
ಉಡುಪಿ (ಜ.04): ಮಧ್ವನಗರಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮತ್ತೊಂದು ಐತಿಹಾಸಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ದೆಹಲಿಯ ಶ್ರೀಕೃಷ್ಣ ಭಕ್ತರೊಬ್ಬರು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿರುವ ಅಪ್ಪಟ ಚಿನ್ನದ ಹಾಳೆಗಳ 'ಭಗವದ್ಗೀತೆ'ಯನ್ನು ಜನವರಿ 8ರಂದು ಉಡುಪಿ ಕೃಷ್ಣನಿಗೆ ಅರ್ಪಿಸಲಾಗುವುದು.
ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 'ವಿಶ್ವಗೀತಾ ಪರ್ಯಾಯ'ದ ಸಮಾರೋಪದ ಅಂಗವಾಗಿ ಈ ವಿಶೇಷ ಹೊನ್ನಿನ ಕಾಣಿಕೆಯನ್ನು ಕೃಷ್ಣನ ಸನ್ನಿಧಿಯಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಭಗವದ್ಗೀತೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಆಧ್ಯಾತ್ಮಿಕ ಲೋಕದಲ್ಲಿ ಹೊಸ ಮೈಲಿಗಲ್ಲಾಗಲಿದೆ.
ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿನ್ನದ ಭಗವದ್ಗೀತೆಯನ್ನು ಅತ್ಯಂತ ಕಲಾತ್ಮಕವಾಗಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಭಗವದ್ಗೀತೆಯ ಎಲ್ಲಾ 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆಗಳ ಮೇಲೆ ಅಂದವಾಗಿ ಮುದ್ರಿಸಲಾಗಿದೆ. ಪ್ರತಿಯೊಂದು ಅಕ್ಷರವೂ ಭಕ್ತಿಯ ಸಂಕೇತವಾಗಿ ಕಂಗೊಳಿಸುತ್ತಿದ್ದು, ಇದು ಮಠದ ಇತಿಹಾಸದಲ್ಲಿಯೇ ಅಪರೂಪದ ಕಾಣಿಕೆಯಾಗಿ ಉಳಿಯಲಿದೆ.
ಜನೆವರಿ 8ರಂದು ನಡೆಯಲಿರುವ ಈ ಸಮಾರಂಭದಲ್ಲಿ ಚಿನ್ನದ ಭಗವದ್ಗೀತೆಯನ್ನು ಚಿನ್ನದ ರಥದಲ್ಲಿ ಇರಿಸಿ ಭವ್ಯವಾಗಿ ಮೆರವಣಿಗೆ ಮಾಡಲಾಗುವುದು. ನಂತರ ಶಾಸ್ತ್ರೋಕ್ತವಾಗಿ ಕೃಷ್ಣನಿಗೆ ಅರ್ಪಿಸಲಾಗುವುದು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ದೇಶದ ವಿವಿಧ ಭಾಗಗಳ ಗಣ್ಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ