
ಕನ್ನಡಪ್ರಭ ವಾರ್ತೆ ಬೆಂಗಳೂರು
ಭವಿಷ್ಯದ ಆಡಳಿತಗಾರರನ್ನು (ಅಧಿಕಾರಿಗಳು) ನೇಮಕ ಮಾಡುವ ಹುದ್ದೆಯ ಉಸ್ತುವಾರಿಯಲ್ಲಿದ್ದ ನೀವು ಇಂಥ ಕೃತ್ಯದಲ್ಲಿ ಭಾಗಿಯಾಗಿದ್ದೀರಿ. ಭವಿಷ್ಯದಲ್ಲಿ ಯಾವ ಸಮಾಜವನ್ನು ನಾವು ನಿರೀಕ್ಷಿಸಲು ಸಾಧ್ಯ? ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ಹುದ್ದೆ ಸೇರಿ ವಿವಿಧ ನೇಮಕಾತಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹೀಗೆ ಪ್ರಶ್ನಿಸುವ ಮೂಲಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಸಾಹುಕಾರ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ, ಸಾಹುಕಾರ್ ಅವರು ಕೆಪಿಎಸ್‌ಸಿ ಅಧ್ಯಕ್ಷರಂಥ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದರು. ಅವರು ಇಂತಹ ವಂಚನೆಯಲ್ಲಿ ಹೇಗೆ ಪಾಲ್ಗೊಳ್ಳಲು ಸಾಧ್ಯ? ಅವರ ನಡತೆ ಹೀಗೇಕಿದೆ, ನೇಮಕಾತಿ ಅಕ್ರಮದಲ್ಲಿ ತೊಡಗುವ ಮೂಲಕ ಅನರ್ಹರನ್ನು ವ್ಯವಸ್ಥೆ ಒಳಗೆ ತಂದರೆ ಅವರು ನಾಳಿನ ಆಡಳಿತಗಾರರಾಗುತ್ತಾರೆ? ಅವರಿಂದ ಭವಿಷ್ಯದಲ್ಲಿ ಯಾವ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು ನೆನಪಿಡಬೇಕು ಎಂದು ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೆ, ಸರ್ಕಾರವು ಒಂದಷ್ಟು ದಾಖಲೆ ನೀಡಿದೆ. ದುಷ್ಕೃತ್ಯದಲ್ಲಿ ಸಾಹುಕಾರ್ ಪಾತ್ರ ಪತ್ತೆಯಾಗಿದೆ ಹಾಗೂ ಅವರು ಸಹ ಪಡೆದಿದ್ದಾರೆ (ಹಣ). ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ವಾಸ್ತವಿಕ ವಿಚಾರವನ್ನು ಅವರು ಮರೆಮಾಚಿದ್ದಾರೆ. ಅದು ಬೇರೆಯದೇ ಅಪರಾಧ ಪ್ರಕರಣವಾಗಿರಬಹುದು. ಇಂತಹ ಕೃತ್ಯದಲ್ಲಿ ತೊಡಗಿರುವ ಸಾಹುಕಾರ್ ಯಾವ ಮಟ್ಟಕ್ಕಾದರೂ ಇಳಿಯಬಲ್ಲರು ಎಂದು ಪೀಠ ಮಾರ್ಮಿಕವಾಗಿ ನುಡಿಯಿತು.
ಸಾಹುಕಾರ್ ಪರ ವಕೀಲರು, ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಗಳ ಪರಿಶೀಲನೆ, ಅಂಕ ನಿಗದಿ ವಿಚಾರಗಳು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರ ವ್ಯಾಪ್ತಿಗೆ ಬರುತ್ತವೆ. ಪರೀಕ್ಷಾ ನಿಯಂತ್ರಕರು ಮತ್ತು ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿ ಆರೋಪಗಳು ಕೇಳಿ ಬಂದಿವೆ. ಸಾಹುಕಾರ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಅವರಿಗೆ ಕೆಪಿಎಸ್‌ಸಿ ಕಚೇರಿ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿಸಿದರು.
ಸಾಹುಕಾರ್ ಅವರ ಪುತ್ರಿ ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು. ಕೆಪಿಎಸ್‌ಸಿ ಕಾಯ್ದೆ, ನಿಯಮ ಅಥವಾ ಕೈಪಿಡಿ ಅಡಿ ಕೆಪಿಎಸ್‌ಸಿ ಆಡಳಿತಗಾರರ ಪುತ್ರಿ ಪರೀಕ್ಷೆಗೆ ಹಾಜರಾಗಬಾರದು ಎಂದೇನಿಲ್ಲ. ಅದನ್ನು ಬಹಿರಂಗಪಡಿಸುವ ಅಗತ್ಯ ಸಂದರ್ಶನದಲ್ಲಿ ಬರುತ್ತದೆ. ಜಾರಿ ನಿರ್ದೇಶನಾಲಯ(ಇ.ಡಿ) ಶೋಧದ ವೇಳೆಯೂ ಸಾಹುಕಾರ್ ಮನೆಯಲ್ಲಿ ಯಾವುದೇ ಆಕ್ಷೇಪಾರ್ಹ ದಾಖಲೆ ಪತ್ತೆಯಾಗಿಲ್ಲ. ಸಂಜೆ ನಾಲ್ಕು ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿಯು ಮಧ್ಯಾಹ್ನ ಒಂದು ಗಂಟೆಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಅವರು ಬದ್ಧ. ತನಿಖೆಗೆ ಸಹಕರಿಸಲಿದ್ದಾರೆ. ಹೀಗಾಗಿ, ಸಾಹುಕಾರ್ ಅವರಿಗೆ ರಕ್ಷಣೆ ಒದಗಿಸಬೇಕು ಎಂದರು.
ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಮಧ್ಯಂತರ ರಕ್ಷಣೆಯನ್ನು ಒದಗಿಸಬಾರದು ಎಂದು ಮನವಿ ಮಾಡಿದರು. ಅಂತಿಮವಾಗಿ ನ್ಯಾಯಪೀಠ, ಕೆಪಿಎಸ್‌ಸಿ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿಗೆ ಸಾಹುಕಾರ್ ಅವರ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಕೊನೆಯ ಬಾರಿಗೆ ಕಾಲಾವಕಾಶ ನೀಡಿ, ಸೋಮವಾರಕ್ಕೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ