮಲ್ಲಿ ಬೇರೂರಲು 40-45 ವರ್ಷಗಳೇ ಹಿಡಿದವು. ಏತನ್ಮಧ್ಯೆ, ಪ್ರಶ್ನಾತೀತ ಎಂಬಂತಿದ್ದ ಕಾಂಗ್ರೆಸ್‌ ಪಕ್ಷ ದಲಿತರು ಮತ್ತು ಹಿಂದುಳಿದವರನ್ನೆಲ್ಲ ತನ್ನ ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ಅನುಗುಣವಾಗಿ ವಿಭಜಿಸುವ ಮೂಲಕ, ಅವರ ಮೂಗಿಗೆ ತುಪ್ಪ ಸವರುವ ಕೆಲಸವನ್ನೇ ಮಾಡಿಕೊಂಡು ಬರುತ್ತಿತ್ತು. ಹೀಗಾಗಿ, ಹಿಂದುಳಿದ ಜಾತಿ-ಜನಾಂಗಗಳು ಕಾಂಗ್ರೆಸ್‌ ಮೇಲೆ ತಾವು ಹೊಂದಿದ್ದ ಕುರುಡುನಿಷ್ಠೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಆದರೆ, ಭಾರತೀಯ ಜನತಾ ಪಕ್ಷವು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ಸಿನ ಈ ವೇಷದ ರಾಜಕೀಯದ ಬಣ್ಣ ಬಯಲಾಯಿತು! ತಾನು ಅರವತ್ತು ವರ್ಷ ಈ ಸಮುದಾಯಗಳ ವೋಟುಗಳ ಬಲದ ಮೇಲೆಯೇ ಜನಾದೇಶ ಪಡೆದುಕೊಂಡು ಬಂದರೂ, ಈ ಸಮುದಾಯಗಳ ಸಬಲೀಕರಣ ತನ್ನಿಂದೇಕೆ ಸಾಧ್ಯವಾಗಲಿಲ್ಲ ಎನ್ನುವುದಕ್ಕೆ ಕಾಂಗ್ರೆಸ್‌ ಪಕ್ಷವು ಈ ರಾಜ್ಯದ ಜನತೆಗೆ ಉತ್ತರಿಸಬೇಕು. ಆದರೆ, ಈ ಪುರಾತನ ಪಕ್ಷವು ಉತ್ತರದಾಯಿತ್ವದ ಗುಣದಿಂದ ದೂರವಾಗಿ ಮೂರು ದಶಕಗಳೇ ಆಗುತ್ತ ಬಂದವು ಅಲ್ಲವೇ?

ಅಭಿವೃದ್ಧಿ ಕೇಂದ್ರಿತ ರಾಜಕಾರಣ

ಬಿಜೆಪಿಯದು ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್‌ ಎನ್ನುವ ಮಂತ್ರದೊಂದಿಗೆ ಮುಂದಡಿ ಇಡುವ ಸಂಸ್ಕೃತಿ. ಕಾಂಗ್ರೆಸ್ಸಿನ ವಿಭಜಕ ಮನಸ್ಥಿತಿಯ ರಾಜಕಾರಣ ಮತ್ತು ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕಾರಣ ಎರಡನ್ನೂ ಬಿಜೆಪಿ ಮೊದಲ ದಿನದಿಂದಲೂ ಸೈದ್ಧಾಂತಿಕವಾಗಿ ವಿರೋಧಿಸಿಕೊಂಡು ಬರುತ್ತಿದೆ. ಇಷ್ಟೇ ಅಲ್ಲ, ಸಮಾಜದ ಸಕಲ ಸಮುದಾಯಗಳ ಸಮಷ್ಟಿಹಿತವನ್ನೇ ನಾವು ಪ್ರತಿಪಾದಿಸಿಕೊಂಡು ಬಂದಿದ್ದೇವೆ. ಒಂದು ಕಾಲದಲ್ಲಿ ಕಾಂಗ್ರೆಸ್‌ ಮತ್ತು ಅದರ ಪಡಿಯಚ್ಚುಗಳಂತಹ ಪಕ್ಷಗಳ ಪರವಾಗಿದ್ದ ನೂರಾರು ಸಮುದಾಯಗಳು ಇಂದು ಬಿಜೆಪಿ ಹೊಂದಿರುವ ಸಾಮಾಜಿಕ ಬೆಂಬಲದ ನೆಲೆಯ ಆಧಾರಸ್ತಂಭಗಳಾಗಿರುವುದೇ ಇದಕ್ಕೆ ಸಾಕ್ಷಿ. ಇದಕ್ಕೆ ತಕ್ಕಂತೆ ಬಿಜೆಪಿ ಕೂಡ ಹಿಂದುಳಿದ ಸಮುದಾಯಗಳ ಹಿತಾಸಕ್ತಿಗಳನ್ನು ಪ್ರಾಮಾಣಿಕವಾಗಿ ಕಾಪಾಡಿಕೊಂಡು ಬರುತ್ತಿದೆ. ದೀನದಯಾಳ್‌ ಉಪಾಧ್ಯಾಯರ ಅಂತ್ಯೋದಯ, ವಾಜಪೇಯಿಯವರ ಇನ್‌ಕ್ಲೂಸಿವ್‌ ರಾಜಕಾರಣ, ಆಡ್ವಾಣಿಯವರ ಧ್ಯೇಯನಿಷ್ಠ ರಾಜಕಾರಣ ಮತ್ತು ಈಗಿನ ದಕ್ಷ ಹಾಗೂ ಜನಪ್ರಿಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಸಂಕಲ್ಪ ಬಲದ ಅಭಿವೃದ್ಧಿಕೇಂದ್ರಿತ ರಾಜಕಾರಣ ಇವುಗಳ ಹಿಂದಿನ ನಾಲ್ಕು ಶಕ್ತಿಗಳಾಗಿವೆ.

ಉದಾಹರಣೆಗೆ, ಕರ್ನಾಟಕದಲ್ಲಿ ಲಿಂಗಾಯತರು, ಒಕ್ಕಲಿಗರು ಮತ್ತು ಕುರುಬರು ಸಾಮಾಜಿಕವಾಗಿ ಮೇಲ್ಜಾತಿಗಳ ಸ್ತರದಲ್ಲೇ ಇದ್ದಾರೆ. ಆದರೆ ಈ ಸಮುದಾಯಗಳು ಸಂಖ್ಯಾಬಾಹುಳ್ಯವನ್ನು ಹೊಂದಿಯೂ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿವೆ. ಅಂದರೆ ಆರೇಳು ದಶಕಗಳ ಕಾಲ ಆಳಿದ ಪಕ್ಷಗಳೆಲ್ಲ ಯಥಾಸ್ಥಿತಿ ವಾದವನ್ನು ಪೋಷಿಸಿಕೊಂಡು ಬರುತ್ತಿದ್ದವು ಎಂದರ್ಥ. ಇಂತಹ ಪಟ್ಟಭದ್ರ ರಾಜಕಾರಣವನ್ನು ಭಗ್ನಗೊಳಿಸಿದ್ದು ಬಿಜೆಪಿಯ ಹಿರಿಮೆ! ಹಿಂದೆ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಈ ಅಶಕ್ತ ಸಮುದಾಯಗಳಿಗೆ ರಾಜಕೀಯ ಅಧಿಕಾರವನ್ನು ಕೊಡುವ ಕೆಲಸ ನಡೆಯಿತೆನ್ನುವುದು ನಿಜ. ಆದರೆ ಈ ಸಮುದಾಯಗಳಿಗೆ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬಿದರೆ ಮಾತ್ರ ಸುಸ್ಥಿರ ಸಮಾಜವನ್ನು ಕಟ್ಟುಬಹುದು ಎನ್ನುವ ಸತ್ಯವನ್ನು ಅರ್ಥ ಮಾಡಿಕೊಂಡಿದ್ದು ಮಾತ್ರ ಬಿಜೆಪಿಯೇ.

ಒಂದು ವಸ್ತುನಿಷ್ಠ ಚಿತ್ರಣ

ನಮಗೆ ಅಧಿಕಾರ ಸಿಕ್ಕಾಗ, ಹಿಂದುಳಿದ ವರ್ಗಗಳಿಗೊಂದು ಸಾಂಸ್ಕೃತಿಕ ಅಸ್ಮಿತೆ ಇರಬೇಕೆಂಬ ಸದುದ್ದೇಶದಿಂದ ವಾಲ್ಮೀಕಿ ಮತ್ತು ಕನಕದಾಸರ ಜಯಂತಿಗಳ ಆಚರಣೆಗೆ ಶ್ರೀಕಾರ ಹಾಕಿದ್ದನ್ನು ಇಲ್ಲಿ ನೋಡಬಹುದು; ಈಗ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರವು ರೈತರು, ನೇಕಾರರು, ಮೀನುಗಾರರು ಮತ್ತು ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಆರಂಭಿಸಿರುವ ‘ರೈತ ವಿದ್ಯಾನಿಧಿ’ಯಂಥ ರಚನಾತ್ಮಕ ಉಪಕ್ರಮದ ನಿದರ್ಶನವನ್ನು ಗಮನಿಸಬಹುದು; ಹಾಗೆಯೇ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ವಸತಿ ಅನುಕೂಲವನ್ನು ಕಲ್ಪಿಸಿಕೊಡುವ ಉದ್ದೇಶದ ದೀನದಯಾಳ್‌ ಉಪಾಧ್ಯಾಯ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಕನಕದಾಸರ ಹೆಸರಿನಲ್ಲಿ ರಾಜ್ಯದ ಅನೇಕ ಕಡೆಗಳಲ್ಲಿ ತಲೆ ಎತ್ತುತ್ತಿರುವ ಹಾಸ್ಟೆಲ್ಲುಗಳ, ಹಿಂದುಳಿದ ಜಾತಿಗಳ ಮಹಿಳೆಯರೇ ಹೆಚ್ಚಾಗಿ ಸಕ್ರಿಯರಾಗಿರುವ ಎರಡು ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಬಲವರ್ಧನೆ ಮತ್ತು ಮಾರುಕಟ್ಟೆಸೃಷ್ಟಿ, ಹೀಗೆ ಅನೇಕ ಅರ್ಥಪೂರ್ಣ ಉಪಕ್ರಮಗಳ ಮೂಲಕ ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಯ ಕನಸನ್ನು ಬಿಜೆಪಿ ನನಸಾಗಿಸುತ್ತಿದೆ. ಇದೊಂದು ಪ್ರಾಮಾಣಿಕವಾದ ವಸ್ತುನಿಷ್ಠ ಚಿತ್ರಣವೇ ವಿನಾ ಇದರಲ್ಲಿ ಕಿಂಚಿತ್ತೂ ಉತ್ಪ್ರೇಕ್ಷೆ ಇಲ್ಲ ಎಂದು ನಾವು ನಮ್ರವಾಗಿ ಹೇಳುತ್ತೇವೆ.

ಅಯೋಧ್ಯೆ ಸ್ಫೋಟಿಸಲು ಪಿಎಫ್ಐ ಯೋಜನೆ, ಈಶ್ವರಪ್ಪ ಖಂಡನೆ

ಇಷ್ಟೇ ಅಲ್ಲ, ರಾಜ್ಯದ ಜನಸಂಖ್ಯೆಯಲ್ಲಿ ಶೇ.15ಕ್ಕಿಂತ ಹೆಚ್ಚು ಪಾಲು ಹೊಂದಿರುವ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಹಿತಾಸಕ್ತಿಗಳನ್ನು ಪೊರೆಯಲು ರಾಜ್ಯ ಬಿಜೆಪಿ ಸರ್ಕಾರವು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿದ್ದು, ಇವುಗಳಿಗೆ ತಲಾ 500 ಕೋಟಿ ರುಪಾಯಿಗಳಷ್ಟುಬೃಹತ್‌ ಅನುದಾನವನ್ನು ನೀಡಿದೆ. ಹಾಗೆಯೇ, ಸಂಖ್ಯಾಬಾಹುಳ್ಯವಿಲ್ಲದೆ ಇರುವ ಕಾಡುಗೊಲ್ಲ ಸಮುದಾಯದ ಏಳ್ಗೆಗೂ ಬಿಜೆಪಿ ಸರ್ಕಾರವು ಪ್ರತ್ಯೇಕ ನಿಗಮವನ್ನೇ ಸ್ಥಾಪಿಸಿದೆ. ಇನ್ನೊಂದೆಡೆಯಲ್ಲಿ, 3,526 ತಾಂಡಾ ಮತ್ತು ಕುರುಬರಹಟ್ಟಿಗಳನ್ನು ‘ಕಂದಾಯ ಗ್ರಾಮ’ ಎಂದು ಗುರುತಿಸಿ, ಹಕ್ಕುಪತ್ರ ನೀಡಲಾಗಿದೆ. ನಮ್ಮ ಸರ್ಕಾರದ ಈ ನಿರ್ಧಾರದಿಂದಾಗಿ ಇಲ್ಲೆಲ್ಲ ಅಂಗನವಾಡಿಗಳು, ಶಾಲೆಗಳು ಮತ್ತು ಇತರ ಸೌಲಭ್ಯಗಳ ಮಹಾಪೂರವೇ ಹರಿಯುತ್ತಿದೆ. ಬಿಲ್ಲವ ಬಂಧುಗಳು ಸೇರಿದಂತೆ ಹಿಂದುಳಿದವರ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಶ್ರೀ ನಾರಾಯಣ ಗುರುಗಳ ಸ್ಮರಣೆಯಲ್ಲಿ ದಕ್ಷಿಣ ಕನ್ನಡದ, ಉತ್ತರ ಕನ್ನಡ, ಉಡುಪಿ ಮತ್ತು ಶಿವಮೊಗ್ಗಗಳಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ.

ಹಿಂದುಳಿದ ಸಮುದಾಯಗಳೆಂದರೆ ಬಿಜೆಪಿಗೆ ರಾಜಕೀಯ ಬಂಡವಾಳವಲ್ಲ. ಬದಲಿಗೆ, ಈ ಸಮುದಾಯಗಳು ಒಂದು ಸಮಾಜದ ಜೀವಂತಿಕೆಯನ್ನು ಕಾಪಾಡುತ್ತಿರುವ ಶಕ್ತಿಗಳು ಎನ್ನುವುದು ನಮ್ಮ ಪಕ್ಷದ ಮತ್ತು ಸರ್ಕಾರದ ನಂಬಿಕೆಯಾಗಿದೆ. ನಮಗೆ ಸಿಕ್ಕಿರುವ ಜನಾದೇಶವನ್ನು ಗೌರವಿಸಿ, ಹಿಂದುಳಿದ ಸಮುದಾಯಗಳ ಆಶೋತ್ತರಗಳಿಗೆ ಸ್ಪಂದಿಸುವ ಹೊಸ ಶಕೆ ಈಗ ನಿರ್ಮಾಣವಾಗಿದೆ. ಇದು ಈ ಜಾತಿ-ಜನಾಂಗಗಳ ಉತ್ತರೋತ್ತರ ಬೆಳವಣಿಗೆಯನ್ನು ಸಾಧ್ಯವಾಗಿಸುತ್ತಿದೆ. ಇದರಲ್ಲಿ ಬಿಜೆಪಿ ಸಾರ್ಥಕತೆಯನ್ನು ಕಾಣುತ್ತಿದೆ.
 

click me!