
ಹಾವೇರಿ (ಮೇ.4): ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಶೇಷ ಹೆಲಿಕಾಪ್ಟರ್ ಮೂಲಕ ಹಾನಗಲ್ ತಾಲೂಕಿನ ಅಕ್ಕಿ ಆಲೂರಿಗೆ ಆಗಮಿಸಿದರು. ಅವರ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಶಿವಾನಂದ ಪಾಟೀಲ್, ಸತೀಶ್ ಜಾರಕಿಹೊಳಿ, ಶಾಸಕರಾದ ಶ್ರೀನಿವಾಸ್ ಮಾನೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ಅಕ್ಕಿ ಆಲೂರು ಗ್ರಾಮದ ಎ.ಪಿ.ಎಂ ಸಿ ಮಾರುಕಟ್ಟೆ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು,₹650 ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ. 10 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಆವರಣದ ಎದುರಿನ ಕೃಷಿಭೂಮಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ತೆರಿಗೆ ಸಂಗ್ರಹ ₹1ನೂ ಕಮ್ಮಿ ಆಗಬಾರದು, ತಪ್ಪಿಸಿಕೊಳ್ಳುವವರನ್ನ ಪತ್ತೆ ಹಚ್ಚಿ ವಸೂಲಿ ಮಾಡಿ: ಸಿಎಂ
ಎಲ್ಲೆಡೆ ಫ್ಲೆಕ್ಸ್, ಬಂಟಿಂಗ್ಸ್:
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರ ಆಗಮನದ ಹಿನ್ನೆಲೆಯಲ್ಲಿ ಹಾನಗಲ್ಲ ಮತ್ತು ಅಕ್ಕಿಆಲೂರಿನಾದ್ಯಂತ ಪ್ರಮುಖ ರಸ್ತೆ, ವೃತ್ತ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಸಲಾಗಿದೆ. ಅಲ್ಲಲ್ಲಿ ಆಳೆತ್ತರದ ಕಟೌಟ್ ಹಾಕಲಾಗಿದೆ. ಎಲ್ಲೆಡೆ ಸಡಗರ, ಸಂಭ್ರಮ ಮನೆ ಮಾಡಿದೆ.
ಸಮಾಜಘಾತುಕ ಶಕ್ತಿಗಳನ್ನ ಮಟ್ಟಹಾಕುತ್ತೇವೆ:
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಫಾಸಿಲ್ ಎಂಬಾತನಿಂದ ಆದಿಲ್‌ಗೆ ಸುಪಾರಿ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಈ ಘಟನೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಅವರೊಂದಿಗೆ ಚರ್ಚಿಸಿ ತಕ್ಕ ಕ್ರಮ ಕೈಗೊಳ್ಳುತ್ತೇವೆ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಮತ್ತು ಪತ್ತೆಹಚ್ಚಲು ವಿಶೇಷ ವಿಭಾಗವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಇದನ್ನೂ ಓದಿ: ₹150 ಕೋಟಿ ಖರ್ಚು ಮಾಡಿದ ಜಾತಿ ಗಣತಿ ಗತಿ ಏನಾಯ್ತು? ಆರ್ ಅಶೋಕ್ ಪ್ರಶ್ನೆ!
ವಿಜಯನಗರದಲ್ಲಿ ಸರ್ಕಾರದ ಎರಡು ವರ್ಷ ಪೂರೈಸಿದ ಸಂಭ್ರಮ: ಸಿಎಂ ಸಿದ್ದರಾಮಯ್ಯ ಅವರು, ವಿಜಯನಗರದಲ್ಲಿ ನಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ರಾಜ್ಯದ ಜನತೆಗೆ ನಮ್ಮ ಸಾಧನೆಗಳನ್ನು ತಿಳಿಸುತ್ತೇವೆ ಎಂದರು. ಇನ್ನು ಜಾತಿಗಣತಿ ವಿಚಾರ ಸಂಬಂಧ ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ ಅವರು, ಜಾತಿಗಣತಿ ಕುರಿತು ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಕಾಂಗ್ರೆಸ್‌ನವರು ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈಗ ಅವರೇ ಜಾತಿಗಣತಿಯನ್ನು ಸ್ವಾಗತಿಸುತ್ತಿದ್ದಾರೆ. ತೀರ್ಥ ಎಲ್ಲಿಂದ ಬರಬೇಕೋ ಅಲ್ಲಿಂದ ಬಂದರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ವ್ಯಂಗ್ಯವಾಡಿದರು.
ದೇವೇಗೌಡರಿಗೆ ಟಾಂಗ್: ಪಾಕಿಸ್ತಾನ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ ಅನುಸರಿಸುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿಎಂ, ದೇವೇಗೌಡರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಏನು ಮಾತನಾಡುತ್ತಿದ್ದರು? ಈಗ ಏನು ಮಾತನಾಡುತ್ತಿದ್ದಾರೆ? ಇದು ದೇವೇಗೌಡರ ಇಬ್ಬಗೆ ನೀತಿಯಲ್ಲವೇ? ಎಂದು ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ