ಕೇಂದ್ರ ನಾಯಕರಿಗೆ ಮನವರಿಕೆ ಮಾಡ್ತೀನಿ : ಖಡಕ್ ಹೇಳಿಕೆ ನೀಡಿದ BSY

By Kannadaprabha NewsFirst Published Feb 1, 2021, 7:39 AM IST
Highlights

ಕೇಂದ್ರ ನಾಯಕರಿಗೆ ನಾನು ಮನವರಿಕೆ ಮಾಡಿಕೊಡುತ್ತೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಖಡಕ್ ಹೇಳಿಕೆ ನೀಡಿದ್ದಾರೆ. ಸ್ವಾರ್ಥಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದೂ ಹೇಳಿದ್ದಾರೆ. 

ಬೆಂಗಳೂರು (ಫೆ.01):  ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಈ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸ್ವಾರ್ಥಕ್ಕಾಗಿ ಮಾತನಾಡುತ್ತಾರೆ ಎಂದೂ ಅವರು ಹರಿಹಾಯ್ದಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನೀರು ನಮಗೆ ಸಿಗಲೇಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಹದಾಯಿ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ವಿಚಾರವಾಗಿ ಕೇಂದ್ರದ ನಾಯಕರಿಗೆ ಮನವರಿಕೆ ಮಾಡಿಕೊಡಲಾಗುವುದು. ಇನ್ನು ನ್ಯಾಯಾಲಯದ ತೀರ್ಪು ರಾಜ್ಯಕ್ಕೆ ಅನುಕೂಲಕರವಾಗಿಯೇ ಇದೆ ಎಂದರು.

'ನಮ್ಮ ರಾಜಕಾರಣಿಗಳ ಬೆಂಬಲದಿಂದ ಗೋವಾ ಸಿಎಂ ಮಹದಾಯಿ ಬಗ್ಗೆ ಕ್ಯಾತೆ' .

ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಅವರ ಹೇಳಿಕೆ ಸರಿಯಲ್ಲ. ಗೋವಾ ಮುಖ್ಯಮಂತ್ರಿಗಳು ಅವರ ಸ್ವಾರ್ಥಕ್ಕಾಗಿ ಮಾತನಾಡುತ್ತಿದ್ದಾರೆ. ಕೇಂದ್ರದ ನಾಯಕರಿಗೆ ಮಹದಾಯಿಗೆ ಸಂಬಂಧಿಸಿದಂತೆ ಎಲ್ಲ ವಿಚಾರಗಳನ್ನು ತಿಳಿಸಿ, ಮಹದಾಯಿ ಸಮಸ್ಯೆಯನ್ನು ಬಗೆಹರಿಸಿಕೊಂಡು ರಾಜ್ಯದ ಪಾಲಿನ ನೀರನ್ನು ಪಡೆಯುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ವಿಪಕ್ಷ ಟೀಕೆಗೆ ಸ್ವಾಗತ:  ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡುತ್ತೇವೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಪಕ್ಷದವರ ಟೀಕೆ, ಟಿಪ್ಪಣಿಗಳಿಗೆ ನಮ್ಮ ಸ್ವಾಗತವಿದೆ. ನಮ್ಮಿಂದ ತಪ್ಪುಗಳಾದರೆ ಸರಿಪಡಿಸಿಕೊಳ್ಳುತ್ತೇವೆ. ನಾಳೆ (ಸೋಮವಾರ) ವಿಧಾನಸಭೆಯ ಕಲಾಪ ಸಲಹಾ ಸಮಿತಿ ಸಭೆ ಇದೆ. ನಾಳೆಯಾದರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಭೆಯಲ್ಲಿ ಪಾಲ್ಗೊಳ್ಳಲಿ. ಅವರ ಟೀಕೆಗಳು ಏನಿದ್ದರೂ ಸ್ವಾಗತಿಸುತ್ತೇವೆ. ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರ ಕೆಲಸ ಮಾಡುತ್ತಾರೆ ಎಂದರು.

click me!