ಜೀವ ಜಲ ಕೊರತೆ: ಕುಡಿವ ನೀರು ಸಮಸ್ಯೆ ತಡೆಗೆ ಸಿಎಂ ಸಿದ್ದರಾಮಯ್ಯ ಸಭೆ

By Kannadaprabha NewsFirst Published Jun 10, 2023, 4:53 AM IST
Highlights

ತಕ್ಷಣವೇ ಕ್ರಮಕ್ಕೆ ಅಧಿಕಾರಿಗಳಿಗೆ ತಾಕೀತು, ಸಮಸ್ಯೆ ಇರುವೆಡೆ ಟ್ಯಾಂಕರಲ್ಲಿ ನೀರಿಗೆ ಸೂಚನೆ, ನಾಡಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಮತ್ತೊಂದು ಸಭೆಗೆ ನಿರ್ಧಾರ

ಬೆಂಗಳೂರು(ಜೂ.10):  ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಕೊಪ್ಪಳ, ಕಲಬುರಗಿ ಸೇರಿದಂತೆ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹಾಗೂ ನಗರಾಭಿವೃದ್ಧಿ ಇಲಾಖಾ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಿದ ಅವರು, ರಾಜ್ಯದ ಯಾವ ಭಾಗದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ಮುಂಗಾರು ಆರಂಭವಾಗುವವರೆಗೆ ನೀರಿನ ಅಭಾವವನ್ನು ಸಮರ್ಪಕವಾಗಿ ನಿಭಾಯಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮ ಮತ್ತು ಸಿದ್ಧತೆಗಳನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳಬೇಕು. ಈ ಬಗ್ಗೆ ಕಳೆದ ವಾರವೇ ನಾನು ಸೂಚನೆ ನೀಡಿದ್ದೇನೆ. ಈ ಬಗ್ಗೆ ಸೋಮವಾರ ಮತ್ತೊಮ್ಮೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಪಷ್ಟಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Latest Videos

ಕಲುಷಿತ ನೀರು: ರಾಯಚೂರಲ್ಲಿ ಮತ್ತೆ 38 ಮಂದಿ ಅಸ್ವಸ್ಥ

ರಾಜ್ಯದ ಯಾವುದೇ ಹಳ್ಳಿ, ನಗರ ಅಥವಾ ಪಟ್ಟಣಗಳಲ್ಲಿ ನೀರಿನ ಸಮಸ್ಯೆ ಕಂಡುಬಂದರೆ ಸ್ಥಳೀಯ ಸಂಸ್ಥೆಗಳಿಂದ ಟ್ಯಾಂಕರ್‌ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಮುಂಗಾರು ತಡವಾಗಿರುವುದರಿಂದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟತಳಸೇರಿದೆ. ಹಾಗಾಗಿ ಜಲಾಶಯಗಳ ನೀರು ಲಭ್ಯವಿರುವೆಡೆ ಆ ನೀರು ಬಳಸಿಕೊಂಡು ಕುಡಿಯುವ ನೀರು ಪೂರೈಕೆ ಮಾಡಬೇಕು. ಉಳಿದೆಡೆ ಬೋರ್‌ವೆಲ್‌ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜಿಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.

ಕಲುಷಿತ ನೀರಿಂದ ಸಾವು: ಮಾಹಿತಿ ಕೇಳಿದ ಸಿಎಂ

ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮಕ್ಕಳು ಮೃತಪಟ್ಟಿರುವ ಪ್ರಕರಣಗಳ ಸಂಬಂಧ ಮುಖ್ಯಮಂತ್ರಿ ಅವರು ಇದೇ ವೇಳೆ ಅಧಿಕಾರಿಗಳಿಂದ ಮಾಹಿತಿ ಹೇಳಿದ್ದಾರೆ. ಸಂಬಂಧಪಟ್ಟಜಿಲ್ಲಾಧಿಕಾರಿಯಿಂದ ವರದಿ ಪಡೆದು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟಜಿಲ್ಲಾಡಳಿತ ಎಚ್ಚರ ವಹಿಸಬೇಕೆಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
 

click me!