ಅಂದುಕೊಂಡ ಕಾರ್ಯ ಯಶಸ್ಸು, ತಾಯಿ ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ

By Gowthami K  |  First Published Aug 29, 2023, 10:52 AM IST

ಗ್ಯಾರಂಟಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ತಾಯಿ ಚಾಮುಂಡೇಶ್ವರಿಗೆ ಮೇ 9 ರಂದು ಗ್ಯಾರಂಟಿ ಕಾರ್ಡ್‌ ಜೊತೆ   ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಹರಕೆ ಕಟ್ಟಿಕೊಂಡಿದ್ದರು. ಈ ಹರಕೆಯನ್ನು ಇಂದು ತೀರಿಸಿದ್ದಾರೆ.


ಮೈಸೂರು (ಆ.29): ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಹಿನ್ನೆಲೆ ಕಾರ್ಯಕ್ರಮದ ಯಶಸ್ವಿಗಾಗಿ ನಾಡದೇವತೆ ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ  ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ. ತಾಯಿ ಚಾಮುಂಡೇಶ್ವರಿಗೆ ರೇಷ್ಮೆ ಸೀರೆ, ಹಸಿರು ಮತ್ತು ಕೆಂಪು ಸೀರೆ, ಬಳೆ , ಕನಕಾಂಬರ ಮಲ್ಲಿಗೆ ಗುಲಾಬಿ ಹೂವಿನ ಹಾರ, ಬಾಳೆಹಣ್ಣು ದಾಳಿಂಬೆ ಸೇರಿ ಫಲ ಸಮರ್ಪಣೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ತಾಯಿ ಚಾಮುಂಡೇಶ್ವರಿಗೆ ಮೇ 9 ರಂದು ಗ್ಯಾರಂಟಿ ಕಾರ್ಡ್‌ ಜೊತೆ   ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಹರಕೆ ಕಟ್ಟಿಕೊಂಡಿದ್ದರು. ಯೋಜನೆ ಯಶಸ್ವಿಯಾದ ಹಿನ್ನೆಲೆ ಇಂದು ಬಂದು ಹರಕೆ ತೀರಿಸಿದ್ದಾರೆ. ಕೆಪಿಸಿಸಿ  ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಈ ವೇಳೆ ಭಾಗಿಯಾಗಿದ್ದರು.

ಗೃಹಲಕ್ಷ್ಮಿ ಯೋಜನೆಗೆ ನಾಳೆ ರಾಹುಲ್‌ ಚಾಲನೆ: ಮಹಿಳೆಯರಿಗೆ 2000 ರೂ. ವರ್ಗ..!

Latest Videos

undefined

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಸಿಎಂ, ಡಿಸಿಎಂಗೆ ಸಾಥ್ ನೀಡಿದರು. ಒಂದೇ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ  ಮುಖ್ಯಮಂತ್ರಿ, ಡಿಸಿಎಂ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಆಗಮಿಸಿದರು. ಇನ್ನು ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆ ಕೂಡ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಸಿಎಂ ಹಾಗೂ ಡಿಸಿಎಂ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಾಗಿದ್ದು, ನಾಳೆ‌ ಗೃಹ ಲಕ್ಷ್ಮೀ ಯೋಜನೆ ಚಾಲನೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಯೋಜನೆ ಚಾಲನೆ ಮುನ್ನ ಚಾಮುಂಡಿ ತಾಯಿಗೆ ವಿಶೇಷ ಪೂಜೆ‌ ಸಲ್ಲಿಸಲಾಗಿದೆ.

ಇದಕ್ಕೂ ಮುನ್ನ ಮೈಸೂರಿನ ಟಿಕೆ.ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಡಿಸಿಎಂ ಡಿಕೆ.ಶಿವಕುಮಾರ್. ರೇಷ್ಮೇ ಬಟ್ಟೆ ಧರಿಸಿ ಮಿಂಚುತ್ತಿದ್ದರು. ಡಿಕೆಶಿ ಬೆನ್ನಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಹೋದರ ಕೂಡ ಆಗಮಿಸಿದರು. ಬಳಿಕ ಸಿಎಂ ಮನೆಯಿಂದ ಎಲ್ಲರೂ ಜೊತೆಗೆ ದೇವಾಲಯಕ್ಕೆ ಬಂದರು.

ಪೂಜೆ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಸುತ್ತೂರು ಶಾಖಾ ಮಠದಲ್ಲಿ ನಡೆಯಲಿರುವ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಕಡಕೋಳ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಮದ್ಯಾಹ್ನ 1.45ಕ್ಕೆ ಕೆ ಆರ್ ಆಸ್ಪತ್ರೆಯ ಸುಟ್ಟ ಗಾಯಗಳ ನವೀಕರಣ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಸಂಜೆ 6ಕ್ಕೆ ವಕೀಲರ ಸಂಘದ ಕಚೇರಿಗೆ ಭೇಟಿ ನೀಡಲಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಗೃಹಲಕ್ಷ್ಮಿ ಜಾರಿಗೆ ಬಿಜೆಪಿ ನಾಯಕನ ಸಿದ್ಧತೆ..?

ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ನಾಳೆ ಚಾಲನೆ ದೊರಕಲಿದ್ದು ಈ ಹಿನ್ನೆಲೆ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ಮುಂಭಾಗ ಮೈಸೂರು ಅರಮನೆ ಮಾದರಿಯಲ್ಲೆ ವೇದಿಕೆ ನಿರ್ಮಾಣ ಮಾಡಲಾಗಿದ್ದು,  ವೇದಿಕೆ ಮುಂಭಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ,ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಹದೇವಪ್ಪ ಭಾವಚಿತ್ರ ಅಳವಡಿಕೆ ಮಾಡಲಾಗಿದೆ ಜೊತೆಗೆ ಅರಮನೆ ಮಾದರಿಯ ವೇದಿಕೆಗೆ ಲೈಟಿಂಗ್ಸ್ ಕೂಡ ಅಳವಡಿಕೆ ಮಾಡಲಾಗಿದೆ.

click me!