
ಮಂಡ್ಯ (ಏ.22): ನಾಗಮಂಗಲ ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ 39 ವರ್ಷಗಳ ನಂತರ ಹುಚ್ಚಪ್ಪಸ್ವಾಮಿ ಜಾತ್ರೆ ಆಯೋಜನೆಯಾಗಿದ್ದು, ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ದೇವಾಲಯದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹುಚ್ಚಪ್ಪ ಸ್ವಾಮಿ ದರ್ಶನ ಪಡೆದ ಸಿಎಂ, ಸಚಿವರಾದ ಚಲುವರಾಯಸ್ವಾಮಿ, ಬೈರತಿ ಸುರೇಶ್ ಸೇರಿ ಹಲವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 39ವರ್ಷಗಳ ನಂತರ ಹುಚ್ಚಪ್ಪಸ್ವಾಮಿ ಜಾತ್ರೆ ನಡೆಯುತ್ತಿದೆ. ಒಂದು ಕೋಟಿ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣವಾಗಿದೆ. ತಾಯೂರು ಜಾತ್ರೆಗೆ ನಾನು ತಪ್ಪದೆ ಹೋಗುತ್ತೇನೆ. ದೇವಾಲಯಕ್ಕೆ ಹೋಗ್ತೀನಿ ಆದರೆ ಹರಕೆ ಹೊತ್ತು ಹೋಗಲ್ಲ. ದೇವಸ್ಥಾನಕ್ಕೆ ಹೋಗುವಾಗ ಆಷಾಡಭೂತಿತನ ಇರಬಾರದು. ಶ್ರದ್ಧೆ ಭಕ್ತಿ ಇರುವವರಿಗೆ ಮಾತ್ರ ದೇವರು ಒಲಿಯುತ್ತಾನೆ ಎಂದರು.
ಇದನ್ನೂ ಓದಿ: ಬರೋಬ್ಬರಿ 39 ವರ್ಷಗಳ ಬಳಿಕ ಈ ಗ್ರಾಮದಲ್ಲಿ ಜಾತ್ರೆ; ಹುಚ್ಚಪ್ಪಸ್ವಾಮಿ ದರ್ಶನಕ್ಕೆ ಬರ್ತಿದ್ದಾರೆ ಸಿಎಂ ಸಿದ್ದರಾಮಯ್ಯ!
ಮನುಷ್ಯನನ್ನ ಪ್ರೀತಿಸಿ:
ಜೀವನದಲ್ಲಿ ಕೆಟ್ಟ ಕೆಲಸ ಮಾಡಬಾರದು ಮನುಷ್ಯ ಮನುಷ್ಯನನ್ನ ಪ್ರೀತಿಸಿಬೇಕು. ಪಟ್ಟಭದ್ರ ಹಿತಾಸಕ್ತಿಗಳು ಜಾತಿ ಮಾಡಿದ್ರು. ಮೊದಲು ಮನುಷ್ಯತ್ವ ಅನಂತರ ಜಾತಿ. ಎಲ್ಲ ಜಾತಿ ಧರ್ಮದವರು ವಿದ್ಯಾವಂತರಾಗಬೇಕು ಎಂದು ಅಂಬೇಡ್ಕರ್ ಹೇಳಿದ್ರು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಈ ಮೂರನ್ನು ಅಂಬೇಡ್ಕರ್ ಹೇಳಿಕೊಟ್ಟಿದ್ದಾರೆ. ದೇವರ ಪೂಜೆ, ಧರ್ಮದ ಆಚರಣೆಗೆ ಸ್ವಾತಂತ್ರ್ಯವಿದೆ. ಆದರೆ ಮನುಷ್ಯತ್ವ ಮರೆಯಬಾರದು. ವೈರುದ್ಧತೆ ಸಮಾಜದಲ್ಲಿ ಸಮಾನತೆ ಸಾಧಿಸಲು ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಯಾರು ಹುಟ್ಟುತ್ತ ದಡ್ಡರಲ್ಲ.ಸಂಸ್ಕೃತ ಕಲಿಯಲು ಹೋದ ಶೂದ್ರ ಕಿವಿಗೆ ಕಾದ ಸೀಸ ಊಯ್ಯುತ್ತಿದ್ರು ಎಂದರು.
ಶಿಕ್ಷಣದ ಮಹತ್ವ: ಶಿಕ್ಷಣ, ಸಂಘಟನೆ, ಹೋರಾಟವನ್ನು ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ಶಿಕ್ಷಣ ಇಲ್ಲದಿದ್ದರೆ ಗುಲಾಮಗಿರಿ ಮನೆಮಾಡುತ್ತದೆ. ಜಾತ್ರೆ, ಹಬ್ಬ ಆಚರಿಸಿ, ಆದರೆ ಮಕ್ಕಳ ವಿದ್ಯೆಗೆ ತೊಡಕಾಗದಿರಿ ಎಂದರು. ಈ ವೇಳೆ ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ ಅವರು, ನಾನು 1 ರಿಂದ 4ನೇ ತರಗತಿಗೆ ಹೋಗಿಲ್ಲ. ನಾನು 5ನೇ ತರಗತಿಗೆ ನೇರವಾಗಿ ಸೇರಿಕೊಂಡೆ. ನಂಜೇಗೌಡ ಎಂಬವ ನನಗೆ ಮರಳ ಮೇಲೆ ಅಕ್ಷರ ಕಲಿಸಿದರು. ಹಾಗಾಗಿ ರಾಜಪ್ಪ ನನ್ನನ್ನು 5ನೇ ತರಗತಿಗೆ ಸೇರಿಸಿಕೊಂಡರು. ರಾಜಪ್ಪ ಮುಖ್ಯಶಿಕ್ಷಕರಾಗಿ ಬರದೆ ಹೋಗಿದ್ರೆ ನಾನು ಲಾಯರ್ ಓದುತ್ತಿರಲಿಲ್ಲ, ಸಿಎಂ ಆಗ್ತಿರಲಿಲ್ಲ ಎಂದು ಸ್ಮರಿಸಿದರು.
ರಾಜಕೀಯ ಪಯಣ:
ಭಾಷಣದ ವೇಳೆ ರಾಜಕೀಯ ಜೀವನದ ಬಗ್ಗೆ ತಿಳಿಸಿದ ಸಿಎಂ ಸಿದ್ದರಾಮಯ್ಯ ಅವರು, ಸಮಾಜದಲ್ಲಿ ಓದಿರುವವರಿಗೆ ಸ್ವಾಭಿಮಾನ, ಗೌರವ ಇರುತ್ತದೆ. ಗೆಲುವು-ಸೋಲು ರಾಜಕೀಯದಲ್ಲಿ ಸಾಮಾನ್ಯ. ನಾನು 4 ಬಾರಿ ಸೋತಿದ್ದೇನೆ, ಆದರೆ 16 ಬಜೆಟ್ ಮಂಡಿಸಿದ್ದೇನೆ. ದೇವರಾಜ ಅರಸು ಬಿಟ್ರೆ 5 ವರ್ಷ ಸಿಎಂ ಆಗಿದಿದ್ದು ನಾನೇ. ಯಾವುದೇ ವಿದ್ಯೆಯನ್ನು ತುಚ್ಛವೆಂದು ಭಾವಿಸಬೇಡಿ ಎಂದು ಹೇಳಿದರು.
ಗ್ಯಾರಂಟಿ ಯೋಜನೆ:
ಬರೀ ಕುರುಬರ ಪ್ರೀತಿಯಿಂದ ಅಲ್ಲ ಸಮಾಜದ ಎಲ್ಲ ವರ್ಗದವರ ಪ್ರೀತಿಯಿಂದ. ಎಲ್ಲಾ ಜಾತಿ, ಧರ್ಮದವರಿಗೆ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ನಮ್ಮ ಮನೆ ಪಕ್ಕ ಬಡವರಿದ್ರು ಅವರಿಗೇನಾದರು ತೊಂದರೆ ಆದರೆ ನಮ್ಮ ಮನೆಗೆ ಬಂದು ಅನ್ನಕ್ಕಾಗಿ ನಿಲ್ಲುತ್ತಿದ್ರು. ಅದನ್ನ ನೋಡಿ ನಾನು ಸಿಎಂ ಆದರೆ ಯಾರೂ ಹಸಿವಿನಿಂದ ಬಳಲಬಾರದು ಎಂದು ಕೊಂಡಿದ್ದೆನು.ಅದರಂತೆ 10ಕೆಜಿ ಅಕ್ಕಿ ನೀಡುತ್ತಿದ್ದೇವೆ ಎಂದರು.
ಮಂಡ್ಯ ಅಭಿವೃದ್ಧಿ ಚಲುವರಾಯಸ್ವಾಮಿ ಕೊಡುಗೆ:
ಮಂಡ್ಯದ ಅಭಿವೃದ್ಧಿಗೆ ಸಚಿವ ಚಲುವರಾಯಸ್ವಾಮಿ ಕಾರಣ ಎಂದ ಸಿಎಂ ಸಿದ್ದರಾಮಯ್ಯ ಅವರು, ಮೆಡಿಕಲ್ ಕಾಲೇಜ್, KSRTC ಡಿವಿಷನ್, ಮೈಶುಗರ್ ಫ್ಯಾಕ್ಟರಿ ಉಳಿವಿಗೆ ಅವರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ಇದನ್ನೂ ಓದಿ: ಕನ್ನಡಿಗನ ಮೇಲೆ ಹಲ್ಲೆ ಮಾಡಿದ ವಿಂಗ್ ಕಮಾಂಡರ್: ಕ್ರಮಕ್ಕೆ ಸಿಎಂ ಆದೇಶ
ಸಿಎಂಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಹದಿನಾಲ್ಕು ಕೂಟದ ಗ್ರಾಮಸ್ಥರು ಮತ್ತು ಅಭಿಮಾನಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿಗದೆ, ಕುರಿ, ಕಂಬಳಿ ನೀಡಿ ಸನ್ಮಾನಿಸಿದರು.
ತಮಾಷೆಯ ಘಟನೆ:
ಭಾಷಣದ ವೇಳೆ ತಾವು ಮುಸ್ಲಿಂ ಮುಖಂಡ ಎಂದು ಪರಿಚಯಿಸಿಕೊಂಡ ವ್ಯಕ್ತಿಗೆ, 'ಕ್ಯಾ ಜೀ' ಎಂದು ಸಿಎಂ ತಮಾಷೆಯಾಗಿ ಉತ್ತರಿಸಿ, ಸಭೆಯಲ್ಲಿ ನಗೆಯ ತರಂಗ ಎಬ್ಬಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ