ಸಾಲ ಮನ್ನಾಕ್ಕೆ ನೆರವು ಕೇಳಿ ಕೇಂದ್ರಕ್ಕೆ ರಾಜ್ಯದಿಂದ ಸರ್ವಪಕ್ಷ ನಿಯೋಗ: ಸಿಎಂ

Published : Sep 05, 2026, 05:58 AM IST
DK Shivakumar in Draought Area

ಸಾರಾಂಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಗಲಕೋಟೆಯ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಬೆಳೆ ಹಾನಿ ವೀಕ್ಷಿಸಿದರು. ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ ಬಿಜೆಪಿಗೆ, ಕೇಂದ್ರದಿಂದಲೇ ಸಾಲ ಮನ್ನಾ ಮಾಡಿಸಲು ದೆಹಲಿಗೆ ಬರುವಂತೆ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು/ಬಾಗಲಕೋಟೆ

ಶುಕ್ರವಾರ ಬಾಗಲಕೋಟೆ ಪ್ರವಾಸ ಕೈಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬರಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಬಾಗಲಕೋಟೆಯಲ್ಲಿ ರೈತರ ಜಮೀನಿಗೆ ತೆರಳಿ ಬೆಳೆ ವೀಕ್ಷಣೆ ಮಾಡಿದರು.

ಸಮೀಕ್ಷೆಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತರ ಐದು ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಡಿರುವ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದರು.

ಸಾಲಮನ್ನಾ ಬೇಡಿಕೆ ಸರಿಯಿದೆ. ರೈತರ ಸಾಲ ಮನ್ನಾಗೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯುತ್ತೇವೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದಿಂದ ಸಾಲಮನ್ನಾ ಮಾಡಿಸುವ ಜವಾಬ್ದಾರಿ ಹೊರಬೇಕು. ಬರಗಾಲದ ಬಗ್ಗೆ ಪ್ರಧಾನಮಂತ್ರಿಗಳೇ ಹೇಳಿದ್ದು, ಕೇಂದ್ರ ಸರ್ಕಾರ ಸಾಲಮನ್ನಾ ಮಾಡಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಇತರೆ ನಾಯಕರು ನಮ್ಮೊಂದಿಗೆ ದೆಹಲಿಗೆ ಬಂದು ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಹಾಗೂ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಬೇಕು. ಬರಗಾಲಕ್ಕೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕು. ಈ ಬಗ್ಗೆಯೂ ಮನವಿ ಮಾಡಬೇಕು ಎಂದು ಹೇಳಿದರು.

ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಐದು ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಡಿರುವ ಆಗ್ರಹಕ್ಕೆ ತಿರುಗೇಟು ನೀಡಿದರು. ಬರ ಎದುರಿಸುತ್ತಿರುವ ರೈತರಿಗೆ ಏನು ಸಹಾಯ ಮಾಡಬೇಕೆಂದು ಚರ್ಚೆ ಮಾಡುತ್ತಿದ್ದೇನೆ. ಕೇಂದ್ರ ಸರ್ಕಾರವೂ ರೈತರ ಸಹಾಯಕ್ಕೆ ಬರಬೇಕು. ಇದರಲ್ಲಿ ಬಿಜೆಪಿಗರ ಜವಾಬ್ದಾರಿಯೂ ಇದ್ದು, ಅವರು ಕೇಂದ್ರ ಸರ್ಕಾರಕ್ಕೆ ಹೇಳಿ ರೈತರ ಸಾಲ ಮನ್ನಾ ಮಾಡಿಸಬೇಕು ಎಂದು ಹೇಳಿರು.

ಬಾಗಲಕೋಟೆಯಲ್ಲಿ 4 ಕಡೆ ಬರ ವೀಕ್ಷಣೆ ಮಾಡಿದ್ದೇನೆ. ಸೂರ್ಯಕಾಂತಿ, ಈರುಳ್ಳಿ, ಮೆಣಸಿನಕಾಯಿ ಯಾವುದೇ ಬೆಳೆ ಬಂದಿಲ್ಲ. ಯಾವುದೇ ರೈತರಿಗೆ ಬೆಳೆ ಸಿಕ್ಕಿಲ್ಲ. ಬರ ನಿರ್ವಹಿಸಲು ಏನು ಮಾಡಬೇಕೆಂದು ನಾನು ಜನರು, ಅಧಿಕಾರಿಗಳು, ಶಾಸಕರನ್ನು ಎಲ್ಲರನ್ನೂ ಕೇಳಿದ್ದೇನೆ. ಎಲ್ಲ ಕಡೆಗೆ ಬರವೀಕ್ಷಣೆ ನಡೆಯುತ್ತಿದೆ ಎಂದು ಹೇಳಿದರು.

ಬರ ಪರಿಹಾರದಲ್ಲಿ ಕೆಲವೊಂದಿಷ್ಟು ಮಾನದಂಡಗಳು ರೈತರಿಗೆ ತೊಂದರೆಯಾಗುತ್ತಿರುವ ವಿಚಾರ ಪ್ರಸ್ತಾಪಿಸಿ, ರಾಜ್ಯದಲ್ಲಿ ಕೆಲವೆಡೆ ಹಸಿರು ಇದ್ದರೂ ಬೆಳೆಯಿಲ್ಲ. ಕೆಲವು ಕಡೆ ಬೆಳೆ ಒಣಗಿವೆ. ನಿಗದಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ. ಕೆಲವರು ಈ ಬಾರಿಯ ಪರಿಸ್ಥಿತಿ ಕಂಡು ಹೊಲದಲ್ಲಿ ಬೀಜವನ್ನೇ ಹಾಕಿಲ್ಲ. ಇನ್ನೂ ಕೆಲವರು ಉಳುಮೆ ಮಾಡಲು ಹೋಗಿ ಹಾನಿ ಅನುಭವಿಸಿದ್ದಾರೆ. ಈ ಸಂಬಂಧ ನಾನು ವರದಿ ತಯಾರಿಸಿ ಕಳಿಸಿದ್ದೇವೆ. ಜೊತೆಗೆ ಆದಷ್ಟು ಬೇಗ ಎರಡನೇ ಪಟ್ಟಿ ಮಾಡುತ್ತೇವೆ. ಈಗಾಗಲೇ ನಮ್ಮ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನೆ ಮಾಡುತ್ತಿದ್ದಾರೆ. ನಮ್ಮ ಉಪಮುಖ್ಯಮಂತ್ರಿ ಸಹ ದಕ್ಷಿಣ ಭಾಗದಲ್ಲಿ ಹೋಗಿ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.

ಫಸಲ್ ಬಿಮಾ ಯೋಜನೆಯ ಬೆಳೆವಿಮೆ ಹಗರಣದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಬೆಳೆ ವಿಮೆ ಪರಿಹಾರದಲ್ಲಿ ಮಧ್ಯವರ್ತಿಗಳ ಹಾವಳಿ ಇದೆ. ರಾಜ್ಯಾದ್ಯಂತ ದೊಡ್ಡ ಜಾಲವೇ ಇದೆ. ಈ ಬಗ್ಗೆ ಒಂದು ವರದಿ ತೆಗೆದುಕೊಂಡು ಬೆಂಗಳೂರಿನಲ್ಲಿ ಸಭೆ ಮಾಡಲಿದ್ದೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

State News Live: ಸಾಲ ಮನ್ನಾಕ್ಕೆ ನೆರವು ಕೇಳಿ ಕೇಂದ್ರಕ್ಕೆ ರಾಜ್ಯದಿಂದ ಸರ್ವಪಕ್ಷ ನಿಯೋಗ - ಸಿಎಂ
ಕರ್ನಾಟಕ ಜನತೆಗೆ ಬಸ್ ದರ ಏರಿಕೆ ಶಾಕ್? ಶೀಘ್ರದಲ್ಲೇ ಟಿಕೆಟ್ ಬೆಲೆ ಹೆಚ್ಚಳ ಸೂಚಿಸಿದ ಸಚಿವ