ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ಎಚ್ಚರಿಕೆ ಏನು..?

By Web DeskFirst Published Nov 23, 2018, 7:04 AM IST
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಇಂದಿನ ಸ್ಥಿತಿಗೆ ನೀವೇ ಕಾರಣ ಎಂದು ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಶೀಘ್ರ ಕಬ್ಬು ಬಾಕಿ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ. 

ಬೆಂಗಳೂರು :  ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಬಾಕಿ ಮೊತ್ತಕ್ಕೆ ಸಂಬಂಧಿಸಿದಂತೆ ಉದ್ಭವವಾಗಿರುವ ಸಮಸ್ಯೆಯನ್ನು ರೈತರೊಂದಿಗೆ ಚರ್ಚಿಸಿ ಸಮನ್ವಯ ಸಾಧಿಸಿಕೊಂಡು 15 ದಿನಗಳಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ರಾಜ್ಯ ಸರ್ಕಾರ ತಾಕೀತು ಮಾಡಿದೆ.

ಮುಂದಿನ ತಿಂಗಳು 10ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅಷ್ಟರೊಳಗೆ ನಿಮ್ಮ ಕಾರ್ಖಾನೆ ವ್ಯಾಪ್ತಿಯ ರೈತರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮೂಲಕ ಅಧಿವೇಶನ ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕು. ಒಂದು ವೇಳೆ ಸಮಸ್ಯೆ ಬಗೆಹರಿಯದೆ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರೆ ಆಗ ಸಕ್ಕರೆ ಕಾರ್ಖಾನೆ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ಗುರುವಾರ ಮಧ್ಯಾಹ್ನ ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲಿಕರೊಂದಿಗೆ ಸುದೀರ್ಘ ಸಭೆ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಬ್ಬು ಬೆಳೆಗಾರರು ಪ್ರಸ್ತಾಪಿಸಿದ್ದ ಸಮಸ್ಯೆಯನ್ನು ಕಾರ್ಖಾನೆಗಳ ಮಾಲಿಕರ ಹೆಗಲಿಗೆ ವರ್ಗಾಯಿಸಿದ್ದಾರೆ. ಇವತ್ತಿನ ಪರಿಸ್ಥಿತಿಗೆ ನೀವೇ ಹೊಣೆಯೇ ಹೊರತು ಸರ್ಕಾರವಲ್ಲ ಎಂಬ ಖಡಕ್‌ ಮಾತು ಹೇಳಿದ್ದಾರೆ.

ರೈತರೊಂದಿಗೆ ಚರ್ಚಿಸಿ ಮತ್ತು ಕಾರ್ಖಾನೆಯ ವಹಿವಾಟುಗಳನ್ನು ಪರಿಶೀಲಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಾಗಿ ಸಕ್ಕರೆ ಕಾರ್ಖಾನೆ ಮಾಲಿಕರು ಮುಖ್ಯಮಂತ್ರಿಗಳಿಗೆ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿ, ಕಳೆದೊಂದು ವಾರದಿಂದ ಉದ್ಭವಿಸಿದ್ದ ಕಬ್ಬು ಬೆಳೆಗಾರರ ಪ್ರತಿಭಟನೆ ಮತ್ತು ಆಕ್ರೋಶವನ್ನು ಮುಖ್ಯಮಂತ್ರಿಗಳು ಸಕ್ಕರೆ ಕಾರ್ಖಾನೆ ಮಾಲಿಕರೊಂದಿಗೆ ನಡೆಸಿದ ಸಭೆ ಶಮನಗೊಳಿಸಬಹುದು ಎಂಬ ನಿರೀಕ್ಷೆ ಮೂಡಿದೆ.

ಪ್ರತಿ ರೈತನ ಜೊತೆ ಒಪ್ಪಂದ:  ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮುಂದಿನ ವರ್ಷದಿಂದ ಕಬ್ಬು ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಮರುಕಳಿಸದಂತೆ ಸರ್ಕಾರದ ಮಾರ್ಗಸೂಚಿಗಳಂತೆ ಪ್ರತಿ ರೈತನ ಜತೆ ಕಾರ್ಖಾನೆ ಮಾಲಿಕರು ಲಿಖಿತವಾಗಿ ದ್ವಿಪಕ್ಷೀಯ ಒಪ್ಪಂದವೊಂದನ್ನು ಮಾಡಿಕೊಳ್ಳಬೇಕು. ಕಬ್ಬು ನಿಯಂತ್ರಣ ಮಂಡಳಿಯ ನಿರ್ಣಯಗಳಂತೆ ಆದಾಯ ಹಂಚಿಕೆ ಸೂತ್ರವನ್ನು ಅನುಸರಿಸಬೇಕು ಎಂದೂ ಸೂಚಿಸಿದರು.

ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ. ಯಾವುದೇ ರೀತಿಯ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕಟಾವಿಗೆ ಸಿದ್ಧವಿರುವ ಕಬ್ಬನ್ನು ಅರೆಯಲು ರೈತರೊಂದಿಗೆ ಕ್ರಮಬದ್ಧ ಒಪ್ಪಂದ ಮಾಡಿಕೊಂಡು, ಸಮನ್ವಯ ಸಾಧಿಸಿ ಕಬ್ಬು ಅರೆಯುವ ಪ್ರಕ್ರಿಯೆ ಮುಂದುವರಿಸಬೇಕು. ರೈತರಿಗೆ ತೂಕ ಮತ್ತು ಇಳುವರಿ ಪ್ರಮಾಣ ನಿಗದಿಯಲ್ಲಿ ಪಾರದರ್ಶಕತೆ ತರಲು ಸರ್ಕಾರದ ಸುತ್ತೋಲೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.

ಸಕ್ಕರೆ ಕಾರ್ಖಾನೆ ಮಾಲಿಕರು ರೈತರ ಜತೆ ವಿಶ್ವಾಸದ ಮೇಲೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಆ ಒಪ್ಪಂದದಂತೆ ಮೊತ್ತ ನೀಡುವುದು ಆಯಾ ಕಾರ್ಖಾನೆಗಳ ಬದ್ಧತೆ. ಕಾರ್ಖಾನೆ ಮಾಲಿಕರು ವ್ಯವಹಾರದಲ್ಲಿ ಏರುಪೇರಾದರೆ ನಿಭಾಯಿಸುವ ಸಾಮರ್ಥ್ಯ ಇರುತ್ತದೆ. ಆದರೆ, ರೈತರಿಗೆ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೆ ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ರೈತರಿಗೆ ನೀಡಿದ ಆಶ್ವಾಸನೆಯಂತೆ ಸೂಕ್ತ ದರ ನೀಡಬೇಕು ಎಂದು ಹೇಳಿದರು.

ಪ್ರತಿ ವರ್ಷ ಉದ್ಭವವಾಗುವ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲಿಕರ ನಡುವಿನ ಸಮಸ್ಯೆಗೆ ಕಡಿವಾಣ ಹಾಕಲು ಮುಂದಿನ ದಿನದಲ್ಲಿ ಎಫ್‌ಆರ್‌ಪಿ ದರದನ್ವಯವೇ ಹಣ ಪಾವತಿಸಬೇಕು. ರೈತನೊಂದಿಗೆ ಕಾರ್ಖಾನೆಗಳು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕು. ಹೊಸದಾಗಿ ಕಬ್ಬು ಅರಿಯುವಿಕೆ ಆರಂಭವಾಗುವ ಪ್ರಸಕ್ತ ಹಂಗಾಮಿನಲ್ಲಿ ದರ ನಿಗದಿ ಕುರಿತು ಯಾವುದೇ ಗೊಂದಲಗಳಾಗಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಮಾಜಿ ಸಚಿವರಾದ ಎಸ್‌.ಆರ್‌.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಮುರುಗೇಶ್‌ ನಿರಾಣಿ, ಉಮೇಶ್‌ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ 31 ಕಾರ್ಖಾನೆಗಳ ಮಾಲಿಕರು ಹಾಗೂ ಇತರರು ಭಾಗವಹಿಸಿದ್ದರು.

click me!