ಉತ್ತರ ಒಳನಾಡಿನಲ್ಲಿ ಚಳಿಯ ವಾತಾವರಣ ಹೆಚ್ಚಳ| ವಿಜಯಪುರ 11 ಡಿಗ್ರಿ ಸೆಲ್ಸಿಯಸ್, ಧಾರವಾಡ 14, ಹಾವೇರಿ ಹಾಗೂ ರಾಯಚೂರಿನಲ್ಲಿ ತಲಾ 13 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲು| ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿ ನ.14ರವರೆಗೆ ಒಣ ಹವೆ ಮುಂದುವರಿಯಲಿದೆ|
ಬೆಂಗಳೂರು(ನ.11): ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಉತ್ತರ ಒಳನಾಡಿನ ಬೀದರ್‌ನಲ್ಲಿ ಅತೀ ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಾಡಿಕೆ ಪ್ರಕಾರ ನ.10ರಂದು ಬೀದರ್ ಜಿಲ್ಲೆಯಲ್ಲಿ ಗರಿಷ್ಠ 29 ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಬೇಕು. ಆದರೆ ವಾಡಿಕೆಗಿಂತ 11.1ರಷ್ಟು ಅತೀ ಕಡಿಮೆ ಅಂದರೆ ಕನಿಷ್ಠ 7.6 ಡಿ.ಸೆ. ದಾಖಲಾಗಿದೆ. ಇನ್ನು ಗರಿಷ್ಠ ವಾಡಿಕೆಗಿಂತ 1.7ರಷ್ಟು ಕಡಿಮೆ (27.8 ಡಿಗ್ರಿ ಸೆಲ್ಸಿಯಸ್) ತಾಪಮಾನ ದಾಖಲಾಗಿದೆ.
ಉತ್ತರ ಒಳನಾಡಿನಲ್ಲಿ ಚಳಿಯ ವಾತಾವರಣ ಹೆಚ್ಚಾಗುತ್ತಿದೆ. ಬೀದರ್‌ನಲ್ಲಿ ಅತೀ ಕನಿಷ್ಠ ತಾಪಮಾನ ದಾಖಲಾಗಿದ್ದರೆ, ವಿಜಯಪುರ 11 ಡಿಗ್ರಿ ಸೆಲ್ಸಿಯಸ್, ಧಾರವಾಡ 14, ಹಾವೇರಿ ಹಾಗೂ ರಾಯಚೂರಿನಲ್ಲಿ ತಲಾ 13 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಹೀಗಾಗಿ ಈ ಭಾಗದ ಜಿಲ್ಲೆಗಳಲ್ಲಿ ಬೆಳಗ್ಗೆ ಮಂಜು ಕವಿದ ವಾತಾವರಣವಿದ್ದರೆ, ಮಧ್ಯಾಹ್ನದ ವೇಳೆಗೆ ಎಲ್ಲ ಕಡೆಗಳಲ್ಲಿ ಒಣ ಹವೆ ಉಂಟಾಗುತ್ತಿದೆ.
undefined
ಈ ಬಾರಿ ಭಾರೀ ಚಳಿ, ಮೂರು ರಾಜ್ಯಗಳಿಗೆ ಅಪಾಯ!
ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿ ನ.14ರವರೆಗೆ ಒಣ ಹವೆ ಮುಂದುವರಿಯಲಿದೆ. ಕೆಲವು ಕಡೆಗಳಲ್ಲಿ ಸಾಮಾನ್ಯ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಹಾಗು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನ.12ರಿಂದ 14ರವರೆಗೆ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ಮಳೆ ಬೀಳುವ ಸಾಧ್ಯತೆ ಇದೆ.