ಪರಾರಯಯ ಬೆಳೆ ಕುರಿತು ಅಧ್ಯಯನಕ್ಕೆ ಶೀಘ್ರ ಶಿಫಾರಸು, ಕೃಷಿ ಬೆಲೆ ಆಯೋಗದಿಂದ 4 ವರದಿ ತಯಾರಿ, ಸದ್ಯದಲ್ಲೇ ಸಲ್ಲಿಕೆ
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ಸೆ.04): ಪ್ರದೇಶವಾರು ಸಾಂಪ್ರದಾಯಿಕ ಬೆಳೆಗಳಿಗೆ ಜೋತು ಬೀಳದೆ ರೈತರಿಗೆ ಲಾಭವಾಗುವಂತಹ ಪರ್ಯಾಯ ಬೆಳೆ ಕುರಿತು ಅಧ್ಯಯನ ನಡೆಯಬೇಕು ಎಂಬುದು ಸೇರಿ ನಾಲ್ಕು ಪ್ರಮುಖ ವರದಿಗಳನ್ನು ಕೃಷಿ ಬೆಲೆ ಆಯೋಗ ಸಿದ್ಧಪಡಿಸುತ್ತಿದ್ದು, ಶೀಘ್ರವೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಅಡಿಕೆ, ಕಬ್ಬು, ಭತ್ತ, ಮೆಕ್ಕೆಜೋಳ ಮತ್ತಿತರ ಏಕ ಬೆಳೆಗಳು ಪ್ರದೇಶವಾರು ಪ್ರಾಮುಖ್ಯತೆ ಪಡೆಯುತ್ತಿದ್ದು, ಬದಲಿಸಬೇಕು. ಏಕೆಂದರೆ ಮಲೆನಾಡಿನಲ್ಲಿ ಅಡಿಕೆ, ಮಂಡ್ಯ ಮತ್ತು ಮುಂಬೈ ಕರ್ನಾಟಕದಲ್ಲಿ ಕಬ್ಬು, ರಾಯಚೂರು ಹಾಗೂ ಬಳ್ಳಾರಿ ಭಾಗದಲ್ಲಿ ಭತ್ತ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಮಧ್ಯ ಕರ್ನಾಟಕದಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಆದ್ದರಿಂದ ಈ ಭಾಗಗಳಲ್ಲಿ ರೈತರಿಗೆ ಲಾಭವಾಗುವಂತಹ ಪರ್ಯಾಯ ಬೆಳೆ ಬೆಳೆಯಲು ಅಧ್ಯಯನ ನಡೆಯಬೇಕು ಎಂಬ ಅಂಶಗಳು ಆಯೋಗದ ವರದಿಯಲ್ಲಿವೆ.
ಇದಲ್ಲದೆ, ಬೆಳೆ ಯೋಜನೆಗಾಗಿ ಬೆಲೆ ಮುನ್ನಂದಾಜು, ಬೆಲೆ ಸೂಚ್ಯಂಕಗಳ ಕಾರ್ಯಸಾಧ್ಯತೆ ಅಧ್ಯಯನ, ಎಪಿಎಂಸಿಗಳ ಒಳಗೆ ಮತ್ತು ಹೊರಗೆ ಸದೃಢೀಕರಣ ಮಾಡುವುದಕ್ಕೆ ಸಂಬಂಧಿಸಿದ ವರದಿಗಳನ್ನೂ ಆಯೋಗ ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದೆ.
ಅನ್ನದಾತ ರೈತೋದ್ಯಮಿಯಾಗಬೇಕು; ಸಚಿವ ಬಿ.ಸಿ ಪಾಟೀಲ್
ಕೆಲ ಶಿಫಾರಸು ಮಾತ್ರ ಅನುಷ್ಠಾನ:
ಕೃಷಿ ಬೆಲೆ ಆಯೋಗಕ್ಕೆ ಹನುಮನಗೌಡ ಬೆಳಗುರ್ಕಿ ಅವರನ್ನು 2019ರಲ್ಲಿ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಈಗಾಗಲೇ 10 ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಇದರಲ್ಲಿ ಒಂದಷ್ಟುಶಿಫಾರಸು ಅನುಷ್ಠಾನವಾಗಿದ್ದು ಇನ್ನೂ ಬಹಳಷ್ಟುಅಂಶಗಳನ್ನು ಜಾರಿಗೊಳಿಸಬೇಕಿದೆ. ನಮ್ಮ ಆಹಾರ ಸಂಸ್ಕೃತಿಗೆ ಅನುಗುಣವಾಗಿ ಪಡಿತರ ವ್ಯವಸ್ಥೆಯಡಿ ಅಕ್ಕಿಯ ಜೊತೆಗೆ ರಾಗಿ, ಜೋಳ ನೀಡಲು ‘ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ’ ಜಾರಿಗೆ ತರಬೇಕೆಂದು ಶಿಫಾರಸು ಮಾಡಿದ್ದು, ಅನುಷ್ಠಾನಗೊಳಿಸಲಾಗಿದೆ.
ಬಿಳಿ ಜೋಳ ಸಾಮಾನ್ಯವಾಗಿ ಹಿಂಗಾರು ಬೆಳೆಯಾಗಿದ್ದು, ಹಿಂಗಾರಿನಲ್ಲೇ ಬೆಂಬಲ ಬೆಲೆ ಘೋಷಿಸಬೇಕು ಎಂದು ವರದಿ ನೀಡಲಾಗಿತ್ತು. ಇದರನ್ವಯ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಬೆಳೆ ಕಟಾವು ಆಗುತ್ತಿದ್ದಂತೆ ಖರೀದಿ ಕೇಂದ್ರ ಆರಂಭ ಆರಂಭಿಸಬೇಕು ಎಂದು ಮಾಡಿದ್ದ ಶಿಫಾರಸಿನಲ್ಲಿ ಒಂದಷ್ಟುಪ್ರಗತಿಯಾಗಿದೆ. ಕೃಷಿ ಹಾಗೂ ತೋಟಗಾರಿಕೆಯ 27 ಬೆಳೆಗಳ ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆಮಾಹಿತಿಯನ್ನೂ ಆಯೋಗ ಸಲ್ಲಿಸಿದ್ದು ಈ ನಿಟ್ಟಿನಲ್ಲಿ ಶಿಫಾರಸು ಜಾರಿಯಾಗಬೇಕಿದೆ.
ತಿಂಗಳಾದರೂ ಅಧ್ಯಕ್ಷರ ನೇಮಕವಿಲ್ಲ
ಹಲವು ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ಈ ಹಿಂದೆ ಸರ್ಕಾರ ರದ್ದುಗೊಳಿಸಿದಾಗ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರ ನೇಮಕವನ್ನೂ ರದ್ದುಗೊಳಿಸಲಾಗಿದೆ. ತಿಂಗಳಾದರೂ ಹೊಸ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಇದರಿಂದಾಗಿ ಆಯೋಗದ ಮಹತ್ವಪೂರ್ಣ ಕಾರ್ಯಗಳಿಗೆ ಹಿನ್ನಡೆ ಉಂಟಾಗುತ್ತಿದೆ ಎಂಬ ದೂರು ರೈತರಿಂದ ಕೇಳಿ ಬಂದಿದೆ.