ಕೊರೊನಾ ನಿಯಂತ್ರಣಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ: ಮಕ್ಕಳಿಗೆ ರಜೆ, ಗರ್ಭಿಣಿಯರಿಗೆ ಮಾಸ್ಕ್ ಕಡ್ಡಾಯ!

Published : May 26, 2025, 07:07 PM IST
CM Siddaramaiah Covid-19 meeting

ಸಾರಾಂಶ

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಗರ್ಭಿಣಿಯರು, ವೃದ್ಧರು ಮತ್ತು ದೀರ್ಘಕಾಲಿಕ ಕಾಯಿಲೆ ಇರುವವರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಶಾಲಾ ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದರೆ ರಜೆ ನೀಡಬೇಕು.

ಬೆಂಗಳೂರು (ಮೇ 26): ರಾಜ್ಯದಲ್ಲಿ ಕೋವಿಡ್ ಸೋಂಕಿತ (Covid-19) ಪ್ರಕರಣಗಳು ಎಲ್ಲ ಗರ್ಭಿಣಿಯರು, ವೃದ್ಧರು, ದೀರ್ಘಕಾಲಿಕ ಅನಾರೋಗ್ಯ ಸಮಸ್ಯೆ ಉಳ್ಳವರು ಮಾಸ್ಕ್ ಧರಿಸಬೇಕು. ಶಾಲೆಗೆ ಬರುವ ಮಕ್ಕಳಿಗೆ ಜ್ವರ, ಕೆಮ್ಮು ಸೇರಿ ಇತರೆ ಕೋವಿಡ್ ಲಕ್ಷಣಗಳಿದ್ದಲ್ಲಿ ಅಂಥ ಮಕ್ಕಳಿಗೆ ರಜೆ ಕೊಟ್ಟು ಮನೆಗೆ ಕಳುಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸಂಬಂಧಿತ ಪರಿಸ್ಥಿತಿ ಅವಲೋಕಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು. ಸಮಗ್ರ ಸಮಾಲೋಚನೆಯ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಮುಖ್ಯಮಂತ್ರಿಗಳ ಪ್ರಮುಖ ಸೂಚನೆಗಳು:

  • ಸದ್ಯಕ್ಕೆ ಆತಂಕದ ಅಗತ್ಯವಿಲ್ಲ, ಆದರೆ ಯಾವುದೇ ತುರ್ತು ಪರಿಸ್ಥಿತಿಗೆ ಸರ್ವ ಸನ್ನದ್ಧತೆ ಇರಬೇಕು. ವೆಂಟಿಲೇಟರ್, ಆಕ್ಸಿಜನ್, ಔಷಧಿಗಳು ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಈಗಲೇ ಸಿದ್ಧಪಡಿಸಬೇಕು.
  • ವಯಸ್ಸಾದವರು, ಗರ್ಭಿಣಿಯರು, ಹೃದಯ ಹಾಗೂ ಉಸಿರಾಟ ಸಮಸ್ಯೆ ಇರುವವರು ಮುನ್ನೆಚ್ಚರಿಕೆಗಾಗಿ ಮಾಸ್ಕ್ ಧರಿಸಬೇಕು. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೌಶಲ್ಯಪೂರ್ಣ ಜಾಗೃತಿ ಕಾರ್ಯಕ್ರಮ ನಡೆಸಬೇಕು.
  • ಪ್ರತಿ ವಾರ ಅಥವಾ ಮೂರು ದಿನಗಳಿಗೊಮ್ಮೆ ಪರಿಸ್ಥಿತಿಯ ಅವಲೋಕನೆ ನಡೆಸಬೇಕು. ಎಲ್ಲ ಜಿಲ್ಲೆಗಳಲ್ಲಿಯೂ ನಿಯಮಿತವಾಗಿ ಮಾಹಿತಿ ಸಂಗ್ರಹಿಸಿ ನಿರ್ವಹಣೆ ಮಾಡಬೇಕು.
  • ಬಾಣಂತಿ ಮಹಿಳೆಯರನ್ನು ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ವರ್ಗಾಯಿಸದೆ, ಎಲ್ಲಾ ಆಸ್ಪತ್ರೆಗಳಲ್ಲಿಯೇ ಅಗತ್ಯ ಸೌಲಭ್ಯ ಒದಗಿಸಬೇಕು.
  • ಜ್ವರ, ಶೀತ, ಕೆಮ್ಮು ಇರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಶಾಲಾ ಸಂಸ್ಥೆಗಳು ಈ ಬಗ್ಗೆ ನಿಗಾ ವಹಿಸಿ, ಅಲರ್ಜಿ ಲಕ್ಷಣಗಳು ಇರುವ ಮಕ್ಕಳನ್ನು ಮನೆಗೆ ಹಿಂತಿರುಗಿಸಬೇಕು (ರಜೆ ಕೊಟ್ಟು ಮನೆಗೆ ಕಳುಹಿಸಬೇಕು).
  • ಸಾರ್ವಜನಿಕರಿಗೆ ತೊಂದರೆಯಾಗದಂತೆ, ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಮೂಲಭೂತ ಸೌಕರ್ಯಗಳ ಸಿದ್ಧತೆ ಇರಬೇಕು.
  • ಆರೋಗ್ಯ ಇಲಾಖೆ ಸಿಬ್ಬಂದಿ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸಲು ಸಿದ್ಧರಾಗಬೇಕು.

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ:
2025ರ ಮೇ ತಿಂಗಳ ನಾಲ್ಕನೇ ವಾರಕ್ಕೆ ರಾಜ್ಯದಲ್ಲಿ 62 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಗಂಭೀರ ಪ್ರಕರಣ ಮಾತ್ರ ಒಂದು ಇದೆ. ನೆರೆ ರಾಜ್ಯಗಳಾದ ಕೇರಳದಲ್ಲಿ 95, ತಮಿಳುನಾಡಿನಲ್ಲಿ 66, ಮಹಾರಾಷ್ಟ್ರದಲ್ಲಿ 56 ಪ್ರಕರಣಗಳು ದಾಖಲಾಗಿವೆ. SARI (ತೀವ್ರ ಉಸಿರಾಟದ ಸೋಂಕು) ಪ್ರಕರಣಗಳ ತಪಾಸಣೆಯು ಕೂಡ ನಡೆಯುತ್ತಿದೆ.

ಮುಂದಿನ ಮುನ್ನೆಚ್ಚರಿಕೆ ಕ್ರಮಗಳು:

  • ವಿಮಾನ ನಿಲ್ದಾಣಗಳಲ್ಲಿ ತಪಾಸಣಾ ಘಟಕಗಳನ್ನು ಪ್ರಾರಂಭಿಸುವ ಕುರಿತು ಚಿಂತನೆ
  • ಕೊರೋನಾ ಸಹಾಯವಾಣಿ ಆರಂಭಿಸಲು ಸೂಚನೆ
  • ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚನೆ
  • ರೂಪಾಂತರಿ ಕೊರೊನಾ ವೈರಾಣು ತಡೆಗಟ್ಟಲು ವ್ಯಾಕ್ಸಿನ್ ಸಿದ್ಧವಾಗಿಟ್ಟು ಕೊಳ್ಳಲು ಸೂಚನೆ

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಈಗಾಗಲೇ ಪಾಲಿಸುತ್ತಿದ್ದೇವೆ. ರೂಪಾಂತರಿ ಕೊರೊನಾ ವೈರಾಣುವಿಗೆ ಸಂಬಂಧಿಸಿದಂತೆ ರೋಗ ನಿಯಂತ್ರಣ ಮುನ್ನೆಚ್ಚರಿಕೆಯಾಗಿ ವ್ಯಾಕ್ಸಿನ್ ಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ಕಾಲ ಕಾಲಕ್ಕೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. 'ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು. ಎಲ್ಲ ಜಿಲ್ಲೆಗಳ ಆರೋಗ್ಯ ಇಲಾಖೆ ಶಾಖೆಗಳು, ಆಸ್ಪತ್ರೆಗಳು, ಸಿಬ್ಬಂದಿ ಸಜ್ಜಾಗಿರಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮುಂದಾದವರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌