LPG ಸಿಲಿಂಡರ್ ಸಿಗಲಿಲ್ಲ ಅಂತಾ ಮದುವೆ ಮುಂದೂಡೋಕಾಗುತ್ತಾ? ಜನರ ಹೊಸ ಐಡಿಯಾ ನೋಡಿ ಹೇಗಿದೆ!

Kannadaprabha News   | Kannada Prabha
Published : Mar 14, 2026, 07:00 AM IST
Commercial Gas Crisis Hits Bengaluru Weddings Families Turn to Home Cylinders

ಸಾರಾಂಶ

ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ತೀವ್ರ ಅಭಾವದಿಂದಾಗಿ ವಿವಾಹದಂತಹ ಶುಭ ಸಮಾರಂಭಗಳಿಗೆ ಅಡ್ಡಿಯಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು, ಮದುವೆ ಮನೆಯವರು ಅನಿವಾರ್ಯವಾಗಿ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ಗೃಹ ಬಳಕೆಯ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಮಾ.14): ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಅಭಾವವು ವಿವಾಹ ಸೇರಿ ಶುಭ ಸಮಾರಂಭಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಶತಾಯಗತಾಯ ಕಾರ್ಯ ಮುಗಿಸಲೇಬೇಕಿರುವುದರಿಂದ ಕೆಲವರು ಗೃಹ ಬಳಕೆ ಸಿಲಿಂಡರ್‌ಗಳತ್ತ ಮುಖ ಮಾಡಿರುವುದು ಕಂಡುಬಂದಿದೆ.

ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬ ನಾಣ್ಣುಡಿಯಂತೆ ವಿವಾಹವೆಂದರೆ ಸಣ್ಣ ಮಾತಲ್ಲ. ಓಲಗದವರು, ಬಳೆ ತೊಡಿಸುವಿಕೆ, ಅರಿಣೆ-ಬಾಸಿಂಗ, ಸ್ಟೇಜ್‌ ಡೆಕೋರೇಷನ್‌, ಲೈಟಿಂಗ್‌, ಅಡುಗೆ ಭಟ್ಟರು-ರೇಷನ್‌ ಅಥವಾ ಕ್ಯಾಟರಿಂಗ್‌, ಶಾಮಿಯಾನ, ಇನ್ವಿಟೇಷನ್‌, ಆಭರಣ, ಬಟ್ಟೆ ಖರೀದಿ ಸೇರಿ ಹತ್ತಾರು ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ.

ಸಿಲಿಂಡರ್‌ ಅಭಾವ ಎಂಬ ಒಂದೇ ಕಾರಣಕ್ಕೆ ಯಾವ ವಿವಾಹವೂ ಮುಂದೂಡಲು ಆಗುವುದಿಲ್ಲ. ಕಾಳಸಂತೆಯಲ್ಲಿ ದುಬಾರಿ ಬೆಲೆ ತೆತ್ತಾದರೂ ಶುಭ ಕಾರ್ಯ ಮುಗಿಸಬೇಕಾಗುತ್ತದೆ. ಆದರೆ ಇದರ ಸಹವಾಸವೇ ಬೇಡ ಎಂದು ಕೆಲ ಮದುವೆ ಮನೆಯವರು ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳ ಮೊರೆ ಹೋಗಲು ಮುಂದಾಗಿದ್ದಾರೆ.

ಯಾರೂ ಇಲ್ಲ ಎನ್ನುವುದಿಲ್ಲ:

ವರ್ಷಕ್ಕೆ ಗೃಹ ಬಳಕೆಗೆ 12 ಸಿಲಿಂಡರ್‌ ಲಭ್ಯವಿದ್ದು, ಸಾಮಾನ್ಯವಾಗಿ ಎಷ್ಟೋ ಕುಟುಂಬಗಳು ವರ್ಷಕ್ಕೆ 6 ರಿಂದ 8 ಸಿಲಿಂಡರ್‌ಗಳನ್ನು ಮಾತ್ರ ಬಳಸುತ್ತವೆ. ಇನ್ನುಳಿದ ಸಿಲಿಂಡರ್‌ಗಳನ್ನು ಪರಿಚಯಸ್ಥರಿಗೆ ನೀಡುವುದು ಅಥವಾ ಗ್ಯಾಸ್‌ ಸರಬರಾಜು ಮಾಡುವವರೇ ಬುಕ್‌ ಮಾಡಿಕೊಳ್ಳುವುದೂ ಉಂಟು. ಪರಿಸ್ಥಿತಿ ಹೀಗಿರುವಾಗ ಸಂಬಂಧಿಕರು, ಪರಿಚಯಸ್ಥರು ಅಥವಾ ಸ್ನೇಹಿತರ ಮನೆಗಳ ಶುಭ ವಿವಾಹಕ್ಕೆ ಯಾರೂ ಸಿಲಿಂಡರ್‌ ಇಲ್ಲ ಎನ್ನುವುದಿಲ್ಲ. ಈ ಅಂಶ ಮದುವೆ ಮಾಡಲು ಹೊರಟಿರುವವರಿಗೆ ಆಶಾಕಿರಣವಾಗಿದೆ.

ಶುಭ ಕಾರ್ಯಕ್ಕೆ ಏಪ್ರಿಲ್‌ ಪ್ರಶಸ್ತ:

ಶುಭ ಕಾರ್ಯಗಳಿಗೆ ಮಹೂರ್ತ ನಿಗದಿ ಮಾಡಿಕೊಡುವ ಕಲ್ಕೆರೆಯ ಕೆ.ಎಸ್‌.ಸಿದ್ದಲಿಂಗಸ್ವಾಮಿ ಅವರ ಪ್ರಕಾರ, ‘ಮಾರ್ಚ್‌ ತಿಂಗಳಿನಲ್ಲಿ 25, 27, 30ಕ್ಕೆ ವಿವಾಹ ಮಹೂರ್ತ ಮತ್ತು 25, 27, 30ನೇ ತಾರೀಖು ಗೃಹ ಪ್ರವೇಶಕ್ಕೆ ಪ್ರಶಸ್ತವಾಗಿವೆ. ಯುಗಾದಿ ಕಳೆದ ಬಳಿಕ ಶುಭ ಕಾರ್ಯಗಳ ‘ಸುಗ್ಗಿ’ಯೇ ಪ್ರಾರಂಭವಾಗುತ್ತದೆ. ಏಪ್ರಿಲ್‌ ತಿಂಗಳಿನಲ್ಲಿ ವಿವಾಹಕ್ಕೆ 20, 22, 23, 27, 29 ಮತ್ತು ಗೃಹ ಪ್ರವೇಶಕ್ಕೆ 20, 23, 29 ಹಾಗೂ ನಾಮಕರಣಕ್ಕೆ 20, 23, 27, 29 ನೇ ತಾರೀಖು ಉತ್ತಮವಾಗಿವೆ’ ಎಂದು ವಿವರಿಸಿದರು.

ಮೇನಲ್ಲಿ 3, 6, 8, 11 ಕ್ಕೆ ವಿವಾಹ ಮಹೂರ್ತಗಳಿವೆ. ಮೇ 17 ರಿಂದ ಜೂನ್‌ 15 ರವರೆಗೆ ಅಧಿಕ ಜ್ಯೇಷ್ಠ ಮಾಸ ಇರುವುದರಿಂದ ವಿವಾಹ, ಗೃಹಪ್ರವೇಶ, ನಾಮಕರಣ ಸಮಾರಂಭಗಳು ಇರುವುದಿಲ್ಲ. ಆದ್ದರಿಂದಲೇ ಏಪ್ರಿಲ್‌ ತಿಂಗಳಿನಲ್ಲಿ ಬಹಳಷ್ಟು ವಿವಾಹಗಳಿವೆ’ ಎಂದು ಸ್ಪಷ್ಟಪಡಿಸಿದರು.

ರಾಜ್ಯಾದ್ಯಂತ ಸಹಸ್ರಾರು ಕಲ್ಯಾಣ ಮಂಟಪಗಳಿದ್ದು ಮುಂದಿನ ದಿನಗಳಲ್ಲಿ ಅಸಂಖ್ಯ ವಿವಾಹಗಳು ನೆರವೇರಲಿವೆ. ಒಂದೊಮ್ಮೆ ಸಿಲಿಂಡರ್‌ ಸಮಸ್ಯೆ ಬಗೆಹರಿದರೆ ಪರವಾಗಿಲ್ಲ, ಆದರೆ ಇದೇ ಪರಿಸ್ಥಿತಿ ಮುಂದುವರೆದರೆ ಅನಿವಾರ್ಯವಾಗಿ ಗೃಹ ಬಳಕೆ ಅನಿಲ ಸಿಲಿಂಡರ್‌ನತ್ತ ಮುಖ ಮಾಡಬೇಕಾಗುತ್ತದೆ ಎಂಬ ಮಾತುಗಳು ಮದುವೆ ಕೈಗೊಳ್ಳುವವರಿಂದ ಕೇಳಿಬರುತ್ತಿವೆ.

ಸಾರಿ, ಸಿಲಿಂಡರ್‌ ನೀವೇ ನೋಡಿಕೊಳ್ಳಿ

ಕೆಲ ಕಲ್ಯಾಣ ಮಂಟಪಗಳಲ್ಲಿ ಶುಭ ಕಾರ್ಯದ ಡೇಟ್‌ ಫಿಕ್ಸ್‌ ಮಾಡಿಕೊಳ್ಳುವಾಗಲೇ ಅಡುಗೆ ತಯಾರಿಗೆ ಇಂತಿಷ್ಟು ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ನೀಡುತ್ತೇವೆ ಎಂದು ಮೊದಲೇ ಹೇಳಿರುತ್ತಾರೆ. ಆದರೆ ಇದೀಗ ಸಿಲಿಂಡರ್‌ ಅಭಾವ ಉಂಟಾಗಿರುವುದರಿಂದ ನೀವೇ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬಸವನಗುಡಿ ಬುಲ್‌ ಟೆಂಪಲ್‌ ರಸ್ತೆಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದ ಸೂಪರ್‌ವೈಸರ್‌ ಮಂಜುನಾಥ್‌, ‘ನಮ್ಮ ಕಲ್ಯಾಣ ಮಂಟಪದಲ್ಲಿ ಎರಡು ದಿನದ ಕಾರ್ಯಕ್ರಮಕ್ಕೆ 5 ಸಿಲಿಂಡರ್‌ ನೀಡುತ್ತಿದ್ದೆವು. ಆದರೆ ಇದೀಗ ಸಿಲಿಂಡರ್‌ ಅಭಾವ ಉಂಟಾಗಿರುವುದರಿಂದ ಕಲ್ಯಾಣ ಮಂಟಪ ಬುಕ್ಕಿಂಗ್‌ ಮಾಡಿರುವವರಿಗೆಲ್ಲಾ ಫೋನ್‌ ಮಾಡಿ ನೀವೇ ಸಿಲಿಂಡರ್‌ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಹೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

2,500 ಜನರಿಗೆ ಏಳೆಂಟು ಸಿಲಿಂಡರ್‌ ಬೇಕು

ಕ್ಯಾಟರಿಂಗ್‌ನವರೊಬ್ಬರ ಮಾಹಿತಿ ಪ್ರಕಾರ ವಿವಾಹವೊಂದರಲ್ಲಿ ಎರಡೂವರೆ ಸಾವಿರ ಜನರಿಗೆ ಊಟ, ತಿಂಡಿ ವ್ಯವಸ್ಥೆಗೆ ಏಳೆಂಟು ಸಿಲಿಂಡರ್‌ ಬೇಕಾಗುತ್ತದೆ. ರಾತ್ರಿ ಆರತಕ್ಷತೆಯಲ್ಲಿ ಒಂದು ಸಾವಿರ ಜನರಿಗೆ 20 ಬಗೆಯ ತಿನಿಸು, 500 ಜನರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಸಾವಿರ ಜನರಿಗೆ ಮಹೂರ್ತದ ಊಟಕ್ಕೆ 20 ಬಗೆಯ ತಿನಿಸು ತಯಾರಿಸಲು ಒಟ್ಟಾರೆ ಏಳೆಂಟು ಸಿಲಿಂಡರ್‌ ಅವಶ್ಯಕತೆ ಇದೆ. ಬೆಳಗ್ಗೆ ತಿಂಡಿಗೆ ಪಲಾವ್‌-ವಾಂಗಿ ಬಾತ್‌ ಬದಲಿಗೆ ಇಡ್ಲಿ-ವಡೆ ಮಾಡಿಸುತ್ತೇವೆ ಎಂದರೆ ಇನ್ನೂ ಒಂದು ಸಿಲಿಂಡರ್‌ ಎಕ್ಸ್‌ಟ್ರಾ ಬೇಕಾಗುತ್ತದೆ ಎಂದು ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: LPG ಸಿಲಿಂಡರ್ ಸಿಗಲಿಲ್ಲ ಅಂತಾ ಮದುವೆ ಮುಂದೂಡೋಕಾಗುತ್ತಾ? ಜನರ ಹೊಸ ಐಡಿಯಾ ನೋಡಿ ಹೇಗಿದೆ!
ಭಿಕ್ಷಾಟನೆ ಮುಕ್ತ ರಾಜ್ಯಕ್ಕಾಗಿ ಸರ್ಕಾರ ಮಹತ್ವದ ಕ್ರಮ: ಮಹದೇವಪ್ಪ