ಕಾಂಗ್ರೆಸ್‌ನಲ್ಲಿ ಒಳಬೇಗುದಿ ತೀವ್ರಗೊಂಡಿದ್ದು, ಶಾಸಕರಲ್ಲಿ ಅಸಮಾಧಾನ ಹೆಚ್ಚಳಗೊಂಡಿದೆ. ಸಂಕ್ರಾಂತಿ ವೇಳೆಗೆ ಸೂರ್ಯ ಪಥ ಬದಲಿಸುವ ರೀತಿ, ರಾಜಕೀಯ ಪಥ ಬದಲಾವಣೆಯಾಗಲಿದ್ದು, ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಇರೋದು ಅನುಮಾನ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಚನ್ನಪಟ್ಟಣ (ಅ.3) : ಕಾಂಗ್ರೆಸ್‌ನಲ್ಲಿ ಒಳಬೇಗುದಿ ತೀವ್ರಗೊಂಡಿದ್ದು, ಶಾಸಕರಲ್ಲಿ ಅಸಮಾಧಾನ ಹೆಚ್ಚಳಗೊಂಡಿದೆ. ಸಂಕ್ರಾಂತಿ ವೇಳೆಗೆ ಸೂರ್ಯ ಪಥ ಬದಲಿಸುವ ರೀತಿ, ರಾಜಕೀಯ ಪಥ ಬದಲಾವಣೆಯಾಗಲಿದ್ದು, ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಇರೋದು ಅನುಮಾನ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ರಾಜಕೀಯ ಬೆಳವಣಿಗೆ, ಕಾಂಗ್ರೆಸ್ ನಾಯಕರ ನಡೆ ಗಮನಿಸಿದರೆ, ೨೦೨೩ ಮುಗಿದ ಬಳಿಕ ರಾಜಕೀಯ ಬದಲಾವಣೆ ನಿರೀಕ್ಷೆ ಇದೆ. ಇನ್ನೆರಡು ತಿಂಗಳಲ್ಲಿ ಕಾಂಗ್ರೆಸ್‌ನಲ್ಲಿ ಆಂತರಿಕ ಅಸಮಾಧಾನ ಸ್ಘೋಟಿಸಲಿದ್ದು, ಸರ್ಕಾರ ಪತನಗೊಳ್ಳಲಿದೆ ಎಂದು ಅನಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಬೀಳಿಸಲು ನಾವು ಯಾವುದೇ ಆಪರೇಷನ್ ನಡೆಸುತ್ತಿಲ್ಲ ಎಂದು ಭವಿಷ್ಯ ನುಡಿದರು.
ಕಾವೇರಿ ನೀರಿನ ಸಮಸ್ಯೆಗೆ ಮೇಕೆದಾಟು ಪರಿಹಾರ: ಸಂಸದ ಡಿ.ಕೆ.ಸುರೇಶ್
ಡಮ್ಮಿಯಾದ ಶಾಸಕರು: ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗ ಸುಭದ್ರ ಸರ್ಕಾರ ಬಂತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರು ಡಮ್ಮಿಗಳಾಗಿದ್ದಾರೆ. ಅವರಿಗೆ ಶಾಸಕರ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರು ವಿಮುಖವಾಗಿ ಯೋಚನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಾಗೆ ಪಕ್ಷಾಂತರ ಮಾಡಿದರೆ ಅಥವಾ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರೆ ಆಶ್ಚರ್ಯವಿಲ್ಲ ಎಂದರು.
೨೫ರಿಂದ ೩೦ ಶಾಸಕರು ಈ ಹಿಂದೆಯೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಆ ನಂತರ ಬಸವರಾಜರಾಯರೆಡ್ಡಿ ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಶಾಮನೂರು ಶಿವಶಂಕರಪ್ಪ ಲಿಂಗಾಯತರಿಗೆ ಅನ್ಯಾಯವಾಗುತ್ತಿದೆ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸವರಾಜ ಶಿವಗಂಗಾ ಸರ್ಕಾರದ ವಿರುದ್ಧ ನೇರ ಆರೋಪ ಮಾಡಿದ್ದಾರೆ. ರಾಜಣ್ಣ ಲೋಕಸಭೆ ಚುನಾವಣೆ ನಂತರ ಈ ಸರ್ಕಾರ ಇರಲಿದೆಯೋ ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಸರ್ಕಾರದ ಮೇಲೆ ವಿಶ್ವಾಸ ಹೋಗಿದೆ ಎಂದರು.