
ಬೆಂಗಳೂರು(ಜು.03): ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯ ಬಗ್ಗೆ ಪರಿಶೀಲನೆ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚಿಸಬೇಕೋ ಅಥವಾ ಪ್ರತ್ಯೇಕ ಸಮಿತಿಯೊಂದನ್ನು ರಚಿಸಬೇಕೋ ಎಂಬುದನ್ನು ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸುತ್ತಾರೆ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿರಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ವರದಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದುಳಿದವರು, ಶೋಷಿತರ ಪರವಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರಿಗೆ ಬದ್ಧತೆ ಇದೆ. ಜಾತಿ ಗಣತಿ ವರದಿ ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಬೇಕೋ ಅಥವಾ ಪ್ರತ್ಯೇಕ ಸಮಿತಿಯೊಂದನ್ನು ರಚಿಸಬೇಕೋ ಎಂಬುದನ್ನು ಸಿದ್ದರಾಮಯ್ಯ ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಜಾತಿ ಗಣತಿ ವರದಿ ಶೀಘ್ರ ಸಂಪುಟಕ್ಕೆ: ಸಿಎಂ ಸಿದ್ದರಾಮಯ್ಯ
‘ಜಾತಿ ಗಣತಿ ವರದಿಯ ಬಗ್ಗೆ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚರ್ಚೆಯಾಗಲಿದೆ. ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ನಡೆಯಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರದಿ ಸ್ವೀಕರಿಸಲಾಗಿದೆ ಎಂಬ ಆರೋಪ ಸರಿಯಲ್ಲ. ಯಾವುದೇ ಸಮಾಜ ಅಥವಾ ಯಾವುದೇ ವ್ಯಕ್ತಿಯ ಮನಸ್ಸಿಗೂ ನೋವಾಗದಂತೆ ವರದಿ ಜಾರಿಗೊಳಿಸಲಾಗುವುದು ಎಂದು ಈಗಾಗಲೇ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದೇ ಹುದ್ದೆ ಇರಬೇಕು ಎಂಬ ಚರ್ಚೆಯ ಅಗತ್ಯ ಈಗ ಇಲ್ಲ. ಕೆಪಿಸಿಸಿ ಅಧ್ಯಕ್ಷನಾಗುವಷ್ಟು ದೊಡ್ಡ ಮಟ್ಟಕ್ಕೆ ನಾನು ಬೆಳೆದಿಲ್ಲ. ಉಪ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ‘ಮುಖ್ಯಮಂತ್ರಿ ಬದಲಾವಣೆ’ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಅವರು ಹಿರಿಯ ನಾಯಕರು. ಅವರನ್ನೇ ಈ ಬಗ್ಗೆ ಕೇಳಿ ಎಂದು ಸಮಜಾಯಿಷಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ