
ಮೈಸೂರು(ಆ.29): ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ನಾಲ್ಕನೇ ಗ್ಯಾರಂಟಿಯಾದ ಕುಟುಂಬದ ಒಡತಿಗೆ ಪ್ರತಿ ತಿಂಗಳು 2 ಸಾವಿರ ರುಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಮೈಸೂರಿನಲ್ಲಿ ಚಾಲನೆ ಸಿಗಲಿದೆ. ಈ ಸಂಬಂಧ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿದ್ದು, ಅಂತಿಮ ಹಂತ ತಲುಪಿವೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಾಲ್ಗೊಳ್ಳಲಿದ್ದಾರೆ. ಸಾಂಕೇತಿಕವಾಗಿ ಐದು ಜಿಲ್ಲೆಯ ಫಲಾನುಭವಿಗಳಿಗೆ 2 ಸಾವಿರ ರು. ನೀಡಲಿದ್ದಾರೆ. ರಾಹುಲ್ ಗಾಂಧಿ ಅವರು ದೆಹಲಿಯಿಂದ ಬುಧವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ಅಲ್ಲಿಂದ ಮೈಸೂರಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮನೆ ಮುಂದೆ 'ನಾ ಯಜಮಾನಿ' ರಂಗೋಲಿ ಬಿಡಿಸಿ, ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಿರಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಈ ಹಿಂದೆ ಬೆಳಗಾವಿಯಲ್ಲಿ ಈ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿತ್ತಾದರೂ ನಂತರ ಮೈಸೂರಿಗೆ ಸ್ಥಳಾಂತರಿಸಲಾಯಿತು. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಂತೆ ಈಗ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನಾಲ್ಕು ಜಿಲ್ಲೆಗಳಿಂದ ಸುಮಾರು 1.30 ಲಕ್ಷಕ್ಕೂ ಹೆಚ್ಚು ಮಂದಿ ಫಲಾನುಭವಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಸೋಮವಾರ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಕಾರ್ಯಕ್ರಮವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರ ಮಾಡಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಯೋಜನೆಯಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಹಿಳೆಯರು ಈ ಹಣವನ್ನು ವಿವಿಧ ಉದ್ದೇಶಗಳಿಗೆ ಬಳಕೆ ಮಾಡುವುದರಿಂದ ಸರ್ಕಾರಕ್ಕೂ ಆದಾಯ ಬರಲಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಬೀಡುಬಿಟ್ಟಿದ್ದು, ಎಲ್ಲಾ ಸಿದ್ಧತೆಗಳನ್ನು ಅವಲೋಕಿಸುತ್ತಿದ್ದಾರೆ. ಜತೆಗೆ ಅಂತಿಮ ಹಂತದ ಕಾರ್ಯಗಳನ್ನೂ ಶೀಘ್ರ ಮುಗಿಸುವಂತೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
1.08 ಕೋಟಿ ನೋಂದಣಿ:
ಕುಟುಂಬ ನಿರ್ವಹಣೆಯ ಹೊಣೆ ಹೊತ್ತ ಮಹಿಳೆಯರಿಗೆ ನಿತ್ಯ ಎದುರಾಗುವ ಬೆಲೆಯೇರಿಕೆಯ ಸಂಕಷ್ಟಗಳನ್ನು ತಗ್ಗಿಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದೊಂದಿಗೆ ಜಾರಿಗೊಂಡಿರುವ ಈ ಯೋಜನೆಯಡಿ ಈಗಾಗಲೇ ರಾಜ್ಯದಿಂದ 1.08 ಕೋಟಿ ಮಹಿಳೆಯರು ನೋಂದಣಿ ಮಾಡಿದ್ದಾರೆ. ಈ ಯೋಜನೆಗಾಗಿ ಸರ್ಕಾರ ಈ ವರ್ಷ 17500 ಕೋಟಿ ರು.ಗಳನ್ನು ಮೀಸಲಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ