
ಬೆಂಗಳೂರು (ನ.20): ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಬದಲಾವಣೆ ವಿಚಾರಗಳ ಚರ್ಚೆಗಳು ಮುಂದುವರೆದಿರುವ ನಡುವೆಯೇ ಮುಂದಿನ ವರ್ಷ 17ನೇ ಬಜೆಟ್ ಅನ್ನೂ ನಾನೇ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮಂಗಳವಾರ ಆಯೋಜಿಸಿದ್ದ ‘ಎಲ್.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ’ ಉದ್ಘಾಟಿಸಿ ಮಾತನಾಡಿದ ಅವರು, ಹಾವನೂರು ಅವರು ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿ ಹಂತ ಹಂತ ವಾಗಿ ಮೇಲೆ ಬಂದವರು. ಪರಿಶಿಷ್ಟ ಜಾತಿಯಲ್ಲಿ ಹುಟ್ಟಿದಾಗ ಅನಿವಾರ್ಯವಾಗಿ ಅನೇಕ ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ನನಗೂ ಈ ಅನುಭವ ಆಗಿದೆ. ನಾನು ಮೊದಲ ಬಾರಿಗೆ ಹಣಕಾಸು ಸಚಿವ ಆದಾಗ ಈ ಸಿದ್ದರಾಮಯ್ಯಗೆ ನೂರು ಕುರಿ ಲೆಕ್ಕ ಹಾಕೋಕೆ ಬರಲ್ಲ. ಹಣಕಾಸು ಮಂತ್ರಿಯಾಗಿ ಬಜೆಟ್ ಮಾಡಿಸುತ್ತಾರಾ? ಏನು ಕೆಲಸ ಮಾಡುತ್ತಾರೆ ಎಂದು ಪತ್ರಿಕೆಯೊಂದರಲ್ಲಿ ಟೀಕೆ ಮಾಡಿದ್ದರು. ನಾನು ಅದನ್ನು ಸವಾಲಾಗಿ ಸ್ವೀಕರಿಸಿದ್ದೆ. ಅಂದಿನಿಂದ ಇಂದಿನವರೆಗೆ ಯಶಸ್ವಿಯಾಗಿ 16 ಬಜೆಟ್ ಮಂಡಿಸಿದ್ದೇನೆ ಎಂದರು.
ಆಗ ಸಭಿಕರೊಬ್ಬರು 17ನೇ ಬಜೆಟ್ ಸರ್... ಎಂದರು. ಅದಕ್ಕೆ ಮುಖ್ಯಮಂತ್ರಿ ಅವರು ಏ ಇಲ್ಲಯ್ಯ ಈ ವರ್ಷ 16ನೇ ಬಜೆಟ್ ಮಂಡಿಸಿದ್ದೇನೆ. ಮುಂದಿನ ವರ್ಷ 17ನೇ ಬಜೆಟನ್ನೂ ನಾನೇ ಮಂಡಿಸುತ್ತೇನೆ ಎಂದು ಹೇಳಿದರು.
ಕರ್ನಾಟಕ ಹಿಂದುಳಿದಿದ ವರ್ಗಗಳ ಪ್ರಥಮ ಆಯೋಗದ ಅಧ್ಯಕ್ಷರಾಗಿ ಹಾವನೂರು ಅವರು ನೀಡಿದ ವರದಿಯನ್ನು ದೇವರಾಜ ಅರಸರು ಹಿಂದುಳಿದವರ ಬೈಬಲ್ ಎಂದು ಕರೆದಿದ್ದಾರೆ. ಸುಪ್ರೀಂಕೋರ್ಟ್ ಕೂಡ ಹಾವನೂರು ವರದಿಯನ್ನು ಅಪಾರವಾಗಿ ಮೆಚ್ಚಿಕೊಂಡಿದೆ. ಬೇಡರ ಜಾತಿಯಲ್ಲಿ ಜನಿಸಿದ ಹಾವನೂರು ಅವರು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ನನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಹಿಂದೆ ಹಣಕಾಸು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ, ಈಗ ಮುಖ್ಯಮಂತ್ರಿಯಾಗಿ ಒಟ್ಟು 16 ಬಜೆಟ್‌ಗಳನ್ನು ಮಂಡಿಸಿದ್ದೇನೆ. ಧಮನಿತರಿಗೆ ಅವಕಾಶಗಳನ್ನು ಮಾಡಿಕೊಡುವುದು ಮುಖ್ಯ. ಇದಕ್ಕೆ ನಮ್ಮ ಸರ್ಕಾರ ಬದ್ಧ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ