‘ತಮ್ಮ ವಿರೋಧಿಗಳು ಅಂತ ಗೊತ್ತಿದ್ರೂ ದಲಿತರು ಬಿಜೆಪಿ-ಆರೆಸ್ಸೆಸ್‌ಗೆ ಹೋಗ್ತಾರೆ’: ಸಿಎಂ

Kannadaprabha News, Ravi Janekal |   | Kannada Prabha
Published : Nov 20, 2025, 05:40 AM IST
CM Siddaramaiah on Dalits join BJP RSS

ಸಾರಾಂಶ

ಬಿಜೆಪಿ-ಆರೆಸ್ಸೆಸ್‌ ತಮ್ಮ ಸೈದ್ಧಾಂತಿಕ ಶತ್ರುಗಳಾಗಿದ್ದರೂ ಹಿಂದುಳಿದವರು ಮತ್ತು ದಲಿತರು ಆ ಪಕ್ಷಗಳನ್ನು ಸೇರುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದರು ಸ್ವಾರ್ಥಕ್ಕಾಗಿ ಬಿಜೆಪಿ ಸೇರುವ ಇವರು ಮೂಲ ಆರೆಸ್ಸೆಸ್ಸಿಗರಿಗಿಂತ ಹೆಚ್ಚಾಗಿ ವರ್ತಿಸುತ್ತಾರೆ ಎಂದರು.

ಬೆಂಗಳೂರು (ನ.20): ಬಿಜೆಪಿ, ಆರೆಸ್ಸೆಸ್‌ ತಮ್ಮ ವಿರೋಧಿಗಳು, ಅವರ ತತ್ವ-ಸಿದ್ಧಾಂತ ತಮ್ಮ ಪಾಲಿಗೆ ಶತ್ರುಸಮಾನ ಎಂದು ಗೊತ್ತಿದ್ದೂ ಹಿಂದುಳಿದವರು-ದಲಿತರು ಹೋಗಿ ಅಲ್ಲಿಗೇ ಸೇರುತ್ತಿದ್ದಾರೆ. ಏನು ಮಾಡೋದು... ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದರು.

ದೇವರು, ಧರ್ಮದ ಹೆಸರಲ್ಲಿ ಸಾಯುತ್ತಿರುವವರೆಲ್ಲ ನಮ್ಮ ಹಿಂದುಳಿದವರೇ. ಸ್ವಾರ್ಥಕ್ಕಾಗಿ ಆರೆಸ್ಸೆಸ್‌, ಬಿಜೆಪಿ ಸೇರುವುದೂ ಅಲ್ಲದೆ, ಇವರೇ ಮೂಲ ಆರೆಸ್ಸೆಸ್‌ನವರಿಗಿಂತ ಹೆಚ್ಚಾಗಿ ವರ್ತಿಸುತ್ತಾರೆ. ಹೆಡ್ಗೇವಾರ್ ರೀತಿ ಮಾತನಾಡುತ್ತಾರೆ. ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ದಲಿತ ಸಮುದಾಯದವರು. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಅವರು ಈಗ ಬಿಜೆಪಿ ಸೇರಿದ್ದಾರೆ. ಅವರನ್ನು ಮಾತನಾಡಿಸಿ ನೋಡಿ ಮೂಲ ಆರೆಸ್ಸೆಸ್ಸಿಗನಂತೆ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಂಗಡಗಿನೂ ಬಿಜೆಪಿಗೆ ಹೋಗಿ ಬಂದವನೇ:

ಇದೇ ವೇಳೆ ಸಚಿವ ಶಿವರಾಜ ತಂಗಡಗಿ ಅವರನ್ನೂ ನೀನೂ ಬಿಜೆಪಿಗೆ ಹೋಗಿ ಬಂದವನೇ ಅಲ್ವಾ? ಎಂದು ಛೇಡಿಸಿದರು. ಆಗ ತಂಗಡಿ, ನಾನು ವಾಪಸ್‌ ಬಂದಿದ್ದೀನಿ ಸರ್‌... ಎಂದರು. ವಾಪಸ್‌ ಬಂದಿರೋದು ಬೇರೆ ಪ್ರಶ್ನೆ, ನೀನು ಅಲ್ಲಿ ಕೂಡ ಇದ್ದೆ ಅಲ್ವಾ... ಬಹಳಷ್ಟು ಜನ ಶೂದ್ರರು ಆರ್‌ಎಸ್‌ಎಸ್ಸಿಗರು, ಆರೆಸ್ಸೆಸ್‌ ಸಿದ್ಧಾಂತಗಳನ್ನು ಹೊಗಳುತ್ತಾರೆ. ಅವರನ್ನು ಏನು ಮಾಡೋಣ? ಎಂದರು.

ಸಿದ್ದು ಜೊತೆ ಇರ್ತೀವಿ: ತಂಗಡಗಿ

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಹಾವನೂರು ವರದಿ ಕೊಟ್ಟ ಬಳಿಕ ಹಿಂದುಳಿದ ವರ್ಗಗಳಿಗೆ ಒಂದು ಶಕ್ತಿ ಕೊಟ್ಟಂತಾಯ್ತು. ಹಿಂದೆ ಹಾವನೂರು ವರದಿಗೆ ವಿರೋಧ ವ್ಯಕ್ತಪಡಿಸಿದಂತೆ ಕಾಂತರಾಜು ವರದಿಗೂ ವಿರೋಧ ವ್ಯಕ್ತಪಡಿಸಿದರು. ಆದರೆ ಸಿದ್ದರಾಮಯ್ಯ ಅವರು ಅದಕ್ಕೆ ಜಗ್ಗದೆ ಹೊಸದಾಗಿ ಮತ್ತೆ ಸಮೀಕ್ಷೆ ಮಾಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಎಷ್ಟು ತೊಂದರೆ ಕೊಟ್ಟರೂ ನಾವು ಅವರ ಜೊತೆ ಇರುತ್ತೇವೆ. ಏಕೆಂದರೆ ಅವರಿಗೆ ಹಿಂದುಳಿದವರು, ದಲಿತರು, ಬಡವರ ಬಗ್ಗೆ ಹೆಚ್ಚಿನ ಕಾಳಜಿ, ಚಿಂತನೆ ಇದೆ. ಯಾವುದೇ ಜಾತಿಯಲ್ಲಿ ಬಡವರು ಇದ್ದರೂ ಅವರಿಗೆ ಸವಲತ್ತು ಸಿಗಲಿ ಅನ್ನುವುದಷ್ಟೇ ಅವರ ಉದ್ದೇಶದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ.ರೇವಣ್ಣ, ವಿಧಾನ ಪರಿಷತ್‌ ಸದಸ್ಯ ರಮೇಶ್‌ ಬಾಬು, ಹಿರಿಯ ನ್ಯಾಯವಾದಿ ಪ್ರೊ. ರವಿ ವರ್ಮಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಮನುಸ್ಮೃತಿಯ ಅಧ್ಯಾಯ ಓದಿದ ಸಿಎಂ

ತಮ್ಮ ಭಾಷಣದ ನಡುವೆ ಮುಖ್ಯಮಂತ್ರಿ ಅವರು ಮನುಸ್ಮೃತಿಯ ಶೂದ್ರ ವಿರೋಧಿ ಅಧ್ಯಾಯಗಳನ್ನು ಓದಿದರು. ಶೂದ್ರ ಸಮುದಾಯವನ್ನು ನಾಯಿಗೆ ಹೋಲಿಸಿ ತಾರತಮ್ಯ ಆಚರಿಸುವ ಶ್ಲೋಕಗಳನ್ನು ಓದಿ, ನೀವೆಲ್ಲ ಮನುಸ್ಮೃತಿ ಓದಿ ಜಾತಿ ತಾರತಮ್ಯದ ಪ್ರಮಾಣ ಎಷ್ಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!