ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎನ್ನುವ ದೀಕ್ಷೆಯು ಸಿರಿಗನ್ನಡವು ಜಗದೋದ್ಧಾರಕೆ ಎನ್ನುವ ಹಂಬಲದ ಮೂಲಕ ಮತ್ತಷ್ಟು, ಮಗದಷ್ಟು ಕಸುವು ಪಡೆದು ವಿಶ್ವವ್ಯಾಪಿಯಾಗಲಿ. ಸಮಸ್ತ ಕನ್ನಡಿಗರಿಗೆ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಸಮಸ್ತ ಕನ್ನಡಿಗರಿಗೆ 69ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ವಸಾಹತುಶಾಹಿ ನೀತಿಯಿಂದಾಗಿ ವಿವಿಧ ಪ್ರ್ಯಾಂತ್ಯಗಳಲ್ಲಿ ಹರಿದುಹಂಚಿಹೋಗಿದ್ದ ಕನ್ನಡಿಗರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಾಕಾರಗೊಂಡ ಭಾಷಾವಾರು ಏಕೀಕರಣದಡಿ ಒಗ್ಗೂಡಿದ ಸುದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಪ್ರತಿವರ್ಷ ನವೆಂಬರ್ 1ರಂದು ಆಚರಿಸುತ್ತೇವೆ. ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ಭಾರತದ ಮೇಲೆ ಹಿಡಿತ ಸಾಧಿಸಲು ಅನೇಕ ಕುತಂತ್ರಗಳನ್ನು ಅನುಸರಿಸಿದರು. ದೇಶದ ಜನತೆ ವಿವಿಧ ನೆಲೆಗಳಲ್ಲಿ ಒಗ್ಗೂಡುವುದನ್ನು ತಪ್ಪಿಸಲು ಆಡಳಿತಾತ್ಮಕ ಕಾರಣಗಳನ್ನು ಮುಂದಿರಿಸಿಕೊಂಡು ಇನ್ನಿಲ್ಲದಂತೆ ಒಡೆದರು.
undefined
ಇದರಲ್ಲಿ ಪ್ರಮುಖವಾದದ್ದು ಸಾಮಾನ್ಯ ಜನರು ಭಾಷೆ ಹಾಗೂ ಪ್ರಾಂತೀಯತೆಯ ಹೆಸರಿನಲ್ಲಿ ಒಗ್ಗೂಡುವುದಕ್ಕೆ ಆಸ್ಪದ ನೀಡದೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ಆಡಳಿತ ಪ್ರಾಂತ್ಯಗಳಿಗೆ ಅವರನ್ನು ಸೇರಿಸಿದರು. ಬಂಗಾಳದ ವಿಭಜನೆಯಿಂದ ಶುರುವಾದ ಅವರ ಈ ಪ್ರಯತ್ನ ದೇಶದುದ್ದಗಲಕ್ಕೂ ವ್ಯಾಪಿಸಿತ್ತು. ಇಂದಿನ ಕರ್ನಾಟಕದ ಭೂಭಾಗವೂ ಸೇರಿದಂತೆ ಒಡಿಶಾ, ಬಿಹಾರ, ಮಹಾರಾಷ್ಟ್ರ, ಈ ಹಿಂದಿನ ಆಂಧ್ರಪ್ರದೇಶಗಳೆಲ್ಲವೂ ಬ್ರಿಟಿಷರ ‘ಒಡೆದು ಆಳುವ ನೀತಿ’ಯ ಫಲವಾಗಿ ಭಾಷಾ ಐಕ್ಯತೆಯಿಂದ ದೂರ ಉಳಿಯುವಂತಾಗಿತ್ತು. ಹಾಗಾಗಿಯೇ, ದೇಶದುದ್ದಗಲಕ್ಕೂ ಸ್ವಾತಂತ್ರ್ಯ ಚಳವಳಿಯ ಜೊತೆಜೊತೆಗೇ ಭಾಷಾವಾರು ಏಕೀಕರಣದ ಆಶಯ ಮತ್ತು ಚಳವಳಿಗಳು ಒಗ್ಗೂಡಿಯೇ ನಡೆದವು.ಭಾರತವನ್ನು ಅಲ್ಲಿನ ಭಾಷೆಗಳು ಹಾಗೂ ಭೌಗೋಳಿಕ ಪರಿಸರದ ಆಧಾರದಲ್ಲಿ ವಿಭಜನೆ ಮಾಡಬೇಕು ಎನ್ನುವ ಸಲಹೆಯನ್ನು ಬ್ರಿಟಿಷ್ ರಾಜಕಾರಣಿ ಜಾನ್ ಬ್ರೈಟ್ ಬ್ರಿಟನ್ ಸಂಸತ್ತಿನಲ್ಲಿ 1858ರಲ್ಲಿಯೇ ನೀಡಿದ್ದ.
ಎರಡು ಬಾರಿ ಗೆದ್ದ ಕುಮಾರಸ್ವಾಮಿ ಏನು ಮಾಡಿದರು: ಸಿ.ಪಿ.ಯೋಗೇಶ್ವರ್ ಪ್ರಶ್ನೆ
ಆದರೆ, ಬ್ರಿಟಿಷರು ಇದಕ್ಕೆ ವ್ಯತಿರಿಕ್ತವಾಗಿ ಭಾರತವು ಭಾಷಾವಾರು ಐಕ್ಯತೆಯನ್ನು ಕಂಡುಕೊಳ್ಳದಂತೆ ಒಡೆದು ಹಾಕಿದರು. ವಿಪರ್ಯಾಸವೆಂದರೆ ಅವರ ಈ ನಡೆಯೇ ಮುಂದೆ ಭಾರತದ ಸ್ವಾತಂತ್ರ್ಯ ಸಂಗ್ರಾಮವು ದೇಶದುದ್ದಗಲಕ್ಕೂ ಬಲಗೊಳ್ಳಲು ಪರೋಕ್ಷವಾಗಿ ಕಾರಣವಾಯಿತು. ಬೆಂಗಾಲದಲ್ಲಿ ಆರಂಭಗೊಂಡ ವಂಗಭಂಗ ಚಳವಳಿಯನ್ನು ಕರ್ನಾಟಕವೂ ಸೇರಿದಂತೆ ಬಿಹಾರ, ಒಡಿಶಾ, ಮಹಾರಾಷ್ಟ್ರ, ಆಂಧ್ರದ ಜನತೆ ಸೂಕ್ಷ್ಮವಾಗಿ ಗಮನಿಸತೊಡಗಿದರು. ಭಾಷಾ ಹಿನ್ನೆಲೆಯಲ್ಲಿ ತಾವುಗಳು ಒಗ್ಗೂಡಬೇಕಾದ ಪ್ರೇರಣೆಯನ್ನು ಪಡೆದರು. ಸ್ಥಳೀಯವಾಗಿ ಭಾಷಾವಾರು ಪ್ರಾಂತ್ಯಗಳ ಏಕೀಕರಣಕ್ಕೆ ಪಣತೊಟ್ಟರು.
ಕರ್ನಾಟಕದ ಏಕೀಕರಣ: ಕರ್ನಾಟಕದ ಮಟ್ಟಿಗೆ ನೋಡುವುದಾದರೆ ಆಲೂರು ವೆಂಕಟರಾಯರು, ಬೆನಗಲ್ ರಾಮರಾಯರು, ರಾ.ಹ. ದೇಶಪಾಂಡೆಯವರು, ಕರ್ಪೂರ ಶ್ರೀನಿವಾಸರಾವ್, ಎಂ.ವೆಂಕಟಕೃಷ್ಣಯ್ಯ ಆದಿಯಾಗಿ ಅನೇಕ ಮಹನೀಯರು ಕರ್ನಾಟಕದ ಏಕೀಕರಣವನ್ನು ವ್ರತದಂತೆ ಜೀವಿಸಿದರು, ಪಸರಿಸಿದರು. ಸ್ವಾತಂತ್ರ್ಯ ಚಳವಳಿಯೊಟ್ಟಿಗೇ ಭಾಷಾವಾರು ಏಕೀಕರಣದ ಚಳವಳಿಯು ಕರ್ನಾಟಕದಲ್ಲಿ ಬೆಳೆದುಬಂದಿತು. ಬೆಳಗಾವಿಯಲ್ಲಿ 1924ರಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿಯೇ ‘ಅಖಿಲ ಕರ್ನಾಟಕ ಏಕೀಕರಣ ಪರಿಷತ್ತು’ ಸಹ ತಲೆ ಎತ್ತಿತು. ಕರ್ನಾಟಕ ಏಕೀಕರಣ ಸಂಘವು ಅಸ್ತಿತ್ವಕ್ಕೆ ಬಂದಿತು.
ಹೀಗೆ ಸ್ವಾತಂತ್ರ್ಯ ಹಾಗೂ ಏಕೀಕರಣದ ಚಳವಳಿಗಳು ಜೊತೆ ಜೊತೆಯಲ್ಲೇ ಸಾಗಿದವು. ಸೇವಾದಳದ ನಾ.ಸು. ಹರ್ಡೀಕರ್ ಅವರು 1926ರಲ್ಲಿಯೇ ಕರ್ನಾಟಕದ ಏಕೀಕರಣಕ್ಕಾಗಿ 36000 ಸಹಿ ಸಂಗ್ರಹ ಮಾಡಿದ್ದನ್ನು ಇಲ್ಲಿ ಗಮನಿಸಬಹುದು. ಅಂತಿಮವಾಗಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ನ.1, 1956ರಲ್ಲಿ ಕರ್ನಾಟಕದ ಏಕೀಕರಣವು ಸಾಕಾರಗೊಂಡಿತು. ಕರ್ನಾಟಕವೆಂಬ ಹೆಸರುಭಾಷೆಯ ಆಧಾರದಲ್ಲಿ ಕನ್ನಡಿಗರು ಏಕೀಕೃತಗೊಂಡರೂ ರಾಜಕೀಯ ಮೇಲಾಟಗಳು, ಆಡಳಿತಾತ್ಮಕ ತೊಡಕುಗಳ ಕಾರಣದಿಂದಾಗಿ ಮೈಸೂರು ರಾಜ್ಯವು ಕರ್ನಾಟಕವೆನ್ನುವ ಮರುನಾಮಕರಣಗೊಳ್ಳುವುದು ಸಾಧ್ಯವಾಗಿರಲಿಲ್ಲ.
ಈ ಕುರಿತಾಗಿ ಐಕ್ಯಮತವನ್ನು ರೂಪಿಸಲು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುವುದು ಹಲವಾರು ರಾಜಕೀಯ ಸ್ಥಿತ್ಯಂತರಗಳು, ಅಪನಂಬಿಕೆಗಳ ಕಾರಣಕ್ಕೆ ಆರಂಭದಲ್ಲಿ ಉಂಟಾಗಲಿಲ್ಲ. ಅದರೆ, ಇದಕ್ಕೆ ವ್ಯತಿರಿಕ್ತವಾಗಿ ನಾಡಿನುದ್ದಗಲದ ಸಾಹಿತ್ಯಕ, ಸಾಂಸ್ಕೃತಿಕ ಪರಿಸರಗಳಲ್ಲಿ ಕನ್ನಡಿಗರು ನೆಲೆಸಿರುವ ಈ ಭೂಭಾಗಕ್ಕೆ ಕರ್ನಾಟಕವೆಂದು ಹೆಮ್ಮೆಯಿಂದ ಕರೆಯುವ ಬಗ್ಗೆ ಯಾವುದೇ ತಕರಾರು ಇರಲಿಲ್ಲ.ಆಡಳಿತಾತ್ಮಕವಾಗಿ ಮೈಸೂರು ರಾಜ್ಯವೆಂದೇ ಇದ್ದರೂ ಜನಮಾನಸದಲ್ಲಿ ಕರ್ನಾಟಕವೆನ್ನುವ ಹೆಸರು ಏಕೀಕರಣದ ಸಂದರ್ಭದಿಂದಲೇ ಮೊಳೆಯಲು ಪ್ರಾರಂಭಿಸಿತ್ತು. ನಾಡಿನ ಜನತೆಯ ಈ ಅಭೀಪ್ಸೆಯನ್ನು ದೇವರಾಜ ಅರಸು ಅವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಕಾರಗೊಳಿಸಿದರು.
27.07.1972ರಂದು ದೇವರಾಜ ಅರಸು ಅವರು ‘ಕರ್ನಾಟಕ’ ನಾಮಕರಣದ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಈ ನಿರ್ಣಯವನ್ನು ಅಂದಿನ ವಿಧಾನ ಸಭಾಧ್ಯಕ್ಷರಾಗಿದ್ದ ಕೆ.ಎಸ್.ನಾಗರತ್ನಮ್ಮನವರು, “ಭಾರತದ ಸಂವಿಧಾನದಲ್ಲಿ ನಮೂದಿಸಿದ ಈ ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಬದಲಿಸಬೇಕೆಂದು ಈ ಸಭೆಯು ಶಿಫಾರಸ್ಸು ಮಾಡುತ್ತದೆ” ಎಂಬುದಾಗಿ ಘೋಷಿಸಿ ಮತಕ್ಕೆ ಹಾಕಿದರು. ಈ ಚಾರಿತ್ರಿಕ ನಿರ್ಣಯವು ಯಾವುದೇ ವಿರೋಧಗಳಿಲ್ಲದೆ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು. ಇದೇ ನಿರ್ಣಯವು 31.7.1972ರಂದು ವಿಧಾನ ಪರಿಷತ್ತಿನಲ್ಲಿಯೂ ಅಂಗೀಕರಿಸಲ್ಪಟ್ಟಿತು. ಮುಂದೆ 30.07.1973 ಹಾಗೂ 8.8.1973ರಂದು ಕ್ರಮವಾಗಿ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ನಿರ್ಣಯವು ಅನುಮೋದನೆಗೊಂಡು, 8.10.1973ರಂದು ಅಂದಿನ ರಾಷ್ಟ್ರಪತಿ ವಿ.ವಿ.ಗಿರಿ ಅವರ ಅಂಕಿತದೊಂದಿಗೆ ಅಧಿಕೃತಗೊಂಡಿತು.
ಕನ್ನಡ ನಾಡಿಗೆ ಕರ್ನಾಟಕ ಎಂದು ಹೆಸರಾದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು, “ಕರ್ನಾಟಕ ಎಂಬ ಹೆಸರಿಗೆ ಪುರಾತನ ಇತಿಹಾಸವಿದೆ, ಸಂಸ್ಕೃತಿ, ಸಂಪ್ರದಾಯವಿದೆ. ಪುರಾಣ, ವಾಸ್ತುಶಿಲ್ಪಗಳಲ್ಲಿ ಈ ಹೆಸರಿನ ಉಲ್ಲೇಖವಿದೆ. ಇದು ಅನೇಕ ಆಶೋತ್ತರಗಳನ್ನು ಪ್ರತಿಬಿಂಬಿಸುವ ಹೆಸರು. ಈ ಆಶೋತ್ತರಗಳ ಈಡೇರಿಕೆಗಾಗಿ ಕರ್ನಾಟಕದ ಜನತೆ ಸಿದ್ಧರಾಗಬೇಕು” ಎಂದು ಅಭಿನಂದಿಸಿದ್ದರು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು, ನವೆಂಬರ್ 1, 1956ರಂದು 17ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ‘ಕರ್ನಾಟಕ ನಾಮಕೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ, “ಇದು ಮಹಾಮಂಗಳ ದಿನ. ಬಹುದಿನಗಳ ಹಂಬಲ ತುಂಬಿ ಬಂದ ಹರ್ಷೋತ್ಸವ ಇಂದು ನಡೆಯುತ್ತಿದೆ. ‘ಕರ್ನಾಟಕ’ ಇಂದಿನಿಂದ ನಮ್ಮ ರಾಜ್ಯದ ಅಧಿಕೃತ ಹೆಸರು” ಎಂದು ಘೋಷಿಸಿದರು.
ಎಚ್‌ಎಂಟಿ ಜಾಗಕ್ಕೆ ಈಶ್ವರ್ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ
ಉಸಿರಾಗಲಿ ಕನ್ನಡ: ಕನ್ನಡ ನಾಡು ಏಕೀಕರಣಗೊಂಡದ್ದು ಹಾಗೂ ಕರ್ನಾಟಕ ಎಂದು ಹೆಸರಾಗಿದ್ದನ್ನು ಈ ಪ್ರಕಾರವಾಗಿ ನಾವೆಲ್ಲರೂ ಇಂದು ಸ್ಮರಿಸಬೇಕಿದೆ. ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎನ್ನುವ ಧ್ಯೇಯದೊಂದಿಗೆ ನಮ್ಮ ಸರ್ಕಾರವು ಇಂದು ಕರ್ನಾಟಕವನ್ನು ನಮ್ಮ ನಾಡಿನ ಎಲ್ಲ ವಲಯಗಳಲ್ಲಿಯೂ ಆಳವಾಗಿಸುವುದರೊಟ್ಟಿಗೇ, ಜಾಗತಿಕ ಆಶೋತ್ತರಗಳನ್ನು ಪ್ರತಿನಿಧಿಸುವ ಸಮರ್ಥ ಭಾಷೆಯಾಗಿಯೂ ರೂಪಿಸಲು ಟೊಂಕಕಟ್ಟಿದೆ. ಕನ್ನಡ ಕನ್ನಡಿಗರ ಹೃದಯದ ಭಾಷೆಯಷ್ಟೇ ಅಲ್ಲ, ಜ್ಞಾನ-ವಿಜ್ಞಾನ-ತಂತ್ರಜ್ಞಾನದ ಭಾಷೆಯಾಗಿಯೂ ಜಾಗತಿಕ ಹೆಮ್ಮೆಯಾಗಬೇಕು ಎನ್ನುವ ಸಂಕಲ್ಪ ಮಾಡಿದೆ. ಇದಕ್ಕೆ ನಾಡಿನ ಎಲ್ಲ ವಲಯದ ಮಹನೀಯರು ಕೈಜೋಡಿಸಬೇಕು ಎಂದು ಈ ಸಂದರ್ಭದಲ್ಲಿ ನಾನು ಕೋರುತ್ತೇನೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎನ್ನುವ ದೀಕ್ಷೆಯು ಸಿರಿಗನ್ನಡವು ಜಗದೋದ್ಧಾರಕೆ ಎನ್ನುವ ಹಂಬಲದ ಮೂಲಕ ಮತ್ತಷ್ಟು, ಮಗದಷ್ಟು ಕಸುವು ಪಡೆದು ವಿಶ್ವವ್ಯಾಪಿಯಾಗಲಿ.