
ನವದೆಹಲಿ(ಜೂ.07): ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮುಂದಿನ ದಿನಗಳಲ್ಲಿ ಚಂಡಮಾರುತ ರೂಪ ತಾಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದ ಕರ್ನಾಟಕ ಕರಾವಳಿ ಮಂಗಳವಾರವೇ ಪ್ರಕ್ಷುಬ್ಧವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಗುಜರಾತ್ ಕರಾವಳಿಗಳಲ್ಲಿ 2-3 ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.
ಆದರೆ, ಇದೇ ಚಂಡಮಾರುತವು ಮುಂಗಾರು ಆಗಮನಕ್ಕೆ ಅಡ್ಡಿ ಮಾಡಿದೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಮುಂಗಾರು ಜೂ.8 ಅಥವಾ 9ರಂದು ಕೇರಳ ಪ್ರವೇಶಿಸಬಹುದು. ಆದರೆ ಅದು ಪ್ರಬಲ ರೂಪದಲ್ಲಿರದೇ ದುರ್ಬಲವಾಗಿರಲಿದೆ ಎಂದು ಹೇಳಲಾಗಿದೆ. ಈ ಚಂಡಮಾರುತಕ್ಕೆ ಬಂಗಾಳಿ ಭಾಷೆಯ ಬಿಪರ್ ಜಾಯ್ (ವಿಪತ್ತು) ಎಂದು ಹೆಸರಿಡಲಾಗಿದ್ದು, ಬಾಂಗ್ಲಾದೇಶ ಈ ಹೆಸರನ್ನು ಸೂಚಿಸಿದೆ.
ಮಳೆಗಾಲ ಆರಂಭ ಇನ್ನಷ್ಟು ತಡ: ಮುಂಗಾರು ಆಗಮನಕ್ಕೆ ವಾಯುಭಾರ ಕುಸಿತ ಅಡ್ಡಿ
ಉತ್ತರಾಭಿಮುಖವಾಗಿ ಲಗ್ಗೆ:
ಕಡಿಮೆ ಒತ್ತಡ ಪ್ರದೇಶ ಗೋವಾದಿಂದ ನೈಋುತ್ಯ ಭಾಗಕ್ಕೆ 950 ಕಿ.ಮೀ., ಮುಂಬೈನಿಂದ 1,100 ಕಿ.ಮೀ. ಮತ್ತು ಪೋರಬಂದರಿನಿಂದ 1,490 ಕಿ.ಮೀ. ದೂರದಲ್ಲಿದೆ. ಈ ಚಂಡಮಾರುತ ಉತ್ತರಾಭಿಮುಖವಾಗಿ ಚಲಿಸುತ್ತಿದ್ದು, ಜೂ.8ರಂದು ಗೋವಾ, ಮಹಾರಾಷ್ಟ್ರ ಸಮುದ್ರ ತೀರಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇರಲಿದೆ ಎಂದು ಇಲಾಖೆ ಹೇಳಿದೆ.
ಮಳೆಗಾಲದಲ್ಲಿ ಈ ರಸ್ತೆಗಳು ಡೇಂಜರ್.. ಡೇಂಜರ್: 65 ಸ್ಥಳಗಳಲ್ಲಿ ಭಾರೀ ನೀರು, ಟ್ರಾಫಿಕ್ ಪೊಲೀಸರ ಮಾಹಿತಿ
ವಾಯುಭಾರ ಕುಸಿತದಿಂದಾಗಿ ಮಂಗಳವಾರ ಕರ್ನಾಟಕದ ಕರಾವಳಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು, ಮೀನುಗಾರರಿಗೆ ದಡಕ್ಕೆ ಮರಳುವಂತೆ ಎಚ್ಚರಿಕೆ ನೀಡಲಾಗಿದೆ. ಇದು ಚಂಡಮಾರುತವಾಗಿ ಮಾರ್ಪಟ್ಟು ಗುರುವಾರ ಹಾಗೂ ಶುಕ್ರವಾರದ ಹೊತ್ತಿಗೆ ಮತ್ತಷ್ಟುತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ, ಈ ಚಂಡಮಾರುತ ವಾಯವ್ಯ ದಿಕ್ಕಿನತ್ತಲೂ ಚಲಿಸುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಭಾರತದ ಯಾವ ತೀರಕ್ಕೆ ಅಪ್ಪಳಿಸಬಹುದು ಎಂದು ಸ್ಪಷ್ಟಪಡಿಸಿಲ್ಲ.
ಮುಂಗಾರು ಮಾರುತ ವಿಳಂಬವಾಗಲು ಈ ಚಂಡಮಾರುತವೂ ಕಾರಣವಾಗಿದ್ದು, ಈ ಮೊದಲು ಹವಾಮಾನ ಇಲಾಖೆ ಅಂದಾಜಿಸಿದಂತೆ ಜೂ.3ರಂದೇ ಆಗಮಿಸಬೇಕಿತ್ತು. ಇದಾದ ಬಳಿಕ ದಿನಾಂಕವನ್ನು ನಾಲ್ಕು ದಿನಗಳ ಮುಂದೂಡಲಾಗಿದ್ದರೂ ಮಾರುತಗಳು ಇನ್ನೂ ಸಹ ಆಗಮಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ