ಮನೆಗಳ ಜಪ್ತಿಗೆ ಕೋರ್ಟ್‌ ಅನುಮತಿ ಪಡೆದಿದ್ದೀರಾ?: ಮೈಕ್ರೋಫೈನಾನ್ಸ್‌ ಸಿಬ್ಬಂದಿಗೆ ಸಿದ್ದರಾಮಯ್ಯ ಕ್ಲಾಸ್‌

Published : Jan 26, 2025, 07:15 AM IST
ಮನೆಗಳ ಜಪ್ತಿಗೆ ಕೋರ್ಟ್‌ ಅನುಮತಿ ಪಡೆದಿದ್ದೀರಾ?: ಮೈಕ್ರೋಫೈನಾನ್ಸ್‌ ಸಿಬ್ಬಂದಿಗೆ ಸಿದ್ದರಾಮಯ್ಯ ಕ್ಲಾಸ್‌

ಸಾರಾಂಶ

ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ಆರ್‌ಬಿಐ ನಿಯಮ ಮೀರಿ ಸಾಲ ಕೊಡುತ್ತಿದ್ದೀರಿ. ಸಾಲ ಕೊಡುವ ಮೊದಲು ಆಧಾರ್ ಕೆವೈಸಿ ಯಾಕೆ ಮಾಡಿಸುತ್ತಿಲ್ಲ? ಮರುಪಾವತಿಯ ಸಾಮರ್ಥ್ಯ ಗಮನಿಸದೆ ಒಬ್ಬನೇ ವ್ಯಕ್ತಿಗೆ ಪದೇ ಪದೇ ಸಾಲ ನೀಡುತ್ತಿರುವುದು ಯಾಕೆ ಎಂದು ಮೈಕ್ರೋ ಫೈನಾನ್ಸ್‌ ಕಂಪನಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.   

ಬೆಂಗಳೂರು (ಜ.26): ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ಆರ್‌ಬಿಐ ನಿಯಮ ಮೀರಿ ಸಾಲ ಕೊಡುತ್ತಿದ್ದೀರಿ. ಸಾಲ ಕೊಡುವ ಮೊದಲು ಆಧಾರ್ ಕೆವೈಸಿ ಯಾಕೆ ಮಾಡಿಸುತ್ತಿಲ್ಲ? ಮರುಪಾವತಿಯ ಸಾಮರ್ಥ್ಯ ಗಮನಿಸದೆ ಒಬ್ಬನೇ ವ್ಯಕ್ತಿಗೆ ಪದೇ ಪದೇ ಸಾಲ ನೀಡುತ್ತಿರುವುದು ಯಾಕೆ ಎಂದು ಮೈಕ್ರೋ ಫೈನಾನ್ಸ್‌ ಕಂಪನಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತಿದ್ದೀರಿ. ಸಾಲ ವಸೂಲಿಗೆ ನಿಮ್ಮ ಸಿಬ್ಬಂದಿ ನಿಯಮಬಾಹಿರವಾಗಿ ಸಾಲಗಾರರನ್ನು ಶೋಷಣೆ ಮಾಡುತ್ತಿದ್ದಾರೆ. ಅಂತಹ ಸಿಬ್ಬಂದಿ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಸಂಘದ ಪದಾಧಿಕಾರಿಗಳು, ಆರ್‌ಬಿಐ ವಲಯ ಅಧಿಕಾರಿಗಳು, ನಬಾರ್ಡ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಿಯಮ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲ ಕೊಡುತ್ತಿದ್ದೀರಿ. ಸಾಲ ತೀರಿಸಲು ಸಾಧ್ಯವಾಗದಿದ್ದಾಗ ನಿಯಮ ಬಾಹಿರ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸಾಲಗಾರರ ವಿರುದ್ಧ ಬೇಕಾಬಿಟ್ಟಿ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಸಾಲಗಾರರ ಮನೆ ಜಪ್ತಿ ಮಾಡುವ ಮೊದಲು ನೀವು ನ್ಯಾಯಾಲಯದಿಂದ ಅನುಮತಿ ಪಡೆದಿದ್ದೀರಾ? ಕಾನೂನು ಕೈಗೆತ್ತಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಅನುಮತಿ ಕೊಟ್ಟವರು ಯಾರು?. 

ಸಾಲ ವಸೂಲಿ ಹಾವಳಿ ತಡೆಗೆ ಬಲಿಷ್ಠ ಕಾನೂನಿಗೆ ಸಿಎಂ ಚಿಂತನೆ: ಸಚಿವ ಎಂ.ಬಿ.ಪಾಟೀಲ್‌

ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತಿದ್ದೀರಾ ಎಂದು ನೋಂದಣಿ ಆಗಿ ಪರವಾನಗಿ ಪಡೆದಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರಿಗೆ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ರಿಸರ್ವ್ ಬ್ಯಾಂಕಿನ ಷರತ್ತು ಮತ್ತು ನಿಬಂಧನೆಗಳನ್ನು ಸಾಲಗಾರರಿಗೆ ಅವರ ಆಡು ಭಾಷೆಯಲ್ಲಿ ಅರ್ಥ ಮಾಡಿಸಿದ್ದೀರಾ? ಮಹಿಳೆಯರ, ವೃದ್ಧರ ಮೇಲೆ ದಬ್ಬಾಳಿಕೆ ನಡೆಸಿರುವ ಪತ್ರಿಕಾ ವರದಿಗಳೂ ನಿತ್ಯ ಬರುತ್ತಿವೆ. ನಾನು ಇದನ್ನೆಲ್ಲಾ ಸಹಿಸುವುದಿಲ್ಲ. ಜನರ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಆರ್‌ಬಿಐ ಅಧಿಕಾರಿಗಳಿಗೂ ತರಾಟೆ: ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಿದ ಮೈಕ್ರೋ ಫೈನಾನ್ಸ್ ಕಂಪನಿಗಳ ಪರವಾನಗಿ ರದ್ದುಗೊಳಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಆರ್​​ಬಿಐ ಅಧಿಕಾರಿಗಳಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಒಬ್ಬರೇ ಸಾಲಗಾರರು ಬೇರೆ ಬೇರೆ ಗುರುತಿನ ಚೀಟಿ (ಐಡಿ ಕಾರ್ಡ್) ಕೊಟ್ಟು ಸಾಲ ಪಡೆದಿರುವುದು ನಿಮ್ಮ ದಾಖಲೆಗಳಲ್ಲಿದೆ. ಆದರೆ ಸಾಲಗಾರರು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಲು ಯಾವ ಪದ್ಧತಿ ಪಾಲಿಸುತ್ತಿದ್ದೀರಿ ಎಂದು ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸಿದ್ದರಾಮಯ್ಯ ಕೇಳಿದರು.

ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಅನ್ನೋ ನಂಬಿಕೆ ಇತ್ತು: ಸಚಿವ ದಿನೇಶ್ ಗುಂಡೂರಾವ್

ಈ ವೇಳೆ ಆರ್​ಬಿಐ ಅಧಿಕಾರಿಗಳು ನಮ್ಮ ಪರವಾನಗಿ ಪಡೆದಿರುವ ಕಂಪನಿಗಳು ನಿಯಮಬಾಹಿರ ವಸೂಲಿಗೆ ಇಳಿದಿಲ್ಲ. ಆ ರೀತಿ ಮಾಡುತ್ತಿರುವುದು ಪರವಾನಗಿ ಇಲ್ಲದ ಕಂಪನಿಗಳು ಎಂದು ಮೈಕ್ರೋ ಫೈನಾನ್ಸ್​ನವರು ಸಮಜಾಯಿಶಿ ನೀಡಲು ಯತ್ನಿಸಿದರು. ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರಾದ ಕೃಷ್ಣ ಬೈರೇಗೌಡ, ಎಚ್.ಕೆ.ಪಾಟೀಲ್ ಅವರು ತಕರಾರು ವ್ಯಕ್ತಪಡಿಸಿ, ಪರವಾನಗಿ ಇದ್ದವರೇ ಈ ರೀತಿ ಮಾಡುತ್ತಿದ್ದಾರೆ ಎನ್ನುವ ವರದಿ ನಮ್ಮ ಗ್ರೌಂಡ್ ರಿಪೋರ್ಟ್​​ನಲ್ಲಿ ಬಂದಿದೆ. ಆದ್ದರಿಂದ ಬಡ ಜನರ ಹಿತಕಾಯಲು ನಿಯಮ ಉಲ್ಲಂಘಿಸುವ ಕಂಪನಿ ಎಂಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?