
ಚಾಮರಾಜನಗರ (ಜ.4): ರಾಜ್ಯದ ಆಡಳಿತ ಮತ್ತು ಅಭಿವೃದ್ಧಿ ವಿಚಾರವಾಗಿ ಸಚಿವ ಡಾ ಹೆಚ್.ಸಿ. ಮಹದೇವಪ್ಪ ಅವರು ಇಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ಸಾಗುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಅಸ್ತಿತ್ವದ ಬಗ್ಗೆ ಮಾತನಾಡಿದ ಸಚಿವರು, 'ಮುಖ್ಯಮಂತ್ರಿಗಳು ರಾಜ್ಯವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಮತ್ತು ನಾಡನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಜನರು ನಮಗೆ ಮತ ನೀಡಿರುವುದು 5 ವರ್ಷಗಳ ಕಾಲ ಆಡಳಿತ ನಡೆಸಲಿ ಎಂದೇ ಹೊರತು ಮಧ್ಯದಲ್ಲಿ ನಿಲ್ಲಿಸಲಿಕ್ಕಲ್ಲ. ಹೀಗಾಗಿ, 2023 ರಿಂದ 2028 ರವರೆಗೂ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿ ಮುಂದುವರಿಯಲಿದೆ" ಎಂದು ಸ್ಪಷ್ಟಪಡಿಸಿದರು.
ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸುವ ಕುರಿತು ಮಾತನಾಡಿದ ಅವರು, 'ಈ ಹಿಂದೆ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ರಚನೆಗೂ ನಾನೇ ಸಲಹೆ ನೀಡಿದ್ದೆ. ಈಗ ಚಿಕ್ಕಲ್ಲೂರು ಪ್ರಾಧಿಕಾರ ರಚನೆಯ ಬಗ್ಗೆ ಸಮಗ್ರ ಚಿಂತನೆ ನಡೆಯುತ್ತಿದೆ. ನಾವು ಯಾರದ್ದೋ ಆಸ್ತಿ ಕಬಳಿಸಲು ಪ್ರಾಧಿಕಾರ ಮಾಡುವುದಿಲ್ಲ, ಬದಲಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಮ್ಮ ಗುರಿ' ಎಂದರು.
ಭಕ್ತರಿಗೆ ಮೂಲಭೂತ ಸೌಕರ್ಯವೇ ಆದ್ಯತೆ
'ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಅಗತ್ಯವಿರುವ ಕುಡಿಯುವ ನೀರು, ರಸ್ತೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಈ ನೆಲದ ಚಾರಿತ್ರಿಕತೆ ಮತ್ತು ಸಾಮಾಜಿಕ ಕಳಕಳಿಯನ್ನು ಜನರಿಗೆ ತಲುಪಿಸಬೇಕಿದೆ. ಕ್ಷೇತ್ರದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಮತ್ತು ಇತರರಿಗೂ ತಿಳಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಕೆಲಸ ಮಾಡಲಿದೆ' ಎಂದು ಸಚಿವ ಮಹದೇವಪ್ಪ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ