
ಕೊಡಗು (ಸೆ.24): ನಾಡಹಬ್ಬ ದಸರಾ ಎಂದರೆ ನಾಡಿನ ಸಂಸ್ಕೃತಿ ಆಚಾರ ವಿಚಾರಗಳ ಬಿಂಬಿಸುವುದು ಅಷ್ಟೇ ಅಲ್ಲ. ಜೊತೆಗೆ ಆಯಾ ಭಾಗಗಳ ರೈತರನ್ನು ಪ್ರೋತ್ಸಾಹಿಸುವ ಹಬ್ಬವೂ ಹೌದು. ಹಾಗಾದರೆ ಮಡಿಕೇರಿ ದಸರಾದಲ್ಲಿ ಕಾಫಿ ಬೆಳೆಗಾರರನ್ನು ಉತ್ತೇಜಿಸಲು ನಡೆದ ಕಾಫಿ ದಸರಾದ ಝಲಕ್ ಹೇಗಿತ್ತು ಗೊತ್ತಾ.? ನೀವು ಒಮ್ಮೆ ಕಾಫಿ ರುಚಿಯನ್ನು ಸವಿಯಿರಿ. ಎರಡು ದಿನಗಳಿಂದ ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆ ಬಿಟ್ಟು ಬಿಟ್ಟು ಸುರಿಯುತ್ತಲೇ ಇದ್ದು, ಇಡೀ ವಾತಾವರಣ ತಣ್ಣಗಾಗಿದೆ. ಆದರೆ ಈ ತಣ್ಣನೆಯ ವಾತಾವರಣದಲ್ಲಿ ತಮಗಿಷ್ಟವಾದ ಬಿಸಿ ಬಿಸಿ ಕಾಫಿ ಸವಿಯುತ್ತಿರುವ ಜನರು.
ಮತ್ತೊಂದೆಡೆ ಚಳಿಯಲ್ಲೇ ತಣ್ಣನೆಯ ಕಾಫಿ ಐಸ್ಕ್ರೀಂ ಸವಿಯುತ್ತಿರುವ ಜನರು. ಮತ್ತೊಂದೆಡೆ ತಮಗಿಷ್ಟವಾದ ಕಾಫಿ ಕೇಕ್ಗಳನ್ನು ಖರೀದಿಸಿ ಕೊಂಡೊಯ್ಯುತ್ತಿರುವ ಕೇಕ್ ಪ್ರಿಯರು. ಇದೆಲ್ಲದರ ಮುಂಭಾಗದಲ್ಲಿ ಇರುವ ಮುಖ್ಯ ವೇದಿಕೆಯಲ್ಲಿ ನಡೆಯುತ್ತಿರುವ ಕಾಫಿ ಬೆಳೆಗಾರರ ಉತ್ತೇಜಿಸುವ ವಿಚಾರ ಸಂಕಿರಣ. ಇವೆಲ್ಲಾ ಕಂಡು ಬಂದಿದ್ದು ಮಂಜಿನ ನಗರಿ ಮಡಿಕೇರಿ ದಸರಾ ಜನೋತ್ಸವದ ಮೂರನೇ ದಿನ ನಡೆದ ಕಾಫಿ ದಸರಾದ ಝಲಕ್. ಬೆಳೆಗಾರರನ್ನು ಉತ್ತೇಜಿಸುವುದಕ್ಕಾಗಿ ಕಾಫಿ ದಸರಾ ಆಯೋಜಿಸಿದಸಿದ್ದರು. ಕಾಫಿ ಎಂದರೆ ಕೇವಲ ಬೀಜಗಳ ಉತ್ಪಾದಿಸಿ ಮಾರಾಟ ಮಾಡುವುದಲ್ಲ.
ಬದಲಾಗಿ ಕಾಫಿಯಿಂದ ಹತ್ತಾರು ಬಗೆ ಬಗೆಯ ಉತ್ಪನ್ನಗಳನ್ನು ಉತ್ಪಾದಿಸಬಹುದು ಎನ್ನುವುದನ್ನು ತೋರಿಸಲು ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾಫಿ ಫ್ಲೇವರ್ ಕೇಕ್, ಕಪ್ ಕೇಕ್, ಬ್ರೌನಿ, ಬಿಸ್ಕತ್ ಚಾಕೋಲೆಟ್ ಜೊತೆಗೆ ಫಿಲ್ಟರ್ ಕಾಫಿ, ಬ್ರೂ ಕಾಫಿ, ಇನ್ಸ್ಟಾಂಟ್ ಕಾಫಿ ಸೇರಿದಂತೆ ತರಾವರಿಯ ಬಿಸಿಬಿಸಿ ಕಾಫಿಗಳು ಸಿದ್ದವಿದ್ದವು. ಸ್ಥಳದಲ್ಲಿಯೇ ಸಿದ್ದಪಡಿಸುತ್ತಿದ್ದ ಹಲವು ಕಾಫಿಯ ಆಹಾರ ಪದಾರ್ಥಗಳನ್ನು ಜನರು ಖರೀದಿಸಿ ಸವಿದು ಖುಷಿಪಟ್ಟರು. ಅವುಗಳ ರುಚಿಗೆ ಮನಸೋತು ಮನೆಗೂ ಒಂದಿಷ್ಟು ಕೊಂಡೊಯ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದವರು ವಿವಿಧ ಬಗೆಯ ಕಾಫಿ ಕೇಕ್, ಬಿಸ್ಕೆಟ್ಗಳನ್ನು ಮಾಡಿ ಸಂಭ್ರಮಿಸಿದರು.
ರಾಜ್ಯದಲ್ಲಿಯೇ ಅತೀ ಹೆಚ್ಚು ಕಾಫಿ ಉತ್ಪಾದಿಸುವ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಕಾಫಿ ಬೆಳೆಗಾರರಿದ್ದಾರೆ. ಆದರೆ ಕಾಫಿ ಉತ್ಪಾದನೆ ಮಾಡಿದರು, ಅದಕ್ಕೆ ಸರಿಯಾದ ಬೆಲೆ ಸಿಗದಿರುವುದು, ಪ್ರಾಕೃತಿಕ ವೈಪರೀತ್ಯದಿಂದ ಬೆಳೆನಷ್ಟವಾಗುವುದರಿಂದ ಬೆಳೆಗಾರರು ಒಂದಷ್ಟು ಉತ್ಸಾಹ ಕಳೆದುಕೊಳ್ಳಬಹುದು. ಹೀಗಾಗಿ ಬೆಳೆಗಾರರನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ದೃಷ್ಟಿಯಿಂದ ಹಾಗೂ ಕಾಫಿ ಎಂದರೆ ಕೇವಲ ಕುಡಿಯುವ ಪಾನೀಯವಲ್ಲ. ಬದಲಾಗಿ ಕಾಫಿಯಿಂದ ಹತ್ತಾರು ವಿವಿಧ ಬಗೆಯ ಉತ್ಪನ್ನಗಳನ್ನು ಮಾಡಬಹುದು ಎನ್ನುವುದನ್ನು ತೋರಿಸುವುದಕ್ಕಾಗಿ ಈ ಕಾಫಿ ದಸರಾ ಆಯೋಜಿಸಲಾಗಿತ್ತು.
ಕಾಫಿ ಬೆಳೆಗಾರರಿಗೆ ಇರುವ ಸವಾಲುಗಳೇನು, ಸಾಧ್ಯತೆಗಳೇನು ಎನ್ನುವುದನ್ನು ದಸರಾದ ವಿಚಾರಗೋಷ್ಠಿಯಲ್ಲಿ ಮಂಥನ ಮಾಡಲಾಯಿತು. ಕಾಫಿ ದಸರಾವನ್ನು ಮಡಿಕೇರಿ ಶಾಸಕ ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹಾಗೂ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ ಸೇರಿದಂತೆ ಗಣ್ಯರು ಕೆಟಲ್ ಮೂಲಕ ಕಪ್ ಗೆ ಕಾಫಿ ಹಾಕುವ ಮೂಲಕ ಕಾಫಿ ದಸರಾಕ್ಕೆ ಚಾಲನೆ ನೀಡಿದರು. ಒಟ್ಟಿನಲ್ಲಿ ಮಡಿಕೇರಿ ದಸರಾದಲ್ಲಿ ಕಾಫಿಯ ಕಂಪು ಸೂಸಿದ್ದು ಬೆಳೆಗಾರರನ್ನು ಉತ್ತೇಜಿಸುವುದಕ್ಕೆ ಸಹಕಾರಿಯಾಗಿದ್ದರ ಜೊತೆಗೆ, ಕಾಫಿ ಪ್ರಿಯರಿಗೆ ಅದರ ಸವಿರುಚಿಯನ್ನು ನೀಡಿದ್ದು ಸುಳ್ಳಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ