ಗೌರವದಿಂದ ಸಿಎಂ ಹುದ್ದೆ ತೊರೆಯಿರಿ: ವಿಜಯೇಂದ್ರ

By Kannadaprabha News  |  First Published Sep 25, 2024, 4:58 AM IST

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅವಕಾಶ ಕೊಟ್ಟಿದ್ದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದ್ದು, ಕಾನೂನಿನ ಎದುರು ಎಲ್ಲರೂ ಒಂದೇ ಎಂದು ನ್ಯಾಯಾಲಯ ತಿಳಿಸಿದೆ ಎಂದು ಹೇಳಿದರು.


ಬೆಂಗಳೂರು(ಸೆ.25): ಮುಡಾ ಹಗರಣ ಸಂಬಂಧ ಹೈಕೋರ್ಟ್‌ ನೀಡಿರುವ ತೀರ್ಪು ಪ್ರತಿಪಕ್ಷಗಳು ನಡೆಸಿದ ಬೆಂಗಳೂರು-ಮೈಸೂರು ಪಾದಯಾತ್ರೆಗೆ ಸಂದ ಮೊದಲ ಹಂತದ ಜಯ ಎಂದು ಬಣ್ಣಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ತೀರ್ಪನ್ನು ಗೌರವಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳವಾರ ಬಿಜೆಪಿ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅವಕಾಶ ಕೊಟ್ಟಿದ್ದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದ್ದು, ಕಾನೂನಿನ ಎದುರು ಎಲ್ಲರೂ ಒಂದೇ ಎಂದು ನ್ಯಾಯಾಲಯ ತಿಳಿಸಿದೆ ಎಂದು ಹೇಳಿದರು.

Tap to resize

Latest Videos

ಮುಡಾ ಹಗರಣ: ಸಿದ್ದು ತನಿಖೆಗೆ 11 ಸಮರ್ಥನೆ ನೀಡಿದ ಹೈಕೋರ್ಟ್‌

ಹೈಕೋರ್ಟ್‍ನಲ್ಲಿ ಸುದೀರ್ಘ ವಾದ-ಪ್ರತಿವಾದ ಬಳಿಕ ತೀರ್ಪು ಹೊರಬಿದ್ದಿದೆ. ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ಕೊಟ್ಟಿದ್ದರು. ಕಾಂಗ್ರೆಸ್ಸಿಗರು ರಾಜ್ಯಪಾಲರು, ರಾಜಭವನವನ್ನು ಕೇಂದ್ರದ ಏಜೆಂಟ್ ಎಂದು ಆಕ್ಷೇಪಿಸಿದ್ದರು. ಕಳೆದ ಕೆಲವು ತಿಂಗಳಿನಿಂದ ಬಿಜೆಪಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸಲಾಗಿತ್ತು. ನಂತರ ಸ್ವತಃ ಮುಖ್ಯಮಂತ್ರಿ ಕುಟುಂಬವೇ ಫಲಾನುಭವಿಗಳಾಗಿರುವ ಮೈಸೂರಿನ ಮುಡಾ ಹಗರಣ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಯಿತು. ಬೆಂಗಳೂರು-ಮೈಸೂರು ಪಾದಯಾತ್ರೆಯನ್ನು ನಡೆಸಿ ಬಿಜೆಪಿ- ಜೆಡಿಎಸ್ ಒಟ್ಟಾಗಿ ಯಶಸ್ವಿ ಹೋರಾಟ ಮಾಡಲಾಯಿತು ಎಂದು ಹೇಳಿದರು.

ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಸಿಎಂ ತಿಳಿಸಿದ್ದರು. ಆದರೆ ಅದು ಹುಸಿಯಾಗಿದೆ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಭ್ರಷ್ಟಾಚಾರದ ಕಳಂಕ ಹೊತ್ತ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ವಿಶ್ವಾಸ ಇದೆ. ಮುಡಾ ವಿಚಾರದಲ್ಲಿ ತಮ್ಮ ಪಾತ್ರ ಇಲ್ಲ ಎಂಬುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು. ಬಳಿಕ ರಾಜಭವನ, ರಾಜ್ಯಪಾಲರ ವಿರುದ್ಧ ತೇಜೋವಧೆ ಮಾಡಿದ್ದರು. ಈಗ ಹೈಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿರುವುದರಿಂದ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಉಪಸ್ಥಿತರಿದ್ದರು.

click me!