ಎಸ್‌ಸಿ, ಎಸ್ಟಿ ಅನುದಾನದ ಬಗ್ಗೆ ಖಡಕ್‌ ಎಚ್ಚರಿಕೆ ಕೊಟ್ಟ ಸಿಎಂ ಬಿಎಸ್‌ವೈ

By Kannadaprabha NewsFirst Published Jul 3, 2021, 8:10 AM IST
Highlights

* ಎಸ್‌ಸಿ, ಎಸ್‌ಟಿ ವರ್ಗದ ಅಭಿವೃದ್ದಿಗೆ 26000 ಕೋಟಿ ಅನುದಾನ
* ಮೀಸಲಿಟ್ಟಹಣ ಅದಕ್ಕೇ ಖರ್ಚು ಮಾಡಿ
* ಹಣ ದುರ್ಬಳಕೆಯಾಗಿದ್ದಲ್ಲಿ ಶಿಸ್ತು ಕ್ರಮ
 

ಬೆಂಗಳೂರು(ಜು.03): ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಯಾವುದೇ ಕಾರಣಕ್ಕೂ ಬೇರೆಡೆಗೆ ಬಳಕೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್‌ ಸಭೆ ಬಳಿಕ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಸಾಕಷ್ಟುಹಣವನ್ನು ನೀಡಿದೆ. ಒಂದು ರು. ಸಹ ಬೇರೆ ಇಲಾಖೆಗೆ ವರ್ಗಾವಣೆಯಾಗಲು ಬಿಡುವುದಿಲ್ಲ. ಅಗತ್ಯವಿದ್ದರೆ ಹೆಚ್ಚಿನ ಹಣವನ್ನು ನೀಡಲು ಸಿದ್ಧವಿದ್ದೇವೆ. ಈಗ ಇರುವ ಅನುದಾನವನ್ನು ಎಲ್ಲಿಯೂ ಬಳಕೆ ಮಾಡಿಲ್ಲ. ಯಾವುದಕ್ಕೆ ಮೀಸಲಿಟ್ಟಿದೆಯೋ ಅದಕ್ಕಾಗಿಯೇ ಖರ್ಚು ಮಾಡಬೇಕು ಎಂದು ತಾಕೀತು ನೀಡಿದರು.

ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಮೀಸಲಿಟ್ಟಹಣವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತದೆ ಎಂಬ ವದಂತಿಯಲ್ಲಿ ಸತ್ಯಾಂಶವಿಲ್ಲ. ಒಂದು ವೇಳೆ ಈ ಯೋಜನೆಗೆ ಮೀಸಲಿಟ್ಟಅನುದಾನದಲ್ಲಿ ದುರ್ಬಳಕೆಯಾಗಿದ್ದರೆ ಅಂತಹವರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು. ಅನ್ಯ ಇಲಾಖೆಗೆ ಅನುದಾನ ವರ್ಗಾವಣೆ ಮಾಡಲಾಗುತ್ತದೆ ಎಂಬುದರಲ್ಲಿ ಸತ್ಯಾಂಶವಿಲ್ಲ. ಎಲ್ಲ ಯೋಜನೆಗಳ ಬಗ್ಗೆ ಚರ್ಚಿಸಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಆರ್ಥಿಕ, ಶಿಕ್ಷಣ, ಆರೋಗ್ಯ ಹಾಗೂ ಇತರೆ ಕ್ಷೇತ್ರಗಳ ಅಭಿವೃದ್ಧಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಎಸ್ಸಿ, ಎಸ್ಟಿ ಕಲ್ಯಾಣಕ್ಕೆ ಈ ಬಾರಿ 26 ಸಾವಿರ ರು. ಕೋಟಿ ಹಂಚಿಕೆ

ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನೋಡಲ್‌ ಏಜೆನ್ಸಿ ಸಭೆ ನಡೆಸಿ ವಿವಿಧ ಇಲಾಖೆಗಳು ಸಲ್ಲಿಸಿರುವ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ ಅಗತ್ಯ ಮಾರ್ಪಾಡು ಹಾಗೂ ಶಿಫಾರಸ್ಸುಗಳೊಂದಿಗೆ ರಾಜ್ಯ ಪರಿಷತ್‌ ಅನುಮೋದನೆಗೆ ಕ್ರಿಯಾ ಯೋಜನೆ ಮಂಡಿಸಲಾಯಿತು. ಈ ಕ್ರಿಯಾ ಯೋಜನೆಯನ್ನು ಎಲ್ಲಾ ಇಲಾಖೆಗಳಿಗೆ ಕಳುಹಿಸಿ, ಆಯಾ ಇಲಾಖೆಗಳು ಅಗತ್ಯವಿದ್ದಲ್ಲಿ ಸರ್ಕಾರಿ ಆದೇಶಗಳನ್ನು ಹೊರಡಿಸಿ, ನಿಗದಿತ ಅವ​ಧಿಯೊಳಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಪ್ರಸಕ್ತ ವರ್ಷದ ಪರಿಸ್ಥಿತಿಯನ್ನು ಗಮನಿಸಿ, ಆರ್ಥಿಕ, ಶಿಕ್ಷಣ, ಆರೋಗ್ಯ ಮತ್ತು ಇತರೆ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಸಂಬಂಧಿ​ಸಿದ ಇಲಾಖೆಗಳು ಎಸ್‌ಸಿ/ಎಸ್‌ಟಿ ಜನರಿಗೆ ಅನುಕೂಲವಾಗುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಶೇ.100ರಷ್ಟುಗುರಿಯನ್ನು ಸಾ​ಧಿಸಲು ನಿರ್ದೇಶನ ನೀಡಲಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಭೂಮಿ ಹಂಚಿಕೆ ಮತ್ತಿತರ ಯಾವುದೇ ಸೌಲಭ್ಯ ವಿತರಿಸುವಾಗ ಜಂಟಿ ಹೆಸರಿನಲ್ಲಿಯೇ ನೀಡುವಂತೆ ಸೂಚಿಸಲಾಯಿತು. ಎಸ್‌ಸಿ/ ಎಸ್‌ಟಿ ಫಲಾನುಭವಿಗಳಿಗೆ ಶೌಚಾಲಯ, ಸ್ನಾನ ಗೃಹ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯದ ಪಾಲು ಸೇರಿಸಿ ನೀಡುತ್ತಿರುವ ಸಹಾಯಧನವನ್ನು ತಲಾ 15 ಸಾವಿರ ರು.ನಿಂದ 20 ಸಾವಿರ ರು.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಪರಿಶಿಷ್ಟಜಾತಿ/ ಪರಿಶಿಷ್ಟಪಂಗಡಗಳ ಜನರ ಬದುಕಿನ ಮಟ್ಟಸುಧಾರಣೆಗೆ ಪೂರಕವಾಗುವಂತೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಅ​ಧಿಕಾರಿಗಳು ಸ್ವಯಂ ಪ್ರೇರಿತರಾಗಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಮತ್ತು ಇದರಲ್ಲಿ ಯಾವುದೇ ಲೋಪವಾದರೆ ಕಾಯ್ದೆಯನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ್‌ ಸವದಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್‌. ಈಶ್ವರಪ್ಪ, ಶಾಸಕರಾದ ರಾಜುಗೌಡ, ಎನ್‌. ಮಹೇಶ್‌, ಎಸ್‌.ರಘು ಇತರರು ಉಪಸ್ಥಿತರಿದ್ದರು.

35 ಇಲಾಖೆಗಳಿಗೆ 26 ಸಾವಿರ ಕೋಟಿ

2021-22 ನೇ ಸಾಲಿನಲ್ಲಿ ಎಸ್‌ಸಿ ವರ್ಗದ ಅಭಿವೃದ್ಧಿಗೆ 18,331.54 ಕೋಟಿ ರು. ಹಾಗೂ ಎಸ್‌ಟಿ ವರ್ಗದ ಅಭಿವೃದ್ಧಿಗೆ 7673.47 ಕೋಟಿ ರು. ಸೇರಿ ಒಟ್ಟು 26,005.01 ಕೋಟಿ ರು. ವನ್ನು 35 ಇಲಾಖೆಗಳಿಗೆ ಒದಗಿಸಲಾಗಿದೆ. ರಾಜ್ಯ ಪರಿಷತ್‌ ಸಭೆಯಲ್ಲಿ ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಗಿದೆ. ಎಸ್‌ಸಿಪಿ/ ಟಿಎಸ್‌ಪಿ ನಿಯಮದನ್ವಯ ಮುಂದುವರೆದ ಕಾಮಗಾರಿಗಳಿಗೆ ಮೊದಲನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡಿ, ಅನುಷ್ಠಾನ ಮಾಡಲು ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ವಿವರಿಸಿದರು.
 

click me!