
ಬೆಂಗಳೂರು (ಜೂ.4): ಮುಖ್ಯಮಂತ್ರಿ ಖುರ್ಚಿ ನನ್ನದಲ್ಲ, ಈ ನಾಡಿನ ಜನರದ್ದು, ಕಾಂಗ್ರೆಸ್(Congress) ಕಾರ್ಯಕರ್ತರದ್ದು. ರಾಜಕೀಯದ ಅಪಾರ ಅನುಭವ ಭಂಡಾರಲ್ಲಿ ಮುಳುಗೆದ್ದಿರುವ ನಾನು ರಾಜ್ಯದ ಸಮಗ್ರ ಅಭಿವೃದ್ದಿಗೆ, ನಾಡಿನ ಜನರ ಕಲ್ಯಾಣಕ್ಕೆ ಹೊಸ ಅವಕಾಶಗಳನ್ನು ಹುಡುಕಿ ಕೆಲಸ ಮಾಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(CM DK Shivakumar) ಹೇಳಿದ್ದಾರೆ.
ಅಲ್ಲದೆ, ನಮ್ಮ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಅವರ ನಿರ್ಧಾರ ಯಾವುದೂ ಇರುವುದಿಲ್ಲ. ಎಲ್ಲವೂ ಸಚಿವ ಸಂಪುಟದಲ್ಲಿ ಚರ್ಚೆಯಾಗಿ ಕೈಗೊಳ್ಳುವ ಸಾಮೂಹಿಕ ನಿರ್ಧಾರಗಳಾಗಿರುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ವಿಧಾನಸೌಧ(Vidhan soudha)ದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ 13 ಜನ ಹೊಸ ಸಂಪುಟ ಸಹೋದ್ಯೋಗಿಗಳೊಂದಿಗೆ ಮೊದಲ ಸಂಪುಟ ಸಭೆ ನಡೆಸಿದರು. ಬಳಿಕ ಮೊದಲ ಸುದ್ದಿಗೋಷ್ಠಿಯನ್ನುದ್ದೇಶಿಸಿ ನಾಡಿನ ಅಭಿವೃದ್ಧಿಗೆ ತಮ್ಮ ಆಡಳಿತ ವೈಖರಿ, ಗುರಿ, ಆದ್ಯತೆ, ಯೋಜನೆಗಳನ್ನು ವಿವರಿಸಿದರು.
ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿರುತ್ತದೆ. ಉದ್ಯೋಗ, ಶಿಕ್ಷಣ ಸೇರಿ ಬೇರೆ ಬೇರೆ ಕಾರಣಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆದು ಸ್ಥಳೀಯವಾಗಿಯೇ ಉದ್ಯೋಗ, ಉತ್ತಮ ಶಿಕ್ಷಣ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರೈತರು, ಕೂಲಿ ಕಾರ್ಮಿಕರು, ಯುವಕರು ಸೇರಿ ಎಲ್ಲ ವರ್ಗದ ಜನರಿಗೂ ಬೇರೆ ಬೇರೆ ಕಾರ್ಯ ಯೋಜನೆಗಳನ್ನು ರೂಪಿಸಲು ಕಳೆದ ಆರು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಒಂದೊಂದನ್ನೇ ಮಾಡುತ್ತೇನೆ ಎಂದರು.
ಅಪಾರ ವಿಶ್ವಾಸವಿಟ್ಟು ಜನರು ನಮಗೆ ಅಧಿಕಾರ ನೀಡಿದ್ದಾರೆ. ಹಿಂದೆ ಸಾಕಷ್ಟು ಟೀಕೆ, ಟಿಪ್ಪಣಿಗಳು ಬಂದಿವೆ. ಟೀಕೆಗಳು ಸಾಯುತ್ತವೆ, ನಾವು ಮಾಡುವ ಕೆಲಸಗಳು ಮಾತ್ರ ಉಳಿಯುತ್ತವೆ. 1985ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ 1989ರಲ್ಲಿ ವಿಧಾನಸಭೆಗೆ ಮತ್ತೆ ನಿಂತು ಗೆದ್ದು ಈಗ ಮುಖ್ಯಮಂತ್ರಿ ಸ್ಥಾನದ ವರೆಗೆ ಬಂದಿದ್ದೇನೆ. ಚಿಕ್ಕವಯಸ್ಸಿನಲ್ಲೇ ಅಧಿಕಾರ ಹಿಡಿದವನು. ಇಲ್ಲಿಯವರೆಗೂ ಬೆಳೆದು ಅಪಾರ ಅನುಭವ ಭಂಡಾರದಲ್ಲಿ ಮುಳುಗಿದ್ದೇನೆ. ಇದರ ನಡುವೆ ತಿಹಾರ್ ಜೈಲಿಗೂ ಹೋಗಬೇಕಾದ ಬಲೆಯಲ್ಲೂ ಬಿದ್ದು ಬಂದಿದ್ದೇನೆ. ಇದೆಲ್ಲದರ ನಡುವೆ ನನ್ನ ಆತ್ಮವಿಶ್ವಾಸ ಬಿಡಲಿಲ್ಲ. ರಾಜ್ಯದ ಜನಸೇವೆ, ಅಭಿವೃದ್ಧಿ ಯೋಜನೆಗಳ ಮೂಲಕ ಸಾಕ್ಷಿಗುಡ್ಡೆ ಬಿಟ್ಟು ಹೋಗುವ ಕೆಲಸ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿಯಾದ ನನ್ನನ್ನೂ ಒಳಗೊಂಡು ಮೊದಲ ಹಂತದ 14 ಜನರ ಸಚಿವ ಸಂಪುಟ ಕುವೆಂಪು ಅವರು ಹೇಳಿರುವ ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಸಾಕಷ್ಟು ಅನುಭವಿಗಳು, ಹಿರಿಯರೇ ಸಂಪುಟದಲ್ಲಿದ್ದಾರೆ. ಎಲ್ಲರ ಸಹಕಾರ, ಸಲಹೆ, ಅಭಿಪ್ರಾಯಗಳೊಂದಿಗೆ ಉತ್ತಮ ಆಡಳಿತ ಮತ್ತು ಬಲಿಷ್ಠ ನಾಯಕತ್ವ ನೀಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ವೈಯಕ್ತಿಕವಾಗಿ ಜಾತಿ, ಧರ್ಮದ ವಿಚಾರಗಳು ಏನೇ ಇದ್ದರೂ, ಮಾನವೀಯತೆಯಲ್ಲಿ ಅಪಾರ ನಂಬಿಕೆಯುಳ್ಳವನು ನಾನು. ನಾಡಿನ ಅಭಿವೃದ್ಧಿ, ಜನರ ಕಲ್ಯಾಣಕ್ಕಾಗಿ ನನ್ನ ಎಲ್ಲ ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಅಧಿಕಾರ ನಡೆಸುತ್ತೇನೆ. ಇದಕ್ಕೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.
ನಮ್ಮ ಸರ್ಕಾರದಿಂದ ಯಾವುದೇ ತಪ್ಪುಗಳಾದರೆ ಪತ್ರಿಕೆಗಳು, ಮಾಧ್ಯಮಗಳು ಅದನ್ನು ತಮ್ಮ ಬರವಣಿಗೆ, ವರದಿ, ಸುದ್ದಿ ಪ್ರಸಾರದ ಮೂಲಕ ಎತ್ತಿ ಹಿಡಿಯಿರಿ. ನಾವು ತಪ್ಪು ತಿದ್ದಿಕೊಂಡು ಸರಿದಾರಿಯಲ್ಲಿ ನಡೆಯಲು ಅದು ಸಹಕಾರಿಯಾಗಲಿದೆ. ಆದರೆ, ತಮ್ಮ ವೃತ್ತಿಧರ್ಮ, ಆತ್ಮಸಾಕ್ಷಿಗೆ ವಿರುದ್ಧವಾಗಿ ಅನಗತ್ಯ ಟೀಕೆ, ಸುದ್ದಿಗಳನ್ನು ಮಾಡಬೇಡಿ ಎಂದು ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮದವರಿಗೆ ಮನವಿ ಮಾಡಿದರು.
ಜನರು ಪತ್ರಿಕೆ, ಮಾಧ್ಯಮಗಳನ್ನು ನಂಬುತ್ತಾರೆ. ನಿಮ್ಮ ಯಾವುದೇ ಸುದ್ದಿ, ವರದಿಗಳನ್ನು ಸರ್ಕಾರ, ಮುಖ್ಯಮಂತ್ರಿಯ ವಿಶ್ವಾಸಕ್ಕೆ ಮಾಡಬೇಡಿ. ಜನರ ವಿಶ್ವಾಸಗಳಿಸಿ, ಆತ್ಮವಿಶ್ವಾಸಕ್ಕೆ ವಿರುದ್ಧವಾಗಿ ಯಾವುದೂ ಮಾಡಬೇಡಿ ಎಂದರು.
ನಾನು ಮೊದಲಿನಿಂದಲೂ ಹೇಳುತ್ತಿದ್ದೆ. ಶುಭಗಳಿಗೆ, ಶುಭ ಮುಹೂರ್ತ ಬರುತ್ತದೆ ಅಲ್ಲಿಯವರೆಗೆ ಕಾಯಿರಿ ಅಂತ ಹೇಳುತ್ತಿದ್ದೆ. ಆ ಶುಭಗಳಿಗೆ ಬುಧವಾರ ಸಂಜೆ 4.15 ನಿಮಿಷಕ್ಕೆ ಬಂತು. ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಇದಕ್ಕೆ ಇಡೀ ರಾಜ್ಯದ ಜನ ಸಾಕ್ಷಿಯಾಗಿದ್ದಾರೆ. ಹಿಂದಿನ ಹೆಜ್ಜೆ ಮರೆತವನು ಮುಂದಿನ ಹೆಜ್ಜೆ ಇಡಲಾರ ಎನ್ನುವುದು ನನ್ನ ನಂಬಿಕೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯ ಅಭಿವೃದ್ಧಿಗೆ, ಜನರ ಕಲ್ಯಾಣಕ್ಕೆ ಹೊಸ ಕೆಲಸ, ಹೊಸ ಅವಕಾಶಗಳನ್ನು ಹುಡುಕಿ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ