
ಬೆಂಗಳೂರು (ಸೆ.12) ವನ್ಯಜೀವಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಅದರಿಂದ ಮಾನವ-ವನ್ಯಜೀವಿ ಸಂಘರ್ಷದಲ್ಲೂ ಏರಿಕೆಯಾಗುವಂತಾಗಿದೆ. ಅದನ್ನು ತಡೆಯಲು ಅಗತ್ಯವಿರುವ ಕ್ರಮಗೊಳ್ಳಬೇಕು ಹಾಗೂ ಅಧಿಕಾರಿಗಳು ಕಚೇರಿಯಲ್ಲಿ ಕೂರದೆ ಕಾಡಿಗೆ ಭೇಟಿ ನೀಡಿ ವನ್ಯಜೀವಿ, ಅರಣ್ಯ ಸಂರಕ್ಷಣೆಯತ್ತ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಅರಣ್ಯ ಇಲಾಖೆಯಿಂದ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಕೂತು ಕರ್ತವ್ಯ ನಿರ್ವಹಿಸುವ ಬದಲು, ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದರೆ ಕಾಡ್ಗಿಚ್ಚು, ಅರಣ್ಯ ನಾಶ, ವನ್ಯಜೀವಿಗಳ ಬೇಟೆಯಂಥ ದುಷ್ಕೃತ್ಯಕ್ಕೆ ಕಡಿವಾಣ ಹಾಕಬಹುದು. ಅದು ಹಿರಿಯ ಅಧಿಕಾರಿಗಳ ಜವಾಬ್ದಾರಿ. ಅದನ್ನು ಪಾಲಿಸಬೇಕು ಎಂದರು.
ಅರಣ್ಯ ಇಲಾಖೆ ಪ್ರತಿವರ್ಷ ಲಕ್ಷಾಂತರ ಗಿಡ ನೆಟ್ಟು, ಕೋಟ್ಯಂತರ ರು. ವೆಚ್ಚ ಮಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ 11 ಕೋಟಿ ಸಸಿಗಳನ್ನು ವಿತರಿಸಿ, ನೆಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಅವುಗಳಲ್ಲಿ ಎಷ್ಟು ಗಿಡಗಳು ಎಷ್ಟು ಬೆಳೆದಿವೆ, ಎಷ್ಟು ನಾಶವಾಗಿವೆ ಎಂಬುದರ ಲೆಕ್ಕ ಅರಣ್ಯ ಇಲಾಖೆಯಲ್ಲಿಲ್ಲ. ಗಿಡಗಳನ್ನು ನೆಟ್ಟಿರುವುದನ್ನು ನೋಡಿದರೆ, ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಬೇಕಿತ್ತು. ಆದರೆ, ನಿರೀಕ್ಷಿತಮಟ್ಟದಲ್ಲಿ ಹೆಚ್ಚಾಗಿಲ್ಲ ಎಂದರು.
ದುಡ್ಡು ಮರಿಹಾಕಲ್ಲ, ಖರ್ಚು ಮಾಡಿ: ಅಧಿಕಾರಿಗಳಿಗೆ ಸೂಚನೆ
ಅರಣ್ಯಇಲಾಖೆ ಬಡ ಇಲಾಖೆಯಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹಣವಿದೆ. ಅದನ್ನು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿ ಮತ್ತಿತರ ಕೆಲಸಗಳಿಗೆ ಬಳಕೆ ಮಾಡಿ. ದುಡ್ಡು ಇಟ್ಟುಕೊಂಡರೆ ಮರಿ ಹಾಕುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಅದಕ್ಕೆ ಈಶ್ವರ್ ಖಂಡ್ರೆ, ಮಂಡಳಿಯವರು ನಮಗೆ ಕೊಡುವುದಿಲ್ಲ ಎಂದು ತಿಳಿಸಿದರು. ಆಗ ಸಿಎಂ, ಮಂಡಳಿಯವರು ತಿರಸ್ಕರಿಸಿದರೆ ನನ್ನ ಬಳಿ ಅವರನ್ನು ಕರೆದುಕೊಂಡು ಬನ್ನಿ ಎಂದು ಸೂಚಿಸಿದರು.
ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿದೆ. ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಹುಲಿಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಅದಕ್ಕೆ ಪೂರಕವಾಗಿ ಅರಣ್ಯ ಪ್ರದೇಶಗಳನ್ನು ಹೆಚ್ಚಿಸಬೇಕು. ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ನಷ್ಟಕ್ಕೊಳಗಾಗುವವರಿಗೆ ಸರ್ಕಾರ ಪರಿಹಾರ ನೀಡುತ್ತಿದೆ. ಅದು ಮುಖ್ಯವಲ್ಲ. ಮಾನವ-ವನ್ಯಜೀವಿ ಸಂಘರ್ಷ ತಡೆಯಲು, ವನ್ಯಜೀವಿಗಳು ಕಾಡಿನಲ್ಲಿಯೇ ಉಳಿಯುವಂತೆ ಮಾಡಬೇಕು. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಯಲಹಂಕದ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಂಯ್ಯ ಅವರು ಉದ್ಯಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2 ಸಾವಿರ ಎಕರೆ ಅರಣ್ಯ ಭೂಮಿ ಪ್ರದೇಶವನ್ನು ಒತ್ತುವರಿ ತೆರವು ಮಾಡಲಾಗಿದೆ. ಉಳಿದಂತೆ 30-40 ಸಾವಿರ ಎಕರೆ ಭೂಮಿಯನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ