ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ : ವ್ಯಾಪಾರಿಗಳ ನೆರವಿಗೆ ಬಿಜೆಪಿ ಸಹಾಯವಾಣಿ

Kannadaprabha News   | Kannada Prabha
Published : Jul 20, 2025, 06:32 AM IST
bjp flag

ಸಾರಾಂಶ

ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸಣ್ಣ ವ್ಯಾಪಾರಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸಹಾಯವಾಣಿ (8884245123) ತೆರೆದಿದ್ದು, ಇದು ಸೋಮವಾರದಿಂದ(ಜು.21) ಕಾರ್ಯಾರಂಭಿಸಲಿದೆ.

ಬೆಂಗಳೂರು : ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸಣ್ಣ ವ್ಯಾಪಾರಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸಹಾಯವಾಣಿ (8884245123) ತೆರೆದಿದ್ದು, ಇದು ಸೋಮವಾರದಿಂದ(ಜು.21) ಕಾರ್ಯಾರಂಭಿಸಲಿದೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಸಹಾಯವಾಣಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೆ ಈಗಾಗಲೇ ರಾಜ್ಯ ಸರ್ಕಾರದ ಮೂಲಕ ನೋಟಿಸ್‌ ನೀಡಲಾಗಿದೆ. ಈ ವಿಚಾರದಲ್ಲಿ ದೊಡ್ಡ ಗೊಂದಲ ಶುರುವಾಗಿದ್ದು, ಬಡ ವ್ಯಾಪಾರಿಗಳಲ್ಲಿ ಆತಂಕದ ಛಾಯೆ ಮೂಡಿದೆ ಎಂದರು.

ರಾಜ್ಯ ಸರ್ಕಾರ ಎಲ್ಲೂ ನಿಜವಾದ ತೆರಿಗೆ ಮೊತ್ತ ಯಾವುದು ಮತ್ತು ವಿಧಿಸಲಾಗದ ತೆರಿಗೆ ಮೊತ್ತ ಯಾವುದು ಎಂದು ಕೂಲಂಕಶ ಚರ್ಚೆ ಮಾಡಿಲ್ಲ. ವ್ಯಾಪಾರಿಗಳಿಗೆ ಮಾಹಿತಿಯನ್ನೂ ನೀಡಿಲ್ಲ. ಕೇಂದ್ರ ಸರ್ಕಾರದ ನೀತಿ ಪ್ರಕಾರ ವಾರ್ಷಿಕ ವಹಿವಾಟು 40 ಲಕ್ಷ ರು. ಮೀರಿದರೆ ಜಿಎಸ್‍ಟಿಯಡಿ ನೋಂದಾಯಿಸಿಕೊಂಡು ತೆರಿಗೆ ಪಾವತಿಸಬೇಕು. ಆದರೆ, ಇಲ್ಲಿ ವಾರ್ಷಿಕ ವಹಿವಾಟು 20 ಲಕ್ಷ ರು. ಮೀರಿರುವ ವ್ಯಾಪಾರಿಗಳಿಗೂ ತೆರಿಗೆ ಕಟ್ಟುವಂತೆ ನೋಟಿಸ್‌ ನೀಡಿ ಗೊಂದಲ ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದರು.

ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಕಳ್ಳರಲ್ಲ ಮತ್ತು ತೆರಿಗೆ ವಂಚಿಸುವವರಲ್ಲ. ಆದರೆ ತೆರಿಗೆ ಪರಿಸ್ಥಿತಿ ಅವರಿಗೆ ಅರ್ಥವಾಗಿಲ್ಲ. ಸರ್ಕಾರದವರು ಅವರಿಗೆ ಅರ್ಥ ಮಾಡಿಸದ ಪರಿಣಾಮ ಬಡ ವ್ಯಾಪಾರಿಗಳು ಗೊಂದಲದಲ್ಲಿದ್ದಾರೆ. ಹೀಗಾಗಿ ಸರ್ಕಾರ ಬಡ ಜನರ ರಕ್ಷಣೆಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಹೂವು-ಹಣ್ಣು ವ್ಯಾಪಾರಿಗಳಿಗೂ ನೋಟಿಸ್‌:

ಬಿಜೆಪಿ ಅರ್ಥಿಕ ಪ್ರಕೋಷ್ಠದ ಸಂಚಾಲಕ ಜಿ.ಎಸ್‌.ಪ್ರಶಾಂತ್ ಮಾತನಾಡಿ, ಕೆಲ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸುವುದಿಲ್ಲ. ಹೂವು, ಹಣ್ಣು, ತರಕಾರಿ, ಹಾಲು, ಮಾಂಸ, ಪನ್ನೀರು, ಬಳೆ ಮತ್ತು ಸಾಕಷ್ಟು ಪದಾರ್ಥಗಳು ಜಿಎಸ್‍ಟಿ ವ್ಯಾಪ್ತಿಗೆ ಬರುವುದಿಲ್ಲ. ಈ ವಿನಾಯಿತಿ ಪದಾರ್ಥಗಳಲ್ಲಿ 10 ಕೋಟಿ ರು.ಗಳಷ್ಟು ವ್ಯಾಪಾರ ಮಾಡಿದರೂ ಜಿಎಸ್‍ಟಿ ನೋಂದಣಿ ಕಡ್ಡಾಯವಲ್ಲ. ಆದರೆ ರಾಜ್ಯ ಜಿಎಸ್‍ಟಿ ಘಟಕದಿಂದ ಹಣ್ಣು ಮತ್ತು ಹೂವು ಮಾರುವವರಿಗೂ ನೋಟಿಸ್ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ವಿ.ರಾಮಚಂದ್ರಗೌಡ(ಸೀಕಲ್), ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ.ಕೆ.ನಾರಾಯಣ ಮತ್ತಿತರರಿದ್ದರು.

ಗ್ಯಾರಂಟಿ ಹಣಕ್ಕೆ ಜಿಎಸ್ಟಿ ನೋಟಿಸ್‌

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢಿಕರಿಸಲು ಆಗುತ್ತಿಲ್ಲ. ಆದ್ದರಿಂದ ತೆರಿಗೆ ಇಲಾಖೆ ಮೂಲಕ ಬೀದಿ ವ್ಯಾಪಾರಿಗಳಿಗೆ ನೋಟಿಸ್ ಕೊಡುತ್ತಿದ್ದು, ಹಣ ಸಂಗ್ರಹಿಸಲು ಮುಂದಾಗಿದೆ. ಆ ಮೂಲಕ ಸರ್ಕಾರ ಬೀದಿ ವ್ಯಾಪಾರಿಗಳಿಗೆ ಹೆದರಿಸುವ ಕೆಲಸ ಮಾಡುತ್ತಿದೆ. ದೇಶದ ಯಾವುದೇ ರಾಜ್ಯದಲ್ಲಿ ವ್ಯಾಪಾರಿಗಳಿಗೆ ಜಿಎಸ್‌ಟಿ ತೆರಿಗೆ ಕಟ್ಟುವಂತೆ ನೋಟಿಸ್‌ ನೀಡಿಲ್ಲ. ಕರ್ನಾಟಕದಲ್ಲಿ ಮಾತ್ರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಆಗದೆ ಈ ರೀತಿ ಮಾಡುತ್ತಿದ್ದಾರೆ.ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೃಹಲಕ್ಷ್ಮೀಯ 5 ಸಾವಿರ ಕೋಟಿ ಮಿಸ್‌ ಆಗಿದ್ದು ಹೇಗೆ?: ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿ.ಕೆ.ಶಿವಕುಮಾರ್‌