ಯಾರ ಹುದ್ದೆಯನ್ನು ಸಿಎಂ ತಪ್ಪಿಸಿಲ್ಲ ಹರಿಪ್ರಸಾದ್ ಅಸಮಾಧಾನ ಸರಿಯಲ್ಲ : ಬೋಸರಾಜು

By Kannadaprabha News  |  First Published Sep 12, 2023, 6:17 AM IST

ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ ಅವರ ಅಸಮಾಧಾನವನ್ನು ಹೈಕಮಾಂಡ್‌ ಸರಿಪಡಿಲಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.


ರಾಯಚೂರು (ಸೆ.12) :  ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ ಅವರ ಅಸಮಾಧಾನವನ್ನು ಹೈಕಮಾಂಡ್‌ ಸರಿಪಡಿಲಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಿ.ಕೆ.ಹರಿಪ್ರಸಾದ ಅವರಿಗೆ ಕೊನೆ ಘಳಿಗೆಯಲ್ಲಿ ಸ್ಥಾನ ಕೈತಪ್ಪಿದೆ. ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಸಮಾವೇಶದಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸದೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಆದರೆ ಅನೇಕರು ಮುಖ್ಯಮಂತ್ರಿಗಳ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ.

Tap to resize

Latest Videos

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಯಾರಿಗೆ ಸಚಿವ ಸ್ಥಾನಗಳನ್ನು ಕೊಡಬೇಕು ಎನ್ನುವುದನ್ನು ಪಕ್ಷದ ವರಿಷ್ಠರೇ ತೀರ್ಮಾನಿಸಿದ್ದಾರೆ. ಯಾರ ಹುದ್ದೆಯನ್ನು ಮುಖ್ಯಮಂತ್ರಿ ತಪ್ಪಿಸಿಲ್ಲ, ಅದೇ ರೀತಿ ಪರಮೇಶ್ವರ ಅವರಿಗೆ ಸಿಎಂ ಹುದ್ದೆಯನ್ನು ಸಹ ಯಾರೂ ತಪ್ಪಿಸಿಲ್ಲ, ಪರಿಸ್ಥಿತಿಯನ್ನು ನೋಡಿಕೊಂಡು ಪಕ್ಷದ ವರಿಷ್ಠರೇ ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಿದ್ದು, ಇದರ ಜೊತೆಗೆ ಎಲ್ಲ ಸಮಸ್ಯೆಗಳನ್ನು ಅವರೇ ಬಗೆಹರಿಸಲಿದ್ದಾರೆ ಎಂದರು.

ನನ್ನ ಮೇಲೆ ಯಾರಾದರೂ ದೂರು ಕೊಡಲಿ: ಸಿದ್ದು ಹೆಸರೇಳದೇ ಅರ್ಕಾವತಿ ಹಗರಣ ಪ್ರಸ್ತಾಪಿಸಿದ ಹರಿಪ್ರಸಾದ್

ಜೆಡಿಎಸ್‌ ಬಿಜೆಪಿಯೊಂದಿಗೆ ಸೇರ ಬಯಸಿರುವುದು ಅದು ಪಕ್ಷದ ವಿಚಾರವಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನಗಳನ್ನು ಪಡೆಯುವ ಗುರಿಯನ್ನು ಜೆಡಿಎಸ್‌ ಹೊಂದಿತ್ತು. ಆದರೆ ಅಷ್ಟೊಂದು ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಇದೀಗ ಪಕ್ಷವನ್ನು ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿರುವುದಾಗಿ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಅವರೇ ಹೇಳಿಕೊಂಡಿದ್ದಾರೆ.

ಪಕ್ಷದ ತತ್ವ-ಸಿದ್ಧಾಂತಗಳು ಜೆಡಿಎಸ್‌ಗೆ ಮುಖ್ಯವಲ್ಲ. ಪ್ರತಿ ಬಾರಿ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದಾಗ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಲೆಯೇ ಬಂದಿದೆ. ಈ ಹಿಂದೆ ಕಾಂಗ್ರೆಸ್‌ನೊಂದಿಗೂ ಇದ್ದ ಜೆಡಿಎಸ್‌ ಇದೀಗ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ರಾಜ್ಯದಲ್ಲಿ ಪಕ್ಷವನ್ನು ಉಳಿಸಿಕೊಳ್ಳುವುದಕ್ಕಾಗಿ ಜೆಡಿಎಸ್ ಮೈತ್ರಿಗೆ ಮುಂದಾಗಿದೆ ಎಂದು ಹೇಳಿದರು.

ತಮಿಳುನಾಡು ರಾಜ್ಯದ ಸ್ಥಿತಿಗತಿಯ ಮೇಲೆ ಅಲ್ಲಿನ ಪ್ರಾದೇಶಿಕ ಪಕ್ಷದ ಮುಖಂಡ ಉದಯನಿಧಿ ಸ್ಟಾಲಿನ್ ಮಾತನಾಡಿದಬಹುದು. ಅವರ ಹೇಳಿಕೆಗೆ ಕಾಂಗ್ರೆಸ್‌ಗೆ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಪಕ್ಷದ ನಾಯಕರು ಸ್ಪಷ್ಟನೆ ನೀಡಿದ್ದಾರೆ. ಎಲ್ಲ ಧರ್ಮಗಳನ್ನು ಗೌರವಿಸುವ ಪಕ್ಷ ಕಾಂಗ್ರೆಸ್ಸಾಗಿದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎನ್ನುವುದರ ಕುರಿತು ಪಕ್ಷ ವರಿಷ್ಠರು,ಪ್ರಮುಖರು ಸಮಾಲೋಚನೆ ನಡೆಸಿ ನಿರ್ಧಾರಿಸಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ರಮ್ಯ ಸ್ಪರ್ಧಿಸುತ್ತಾರೆಯೋ, ಸುಮಲತ ಸ್ಪರ್ಧಿಸುತ್ತಾರೆಯೋ ಎನ್ನುವುದನ್ನು ಈಗಲೇ ಹೇಳಲಾಗುವುದಿಲ್ಲ ಎಂದರು.

ಖಾಸಗಿ ವಾಹನ ಮಾಲೀಕರು ತಮ್ಮ ಲಾಭಕ್ಕಾಗಿ ಹಾಗೂ ಶಕ್ತಿ ಯೋಜನೆಯನ್ನು ಖಾಸಗಿ ವಲಯಕ್ಕೂ ವಿಸ್ತರಿಸಬೇಕು ಎನ್ನುವ ಕಾರಣಕ್ಕೆ ಹೋರಾಟ ನಡೆಸುತ್ತಿದ್ದಾರಯೇ ಹೊರತು ಬೇರೇನೂ ಇಲ್ಲ. ಈ ಯೋಜನೆಯಿಂದ ನಮಗೂ ಲಾಭವಾಗುತ್ತದೆ ಎನ್ನುವ ಉದ್ದೇಶ ಅವರದ್ದಾಗಿದೆಯೇ ಹೊರತು ಶಕ್ತಿ ಯೋಜನೆಯನ್ನು ವಿರೋಧಿಸಿಲ್ಲ, ಅಸಮಧಾನವೂ ಇಲ್ಲ.

ಖಾಸಗಿ ವಾಹನಗಳಿಗೆ ಸಮಸ್ಯೆ ಮಾಡಬೇಕು ಎನ್ನುವ ದುರುದ್ದೇಶವಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಸೇರಿ ಇತರೆ ಭಾಗಗಳಲ್ಲಿ ಖಾಸಗಿ ವಾಹನಗಳೇ ಹೆಚ್ಚಾಗಿ ಸಂಚರಿಸುತ್ತವೆ. ಖಾಸಗಿ ಬಸ್‌ಗಳಿಗೆ ಯೋಜನೆ ನೀಡದ ಕಾರಣಕ್ಕೆ ವ್ಯವಹಾರ ಕಡಿಮೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲಿದ್ದು, ಅವರಿಗೆ ಯಾವ ರೀತಿಯ ಅನುಕೂಲ ಮಾಡಿಕೊಡಬೇಕು ಎನ್ನುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಬಿಜೆಪಿ ಸೇರಲು ಹೋಗಿದ್ದು ನಿಜಾನಾ? ಸ್ಫೋಟಕ ರಹಸ್ಯ ಬಹಿರಂಗ!

ಕರ್ನಾಟಕ ರಾಜ್ಯದ ಶಕ್ತಿ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. ಈ ಯೋಜನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿವೆ, ರಾಜ್ಯ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೇ ನೇರವಾಗಿ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

click me!