
ಧಾರವಾಡ(ಸೆ.10): ಮುಂಗಾರು ಮಳೆ ಕೈಕೊಟ್ಟು ರೈತರು ಸಂಕಷ್ಟದಲ್ಲಿದ್ದರೂ ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ರಾಜ್ಯ ಸರ್ಕಾರದ ವಿಳಂಬ ಧೋರಣೆ ಕುರಿತು ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಸ್ಪಷ್ಟಭರವಸೆ ನೀಡಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೂರಕ್ಕೆ ನೂರರಷ್ಟುಬರಗಾಲ ಪೀಡಿತ ತಾಲೂಕುಗಳ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಶನಿವಾರ ಚಾಲನೆ ನೀಡಿ, ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಬರಗಾಲ ಘೋಷಣೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿದ್ದು, ಅವುಗಳನ್ನು ಸಡಿಲಗೊಳಿಸಲು ಪತ್ರ ಬರೆದಿದ್ದೇನೆ. ಆದರೆ, ಅಲ್ಲಿಂದ ವಾಪಸ್ ಉತ್ತರವೇ ಬಂದಿಲ್ಲ. ಹೀಗಾಗಿ ಬರಘೋಷಣೆ ವಿಳಂಬವಾಗಿದೆ. ಇಷ್ಟಾಗಿಯೂ ಮುಂದಿನ ಸಚಿವ ಸಂಪುಟದಲ್ಲಿ ನಿಶ್ಚಿತವಾಗಿ ಬರಗಾಲ ಘೋಷಣೆ ಮಾಡಲಾಗುವುದು ಎಂದರು.
ಬರ ಪರಿಸ್ಥಿತಿಯಲ್ಲಿ ವಿಜಯಪುರ ರೈತರಿಗೆ ಮತ್ತೊಂದು ಬರೆ: ಡ್ಯಾಂನಿಂದ ಕೆನಾಲ್‌ಗೆ ಬಿಟ್ಟರು ಜಮೀನು ಸೇರದ ನೀರು..!
ಇದಕ್ಕೂ ಮುನ್ನ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಅಸಮರ್ಪಕ ಮಳೆಯಿಂದ ರಾಜ್ಯದ ಬಹುತೇಕ ಕಡೆ ಬರದ ಛಾಯೆ ಇದೆ. ಕೇಂದ್ರದ ಮರ್ಗಸೂಚಿ ಅನ್ವಯ 62 ತಾಲೂಕುಗಳಲ್ಲಿ ಮಾತ್ರ ಬರ ಘೋಷಣೆ ಮಾಡಬಹುದು. ಆದ್ದರಿಂದಲೇ ನಿಯಮಾವಳಿ ಸಡಿಲ ಮಾಡಲು ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸ್ಪಂದನೆ ಇಲ್ಲದ್ದರಿಂದ ಸಚಿವ ಸಂಪುಟದ ಉಪ ಸಮಿತಿ ಬರ ಎದುರಿಸುತ್ತಿರುವ 62 ತಾಲೂಕು ಸೇರಿ ರಾಜ್ಯದ 130 ಹೆಚ್ಚುವರಿ ತಾಲೂಕುಗಳನ್ನೂ ಈ ಪಟ್ಟಿಗೆ ಸೇರಿಸಿಕೊಳ್ಳಲು ತೀರ್ಮಾನಿಸಿದೆ. ಒಟ್ಟು 196 ತಾಲೂಕುಗಳಲ್ಲಿ ಬರ ಘೋಷಣೆಗೆ ಸಚಿವ ಸಂಪುಟದ ಉಪ ಸಮಿತಿ ತಿರ್ಮಾನಿಸಿದೆ. ಇನ್ನೊಂದು ವಾರದಲ್ಲಿ ಈ ತಾಲೂಕುಗಳಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡು ಮುಂದಿನ ಸಚಿವ ಸಂಪುಟದಲ್ಲಿ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಲಾಗುವುದು ಎಂದು ಹೇಳಿದರು.
196 ತಾಲೂಕಲ್ಲಿ ಬರ
ಸಚಿವ ಸಂಪುಟದ ಉಪ ಸಮಿತಿ ಬರ ಎದುರಿಸುತ್ತಿರುವ 62 ತಾಲೂಕು ಸೇರಿದಂತೆ 130 ಹೆಚ್ಚುವರಿ ತಾಲೂಕುಗಳನ್ನೂ ಈ ಪಟ್ಟಿಗೆ ಸೇರಿಸಲು ತೀರ್ಮಾನಿಸಿದೆ. ಒಟ್ಟು 196 ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ